Advertisement

ಎಚ್‌ಡಿಕೆ ಆಗಮನ; ಬುಧವಾರ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣ

06:00 AM May 20, 2018 | Team Udayavani |

ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಸರ್ಕಾರ ರಚನೆ ಕಡೆಗೂ ಕೈಗೂಡಲಿಲ್ಲ. ಮೊನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್‌.ಯಡಿಯೂರಪ್ಪ ಸುಪ್ರೀಂಕೋರ್ಟ್‌ ಆದೇಶದಂತೆ ಶನಿವಾರ ವಿಶ್ವಾಸಮತ ಗಳಿಸಬೇಕಿತ್ತು. ಅದು ಸಾಧ್ಯವಾಗದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ, ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದಾರೆ.

Advertisement

ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ 2004ರ ಬಳಿಕ ಮತ್ತೂಮ್ಮೆ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವಂತಾಗಿದೆ. ಹೊಸ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಶನಿವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚಿಸುವಂತೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ. ಅದರಂತೆ ಸೋಮವಾರ ಮಧ್ಯಾಹ್ನ 12ರಿಂದ 1.02 ಗಂಟೆ ಅವಧಿಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಚಿವ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ.

ಕಂಠೀರವದಲ್ಲಿ ಪ್ರಮಾಣ ವಚನ:
ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ನೀಡಿದ ರಾಜೀನಾಮೆ ಅಂಗೀಕರಿಸಿದ ಬಳಿಕ ರಾಜ್ಯಪಾಲರು ತಮ್ಮನ್ನು ರಾಜಭವನಕ್ಕೆ ಕರೆಸಿ ಮೇ 15ರಂದು ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ಸರ್ಕಾರ ರಚಿಸಲು ಆಹ್ವಾನ ನೀಡಿದರು. ಇದನ್ನು ಒಪ್ಪಿಕೊಂಡು ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ನನ್ನೊಂದಿಗೆ ಸಚಿವರೂ ಪ್ರಮಾಣವಚನ ಸ್ವೀಕರಿಸಲಿದ್ದು, ಎಷ್ಟು ಜನ ಇರಬೇಕು ಮತ್ತು ಯಾರು ಇರಬೇಕು ಎಂಬುದನ್ನು ಕಾಂಗ್ರೆಸ್‌ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಅಷ್ಟೊಂದು ಸಮಯ ಬೇಕಾಗಿಲ್ಲ. ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ನಮ್ಮಲ್ಲಿ ಅದಕ್ಕೆ ಬೇಕಾದ ಸದಸ್ಯಬಲವಿದೆ. ಬಿಜೆಪಿಯವರು ಆಪರೇಷನ್‌ ನಡೆಸಲು ಏನೇ ಕಸರತ್ತು ಮಾಡಿದರೂ ಅದು ಸಾಧ್ಯವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next