Advertisement

ಲಿಂಗಾಯತರ ಅನಭಿಷಿಕ್ತ ನಾಯಕ ಬಿಎಸ್‌ವೈ

09:27 AM Jul 28, 2019 | Sriram |

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಬಿ.ಎಸ್‌.ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಉತ್ತರ ಕರ್ನಾಟಕ ಭಾಗದ ಜನತೆಗೆ ಹೊಸ ಭರವಸೆ ಮೂಡಿದಂತಾಗಿದೆ.

Advertisement

ಯಡಿಯೂರಪ್ಪ ಮೂಲತ: ದಕ್ಷಿಣ ಕರ್ನಾಟಕದ ಮಂಡ್ಯದವರಾದರೂ, ಮಧ್ಯ ಕರ್ನಾಟಕದ ಶಿವಮೊಗ್ಗದಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ಆದರೆ, ಅವರು ಅಧಿಕಾರಕ್ಕೆ ಬರುತ್ತಾರೆ ಎಂದರೆ, ಅತಿ ಹೆಚ್ಚು ಸಂಭ್ರಮ, ಸಂತಸ ಪಡುವವರು ಉತ್ತರ ಕರ್ನಾಟಕದ ಜನತೆ. ವೀರೇಂದ್ರ ಪಾಟೀಲರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದಲ್ಲಿ ಪ್ರಭಾವಿ ವೀರಶೈವ ಲಿಂಗಾಯತ ಸಮುದಾಯ ನಾಯಕರಾರೂ ರಾಜ್ಯಮಟ್ಟದಲ್ಲಿ ನಾಯಕತ್ವ ಗಳಿಸುವಲ್ಲಿ ಯಶಸ್ವಿಯಾಗಿರಲಿಲ್ಲ.

ವೀರೇಂದ್ರ ಪಾಟೀಲ್ ಅವರನ್ನು 1990ರಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಿದ ನಂತರ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡು ಬಂತು. ಒಂದು ಹಂತದಲ್ಲಿ ಸಮುದಾಯ ಜನತಾ ಪರಿವಾರದ ಬೆನ್ನಿಗೆ ನಿಲ್ಲುವ ಪ್ರಯತ್ನ ನಡೆಸಿತು. ಆ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ರಾಮಕೃಷ್ಣ ಹೆಗಡೆ ಅವರನ್ನೂ ಲಿಂಗಾಯತ ಸಮುದಾಯ ಬೆಂಬಲಿಸುತ್ತ ಬಂತ್ತು. ಅವರ ನಂತರ ವೀರೇಂದ್ರ ಪಾಟೀಲ್ ಮತ್ತೆ ಪ್ರವರ್ಧಮಾನಕ್ಕೆ ಬಂದು ಕಾಂಗ್ರೆಸ್‌ನಲ್ಲಿ ನಾಯಕತ್ವ ಪಡೆದಾಗ ಲಿಂಗಾಯತ ಸಮುದಾಯ ಅವರ ಬೆನ್ನಿಗೆ ನಿಂತಿತು. 1990ರಲ್ಲಿ ಕಾಂಗ್ರೆಸ್‌ನಲ್ಲಿ ನಡೆದ ದಿಢೀರ್‌ ಬೆಳವಣಿಗೆಗಳು ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪಕ್ಷದಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತು. ಆಗಿನಿಂದಲೂ ಕಾಂಗ್ರೆಸ್‌ ವಿರೋಧಿ ರಾಜಕೀಯ ಪಕ್ಷಗಳನ್ನೇ ಬೆಂಬಲಿಸುತ್ತ ಬಂದಿರುವ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಅದರ ಫ‌ಲವಾಗಿ ಬಿಜೆಪಿ ತನ್ನ ಓಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳಲು ಕಾರಣವಾಯಿತು.

ಭರವಸೆ ಮೂಡಿಸಿದ ನಾಯಕ
1990ರ ದಶಕದಲ್ಲಿ ತಮ್ಮ ಹೋರಾಟಗಳ ಮೂಲಕ ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸತೊಡಗಿದರು. ಆಗ ಲಿಂಗಾಯತ ಸಮುದಾಯವೂ ಯಡಿಯೂರಪ್ಪ ಅವರ ಬೆನ್ನಿಗೆ ನಿಲ್ಲತೊಡಗಿತು. ಅದು ಕ್ರಮೇಣ ಯಡಿಯೂರಪ್ಪ ಸಮುದಾಯದ ಮೇಲಿನ ವ್ಯಾಮೋಹಕ್ಕೋ ಅಥವಾ ಪಕ್ಷದ ಬೇರುಗಳು ಗಟ್ಟಿಯಾಗಿರುವ ಕಾರಣಕ್ಕೋ ಉತ್ತರ ಕರ್ನಾಟಕ ಭಾಗದಲ್ಲಿಯೇ ಮತ್ತಷ್ಟು ರಾಜಕೀಯವಾಗಿ ಕಾರ್ಯ ಚಟುವಟಿಕೆಗಳನ್ನು ಮಾಡತೊಡಗಿದರು. ಅದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ತಂದು ನಿಲ್ಲಿಸಿತು. ಮೊದಲ ಬಾರಿಗೆ 2006ರಲ್ಲಿ ಜೆಡಿಎಸ್‌ ಜೊತೆ ಸೇರಿಕೊಂಡು ಉಪ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತ ಬಂದಿದ್ದರು. ಅದು ಲಿಂಗಾಯತ ಸಮುದಾಯ ಮತ್ತಷ್ಟು ಗಟ್ಟಿಯಾಗಿ ಅವರ ಬೆನ್ನಿಗೆ ನಿಲ್ಲುವಂತಾಯಿತು. 2008ರಲ್ಲಿಯೂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ, ನೀರಾವರಿ ಯೋಜನೆಗಳಿಗೆ ಪ್ರಾಧಾನ್ಯತೆ, ರಾಜಕೀಯವಾಗಿಯೂ ಲಿಂಗಾಯತ ಸಮುದಾಯದ ಶಾಸಕರುಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಿದ್ದರು. ಅದು ಸಹಜವಾಗಿ ಉತ್ತರ ಕರ್ನಾಟಕದ ಜನತೆಗೆ ತಮ್ಮದೆ ಸರ್ಕಾರ ಅಧಿಕಾರದಲ್ಲಿದೆ ಎನ್ನುವ ಭಾವನೆಯನ್ನು ಮೂಡಿಸಿತ್ತು. ಅದೇ ರೀತಿಯ ಪ್ರಾಧಾನ್ಯತೆ ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸ ಆ ಭಾಗದ ಜನರಲ್ಲಿ ಮೂಡಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉತ್ತರ ಕರ್ನಾಟಕ ಭಾಗದ ಬಗ್ಗೆ ನಿರ್ಲಕ್ಷ್ಯ ತೋರಿತ್ತು ಎನ್ನುವ ಅಭಿಪ್ರಾಯ ಆ ಭಾಗದ ಜನರಲ್ಲಿದೆ.

ಪ್ರಮುಖ ಸ್ಥಾನಮಾನದ ಭರವಸೆ

ವಿಶೇಷವಾಗಿ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಮುಖ ಖಾತೆ ಹಂಚಿಕೆ ಸೇರಿದಂತೆ ಸ್ಥಾನಮಾನ ನೀಡುವುದು, ಸರ್ಕಾರಿ ಇಲಾಖೆಗಳಲ್ಲಿ ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ನೇಮಕ ಮಾಡದೇ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಸಮುದಾಯಕ್ಕೆ ಅನ್ಯಾಯ ಮಾಡಿದ್ದವು ಎನ್ನುವ ಆರೋಪ ಬಹಿರಂಗವಾಗಿಯೇ ಕೇಳಿ ಬಂದಿತ್ತು. ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ನೇರವಾಗಿ ವೀರಶೈವ-ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈಗ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುವುದರಿಂದ ಸಮುದಾಯಕ್ಕಾದ ಅನ್ಯಾಯ ಸರಿಪಡಿಸಲು ಅವಕಾಶ ದೊರೆತಂತಾಗುತ್ತದೆ ಎಂಬ ಆಶಾಭಾವನೆ ಅವರಲ್ಲಿ ಮೂಡಿಸಿದೆ. ಅಲ್ಲದೇ, ಅನುದಾನ ಬಿಡುಗಡೆ, ಯೋಜನೆಗಳ ಅನುಷ್ಠಾನ ಎಲ್ಲ ವಿಷಯಗಳಲ್ಲಿಯೂ ಉತ್ತರ ಕರ್ನಾಟಕ ಭಾಗ ವನ್ನು ನಿರ್ಲಕ್ಷ್ಯ ಮಾಡಲಾಗಿತ್ತು ಎಂಬ ಬೇಸರ ಆ ಭಾಗದ ಜನರಿಗಿತ್ತು. ಈಗ ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಯಾದರೆ, ಆ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎನ್ನುವ ಅಭಿಪ್ರಾಯ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಇದೆ. ವಿಶೇಷವಾಗಿ ಕೃಷ್ಣಾ ಕೊಳ್ಳದ ಯೋಜನೆ, ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್‌ ಮಾಡಿ ಸುವ ಕೆಲಸವಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಹೀಗಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಉತ್ತರ ಕರ್ನಾಟಕದ ಜನತೆ ಹೆಚ್ಚು ಆಪ್ತತೆಯಿಂದ ಒಪ್ಪಿಕೊಳ್ಳುತ್ತಾರೆ.
-ಶಂಕರ ಪಾಗೋಜಿ
Advertisement

Udayavani is now on Telegram. Click here to join our channel and stay updated with the latest news.

Next