ಬೆಳಗಾವಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಅವರು ಪಂಚಮಸಾಲಿ ಸಮುದಾಯದ ಮುಖಂಡರನ್ನು ಚರ್ಚೆಗೆ ಕರೆದಿದ್ದರೂ ಅವರು ಆಗಮಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ ಕೈಗೊಳ್ಳಲು ಎಲ್ಲರಿಗೂ ಅವಕಾಶವಿದ್ದು, ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದರು.
ಇನ್ನು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ವಿಚಾರದ ಕುರಿತು ಹೇಳಿಕೆ ನೀಡಿದ ಸಿಎಂ ಬೆಳಗಾವಿಯ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಸ್ಪಷ್ಟನೆ ನೀಡಿದರು. ಪದೇ ಪದೇ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ಅವರ ಮೂರ್ಖತನ ಎಂದು ತಿರುಗೇಟು ನೀಡಿದರು.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಕೂಗಿನ ವಿಚಾರವಾಗಿ ಬಾಲಿಶವಾದ ಹೇಳಿಕೆಗಳನ್ನು ಕರ್ನಾಟಕ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Video: ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿ ಎತ್ತರಕ್ಕೆ ಜಿಗಿದು ಸಾವನ್ನಪ್ಪಿದ ಕುದುರೆ