Advertisement

ಈ ಬಾರಿ ಯಡಿಯೂರಪ್ಪ ಸ್ಥಿತಿ ಹಿಂದಿನಂತಿಲ್ಲ

12:50 AM Jul 27, 2019 | Sriram |

ಬೆಂಗಳೂರು: ಕಠಿಣ ಸವಾಲುಗಳ ನಡುವೆ ಬಿ.ಎಸ್‌.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿಯ ಸ್ಥಿತಿ ಹಿಂದಿನಂತಿಲ್ಲ. ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ಮತ್ತು ಬಿಜೆಪಿಯಲ್ಲಿನ ಆಂತರಿಕ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳಾಗಿವೆ. ಆದ್ದರಿಂದ ಯಡಿಯೂರಪ್ಪ ಅವರಿಗೆ ಹಿಂದಿನಂತೆ ಕಠಿಣ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಕ್ರಮಕ್ಕೆ ಅಂಕುಶ ಬೀಳುವ ಸಾಧ್ಯತೆಗಳಿವೆ.

Advertisement

ಯಡಿಯೂರಪ್ಪ ಸರ್ಕಾರದ ಹಿಡಿತವನ್ನು ಬಿಜೆಪಿ ಹೈಕಮಾಂಡ್‌ ನೇರವಾಗಿ ಇಟ್ಟುಕೊಳ್ಳಲಿದೆ. ಯಡಿಯೂರಪ್ಪ ಅವರು ದಕ್ಷಿಣದ ಹೆಬ್ಟಾಗಿಲಿನಲ್ಲಿ ಬಿಜೆಪಿ ಪತಾಕೆಯನ್ನು ಹಾರಿಸಿರುವ ಪ್ರಮುಖರಾಗಿ ನಾಲ್ಕು ಬಾರಿ (ಎರಡು ಬಾರಿ ಅಲ್ಪಕಾಲಿಕ) ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದಾರೆ. ಮೂರು ವರ್ಷ 66 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಘಟನಾವಳಿಗಳು, ಹಗರಣಗಳು, ಪಕ್ಷದೊಳಗಿನ ಕಲಹಗಳು…ಮರುಕಳಿಸಬಾರದು ಎಂಬ ಉದ್ದೇಶ ಬಿಜೆಪಿ ಹೈಕಮಾಂಡ್‌ನ‌ದು.

ದೆಹಲಿಯ ನಿರ್ದೇಶನದಂತೆ ಸದಾ ನಡೆಯಲು ಯಡಿಯೂರಪ್ಪ ಅವರ ಸ್ವಭಾವಕ್ಕೆ ಅಸಾಧ್ಯ. ಎಂದಿಗೂ ತಮ್ಮದೇ ಆದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಈ ‘ಮಾಸ್‌ ಲೀಡರ್‌’ ಮುಂದಿನ ದಾರಿ ಅಷ್ಟೇನೂ ಸರಳವಾಗಿಲ್ಲ. ಅವರು ಮುಖ್ಯಮಂತ್ರಿಯಾಗಿ ಮೂರು ವರ್ಷ ಆಡಳಿತ ನಡೆಸಿದಾಗ ವಿರೋಧ ಪಕ್ಷಗಳಿಗಿಂತ ಸ್ವಪಕ್ಷೀಯರ ವೈರುಧ್ಯಗಳನ್ನು ಮಟ್ಟ ಹಾಕಲು ಕಾಲಕಳೆಯಬೇಕಾಯಿತು ಮತ್ತು ಪಟ್ಟದಿಂದ ಇಳಿಯುವಂತೆಯೂ ಆಯಿತು. ಆ ರೀತಿ ಆಗಬಾರದೆಂಬುದು ಹೈಕಮಾಂಡ್‌ ಆಶಯ.

ಯಾಕೆಂದರೆ ಈ ಬಾರಿ ಉತ್ತಮ ಆಡಳಿತ ನೀಡಬೇಕು, ರಾಜ್ಯಕ್ಕೆ ಎದುರಾಗಿರುವ ಬರದಂತಹ ಅನೇಕ ಸನ್ನಿವೇಶಗಳನ್ನು ಎದುರಿಸಬೇಕು. ಎಲ್ಲಕ್ಕೂ ಮಿಗಿಲಾಗಿ ಪ್ರಮುಖವಾದ ಎರಡು ಅಂಶಗಳನ್ನು ಅವರು ಗಮನಿಸಲೇಬೇಕು. ಅತೃಪ್ತರ ‘ಹೊರೆ’ ಮತ್ತು ಕಾನೂನಿನ ಜಿಜ್ಞಾಸೆ ಹಾಗೂ ವಿಧಾನಸಭೆಯಲ್ಲಿ ಉಳಿಸಿಕೊಳ್ಳಬೇಕಾದ ‘ಮ್ಯಾಜಿಕ್‌ ನಂಬರ್‌’. ಅದಕ್ಕಾಗಿ ಸ್ವತ: ಯಡಿಯೂರಪ್ಪ ಅವರೇ ಮಾಡಬೇಕಾದ ಕಸರತ್ತುಗಳು. ಅವುಗಳನ್ನು ಮತ್ತು ಅವರು ಮಾಡುವಂತಹ ‘ತಪ್ಪು’ಗಳನ್ನು ಹದ್ದಿನಗಣ್ಣಲ್ಲಿ ಕಾಯುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ.

ಸ್ಪೀಕರ್‌ ಅವರು ಮೂವರನ್ನು ಅನರ್ಹಗೊಳಿಸಿದ ಬಳಿಕ, ಉಳಿದ 13 ಅತೃಪ್ತರ ಬಗ್ಗೆ ಕೈಗೊಳ್ಳಬಹುದಾದ ಕಾನೂನಾತ್ಮಕ ನಿರ್ಣಯಗಳು; ಆ ಕುರಿತಾದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣ, ಎಲ್ಲಕ್ಕೂ ಮಿಗಿಲಾಗಿ ಅತೃಪ್ತರು ಕೊನೆ ಕ್ಷಣದಲ್ಲಿ ಕೈಗೊಳ್ಳಲಿರುವ ನಿರ್ಧಾರದ ಮೇಲೆ ಅವಲಂಬಿತವಾಗಿರುವ ರಾಜಕಾರಣ. ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ಆದರೆ ಅತೃಪ್ತರನ್ನು ಮತ್ತೆ ತಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಾಗಿ ನಿಲ್ಲಿಸಿ ಗೆಲ್ಲಿಸುವುದು. ಈ ನಡುವೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು. ಯಡಿಯೂರಪ್ಪ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ ಇದೆ.

Advertisement

ವಿರೋಧ ಪಕ್ಷಗಳಂತೂ ಯಡಿಯೂರಪ್ಪ ಇರುವುದು ಮುಂದಿನ ಆರು ತಿಂಗಳು, ಬಳಿಕ ಸರ್ಕಾರ ಉರುಳಿ ಹೋಗುತ್ತದೆ ಎಂದೇ ಹೇಳುತ್ತಿವೆ. ಆರು ತಿಂಗಳೊಳಗೆ ಆಗಬೇಕಾದ ಅತೃಪ್ತರ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಹಳೆಯ ಮೈತ್ರಿ ಒಟ್ಟಾಗಿ ಬಿಜೆಪಿ ವಿರುದ್ಧ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಒಂದು ಹಂತದಲ್ಲಿ ನಿರ್ಧರಿಸಿಕೊಂಡಾಗಿದೆ. ಆಗ ವಿಧಾನಸಭೆಯ ಸಂಖ್ಯಾಬಲದಲ್ಲಿ ಮತ್ತೆ ಹೆಚ್ಚು-ಕಮ್ಮಿ ಆದರೆ, ಅದಕ್ಕೇನು ಪರಿಹಾರ ಎಂಬುದನ್ನೂ ಯಡಿಯೂರಪ್ಪ ಚಿಂತಿಸಬೇಕಿದೆ. ಸರ್ಕಾರದ ರಚನೆ ಬಳಿಕ ಅತೃಪ್ತರ ಜತೆ ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಶಾಸಕರನ್ನೂ ಒಲಿಸಿಕೊಳ್ಳುವುದು ಕೂಡಾ ಅವರ ಜವಾಬ್ದಾರಿಯಾಗಿದೆ.

ಅಮಿತ್‌ ಶಾ ತಂತ್ರ

ಒಂದು ಹಂತದಲ್ಲಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅವರು ಅತೃಪ್ತರೆಲ್ಲರ ಮೇಲೆ ಕೈಗೊಳ್ಳಲಿರುವ ಕ್ರಮವನ್ನು ಆಧರಿಸಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದರು. ಆದರೆ, ಒಮ್ಮಿಂದೊಮ್ಮೆಗೆ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಯ ಅಹವಾಲನ್ನು ನೀಡಲು ರಾಜ್ಯಪಾಲರಿಗೆ ಸೂಚಿಸಿದ್ದನ್ನು ಗಮನಿಸಿದರೆ ಇಲ್ಲಿ ಅಮಿತ್‌ ಶಾ ಅವರ ಜಾಣ್ಮೆಯ ಪ್ರದರ್ಶನವಾಗುತ್ತದೆ.

ಮಂಗಳವಾರ ರಾತ್ರಿ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಮರುದಿನ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಹವಾ ಎಲ್ಲೆಡೆಯಿತ್ತು. ಆದರೆ, ಗುರುವಾರದ ಬೆಳವಣಿಗೆಗಳನ್ನು ನೋಡಿದಾಗ ರಾಜ್ಯ ಬಿಜೆಪಿ ಪಾಳಯದಲ್ಲಿ ತುಸು ಬೇಸರದ ಛಾಯೆ ಕಂಡು ಬಂತು. ಸ್ಪೀಕರ್‌ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿದಾಗ ಮತ್ತು ಇತರರ ಮೇಲಿನ ಕ್ರಮವನ್ನು ಕೆಲ ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದಾಗ ರಾಜಕೀಯ ಗಣಿತ ಬೇರೆಡೆ ಸಾಗಿದಂತೆ ಭಾಸವಾಯಿತು.

ಆದರೆ, ಇವೆಲ್ಲದರ ಹಿಂದೆ ಅಮಿತ್‌ ಶಾ ಅವರ ಲೆಕ್ಕಾಚಾರವೇ ಇದೆ. ಅದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಗಮನವನ್ನು ಬೇರೆಡೆ ಸೆಳೆಯುವುದು! ಸ್ಪೀಕರ್‌ ನಿರ್ಧಾರದ ಬಳಿಕ ಮಹಾರಾಷ್ಟ್ರದಲ್ಲಿರುವ ಅತೃಪ್ತರ ಮನಸ್ಸು ಚಂಚಲವಾಗುವ ನಿರೀಕ್ಷೆ ಬಿಜೆಪಿಗಿತ್ತು. ರಾಷ್ಟ್ರಪತಿ ಆಡಳಿತ ಅಥವಾ ಬಳಿಕ ಮತ್ತೆ ಸರ್ಕಾರ ರಚಿಸಿಕೊಳ್ಳುವ ಒಲವೂ ಅತೃಪ್ತರಿಗಿರಲಿಲ್ಲ. ಹಾಗಾಗಿ, ಸರ್ಕಾರ ರಚಿಸಿ ಅತೃಪ್ತರ ಆತಂಕ ನಿವಾರಿಸುವ ಆಶಯ ಬಿಜೆಪಿಗಿತ್ತಾದರೂ ‘ರಾಷ್ಟ್ರಪತಿ ಆಡಳಿತ ಬರಲಿದೆ ಎಂಬ ವಾತಾವರಣ ಸೃಷ್ಟಿಸಿ’ ಗಮನ ಬೇರೆಡೆ ಸೆಳೆಯುವುದೂ ಉದ್ದೇಶ ಇರಬಹುದು. ಸರ್ಕಾರ ರಚನೆ ಆಗದೇ ಇದ್ದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಮರು ಸರ್ಕಾರ ರಚನೆಗೆ ಪ್ರಯತ್ನಿಸಬಹುದು ಮತ್ತು ಅತೃಪ್ತರ ಮನಸ್ಸನ್ನು ಪರಿವರ್ತಿಸುವ ಸಾಧ್ಯತೆಗಳೂ ಇದ್ದವು ಎಂಬುದು ಪ್ರಮುಖ ಅಂಶ. ಈಗ ಸರ್ಕಾರ ರಚನೆ ಆಗಿದೆ. ವಿರೋಧ ಪಕ್ಷಗಳು ಈಗ ಯಡಿಯೂರಪ್ಪ ಅವರ ಕಡೆ ಹೆಚ್ಚು ಗಮನ ಹರಿಸಬಹುದು ಮತ್ತು ಸರ್ಕಾರ ರಚನೆ ಬಗ್ಗೆ ಆಲಸ್ಯ ಮನೋಭಾವ ಹೊಂದಬಹುದು ಎಂಬ ಲೆಕ್ಕಾಚಾರವೂ ಇದೆ.
-ನವೀನ್‌ ಅಮ್ಮೆಂಬಳ
Advertisement

Udayavani is now on Telegram. Click here to join our channel and stay updated with the latest news.

Next