Advertisement

ಇ-ಮೇಲ್‌ ಮೂಲಕ ಸಿದ್ಧು, ಡಿಕೆಶಿಗೆ ಬಾಂಬ್‌ ಬೆದರಿಕೆ ಸಂದೇಶ

11:55 PM Mar 05, 2024 | Team Udayavani |

ಬೆಂಗಳೂರು: ನಾವು ಕೇಳಿದಷ್ಟು ಹಣ ನೀಡದೇ ಇದ್ದರೆ ಅಂಬಾರಿ ಉತ್ಸವ ಬಸ್‌ ಉಡಾಯಿಸುತ್ತೇವೆ ಎಂದು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಮರುದಿನವೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ದುಷ್ಕರ್ಮಿಗಳು ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ರವಾನೆ ಮಾಡಿದ್ದು, ಇನ್ನೊಂದು ಟ್ರೈಲರ್‌ ತೋರಿಸಬೇಕೆ? ಎಂದು ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಂದಾದ ಮೇಲ್ಲೊಂದರಂತೆ ನಡೆಯುತ್ತಿರುವ ಉಗ್ರ ಕೃತ್ಯಗಳು ಈಗ ತೀವ್ರ ಕಳವಳಕ್ಕೆ ಕಾರಣವಾಗಿದೆ.

Advertisement

ರಾಮೇಶ್ವರಂ ಸ್ಫೋಟ ಪ್ರಕರಣ ನಡೆದ ಮರುದಿನವೇ ಈ ಬೆದರಿಕೆ ಸಂದೇಶವನ್ನು ಇವರಿಬ್ಬರ ಇ-ಮೇಲ್‌ ಖಾತೆಗೆ ಕಳುಹಿಸಲಾಗಿದ್ದು 2.5 ಮಿಲಿಯನ್‌ ಡಾಲರ್‌(21 ಕೋಟಿ) ಹಣಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಈ ಬೆದರಿಕೆ ಸಂದೇಶದ ಬಗ್ಗೆ ತನಿಖೆ ನಡೆಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಇ-ಮೇಲ್‌ ಬೆದರಿಕೆ ಪತ್ರ ಬಂದಿದೆ ಎಂಬುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಖುದ್ದು ಖಾತ್ರಿಪಡಿಸಿದ್ದು ಎರಡು ದಿನಗಳ ಹಿಂದೆ ಈ ರೀತಿ ಸಂದೇಶ ಬಂದಿದೆ. ಆದರೆ ನಾಗರಿಕರು ಆತಂಕಪಡಬೇಕಾದ ಅಗತ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಂದೇಶದಲ್ಲಿ ಏನಿದೆ ?
ತಮ್ಮ ಮೇಲ್‌ ಐಡಿಗೆ ಶಹೀದ್‌ಖಾನ್‌ 10786 ಎಂಬ ವ್ಯಕ್ತಿಯಿಂದ ಸಂದೇಶ ಬಂದಿದೆ. ಇದು ಅಸಲಿಯೋ, ನಕಲಿಯೋ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಾರ್ಚ್‌ 2ರಂದು ಮೊದಲ ಅಲರ್ಟ್‌ ಕಳುಹಿಸಲಾಗಿದೆ. ಈಗ ನಡೆದಿರುವ ಮೂವಿ ಟ್ರೇಲರ್‌ ಬಗ್ಗೆ ಏನೆಂದು ಯೋಚಿಸಿದ್ದೀರಿ, ನೀವು ನಮಗೆ 2.5 ಮಿಲಿಯನ್‌ ಡಾಲರ್‌ ಹಣ ನೀಡದೆ ಇದ್ದರೆ, ನಾವು ಕರ್ನಾಟಕದಾದ್ಯಂತ ಬಸ್‌, ರೈಲು, ಟ್ಯಾಕ್ಸಿ, ದೇವಸ್ಥಾನ, ಹೊಟೇಲ್‌ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಪ್ರಮಾಣದ ಸ್ಫೋಟ ನಡೆಸಲಾಗುತ್ತದೆ ಎಂದು ಮೊದಲ ಅಲರ್ಟ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದಾದ ಬಳಿಕ ಎರಡನೇ ಅಲರ್ಟ್‌ನಲ್ಲಿ ನಾವು ನಿಮಗೆ ಇನ್ನೊಂದು ಟ್ರೈಲರ್‌ ತೋರಿಸಬೇಕೇ, ನಾವು ನಮ್ಮ ಮುಂದಿನ ಸ್ಫೋಟದ ಗುರಿಯಾಗಿ ಅಂಬಾರಿ ಉತ್ಸವ ಬಸ್‌ ಆಯ್ಕೆ ಮಾಡಿದ್ದೇವೆ. ಅಂಬಾರಿ ಬಸ್‌ ಸ್ಫೋಟ ಬಳಿಕ ನಾವು ನಮ್ಮ ಬೇಡಿಕೆ ಏನೆಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ. ಜತೆಗೆ ನಿಮಗೆ ಈಗಾಗಲೇ ಕಳುಹಿಸಿರುವ ಸಂದೇಶದ ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ. ಮುಂದಿನ ಸ್ಫೋಟ ಎಲ್ಲಿ ಎಂಬುದನ್ನು ಟ್ವೀಟ್‌ ಮೂಲಕ ತಿಳಿಸುತ್ತೇವೆಂದು ಬೆದರಿಕೆ ಹಾಕಲಾಗಿದೆ. ಜತೆಗೆ ಮುಂದಿನ ಸಂವಹನಕ್ಕಾಗಿ ಇ-ಮೇಲ್‌ ಐಡಿಯನ್ನೂ ದುಷ್ಕರ್ಮಿಗಳು ನಮೂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next