Advertisement

ಅಹಿಂದ ಪರ ಟೀಕೆ “ಕಾಂಪ್ಲಿಮೆಂಟ್‌’ಇದ್ದಂತೆ

07:45 AM Jul 24, 2017 | Team Udayavani |

ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮಾವೇಶದ ಕೊನೆಯ ದಿನ ಸಮಾರೋಪ ಸಮಾರಂಭಕ್ಕೂ ಮೊದಲು ಕಾರ್ಯಕ್ರಮದ ಪ್ರಧಾನ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಂವಾದ
ನಡೆಯಿತು.

Advertisement

ಇದರಲ್ಲಿ ಚಿಂತಕರು, ದಲಿತ ಹಾಗೂ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಉತ್ತರ ನೀಡಿದರು. ಈ ವೇಳೆ ತಮ್ಮ ಅಹಿಂದ ಪರ ನಿಲುವು ಸಮರ್ಥಿಸಿಕೊಳ್ಳುವುದರ ಜತೆಗೆ, ನಾಲ್ಕು ವರ್ಷದಲ್ಲಿ ದಲಿತರು, ಹಿಂದುಳಿದವರಿಗೆ ತಮ್ಮ ಸರ್ಕಾರ ನೀಡಿದ ಕಾರ್ಯಕ್ರಮಗಳನ್ನು ವಿವರಿಸುತ್ತ, ಪ್ರತಿಪಕ್ಷಗಳ ಟೀಕೆಗಳಿಗೆ ಕಟುಮಾತುಗಳಲ್ಲಿ ಉತ್ತರ ನೀಡಿದರು.

ಪ್ರಶ್ನೋತ್ತರ ರೀತಿಯಲ್ಲಿ ನಡೆದ ಸಂವಾದದ ಸಾರಾಂಶ ಇಲ್ಲಿದೆ:
ಕೆ.ಬಿ. ಸಿದ್ದಯ್ಯ:
ಜಾತಿ ವಿನಾಶಕ್ಕೆ ನಿಮ್ಮ ಉಪಾಯ ಮತ್ತು ಕಾರ್ಯಕ್ರಮಗಳೇನು? ಈಗಿರುವುದಕ್ಕಿಂತ ಭಿನ್ನ ಕಾರ್ಯಕ್ರಮಗಳೇನಾದರೂ ಇದೇಯಾ? ನಿಮ್ಮ ಪ್ರಯತ್ನಗಳು ಜಾತಿ ವಿನಾಶವೋ ಅಥವಾ ಜಾತಿ-ಜಾತಿಗಳ ನಡುವೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ತರುವುದಾ?

ಮುಖ್ಯಮಂತ್ರಿ: ಜಾತಿ ವ್ಯವಸ್ಥೆ ಸಮಾಜದ ಹಿನ್ನಡೆಗೆ ಕಾರಣವಾಗಿದೆ. ಸಂವಿಧಾನ ರಚನೆಗೊಂಡು 70
ವರ್ಷಗಳಾಗುತ್ತಾ ಬಂದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಇರುವುದಕ್ಕೆ ಮೂಲ ಕಾರಣ ಜಾತಿ ವ್ಯವಸ್ಥೆ. ಬಹಳ ವರ್ಷಗಳಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ಬಹಳ ಗಟ್ಟಿಯಾಗಿ ಬೆಳೆದು ಬಂದಿದೆ. ಬಾಯಿ ಮಾತಿನಲ್ಲಿ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಸಮಾಜದಲ್ಲಿ ಚಲನೆ ಇದ್ದರೆ ಜಾತಿ ವ್ಯವಸ್ಥೆ ದೂರ ಮಾಡಬಹುದು.

ಕೆ.ಬಿ. ಸಿದ್ದಯ್ಯ: ತ್ರಿಭಾಷಾ ಸೂತ್ರ ತ್ರಿಶೂಲ ಇದ್ದಂತೆ ಎಂದು ಕುವೆಂಪು ಹೇಳಿದ್ದರು.ಅಪಾಯಕಾರಿಯಾಗಿರುವ ತ್ರಿಭಾಷಾ ಸೂತ್ರದ ಬದಲು ದ್ವಿಭಾಷ ಸೂತ್ರ ಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆ ಉಳಿಸಲು ಸರ್ಕಾರದ ಕಾರ್ಯಕ್ರಮಗಳೇನು?

Advertisement

ಮುಖ್ಯಮಂತ್ರಿ: ಭಾಷಾವಾರು ಪ್ರಾಂತ್ಯಗಳು ರಚನೆಯಾಗಿರುವಾಗ ಕನ್ನಡ ಭಾಷೆಯೇ ನಮಗೆ ಸಾರ್ವಭೌಮ. ಮಾತೃಭಾಷೆಯೇ ಶಿಕ್ಷಣ ಮಾಧ್ಯಮ ಆಗಬೇಕು ಎನ್ನುವುದು ಸರ್ಕಾರದ ಸ್ಪಷ್ಟ ನಿಲುವು. ಆದರೆ, ಶಿಕ್ಷಣ ಮಾಧ್ಯಮ ಆಯ್ಕೆಯ ವಿಚಾರ ಪೋಷಕರಿಗೆ ಬಿಟ್ಟಿದ್ದು ಎಂದು ನ್ಯಾಯಾಲಯ ಹೇಳಿದ್ದರಿಂದ ನಮ್ಮ ನಿಲುವಿಗೆ ಹಿನ್ನಡೆಯಾಗಿದೆ. ಅದಾಗ್ಯೂ, ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಿರಿ ಎಂದು 2 ಬಾರಿ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ.

ರಾಜೇಂದ್ರ ಚೆನ್ನಿ: ನಿಮ್ಮ ಅಹಿಂದ ಹೋರಾಟ ರಾಜಕೀಯ ಕಾರ್ಯಕ್ರಮವೋ ಅಥವಾ ತಾತ್ವಿಕ ನಂಬಿಕೆಯೋ?
ನಟರಾಜ್‌ ಹುಳಿಯಾರ್‌: ಅಹಿಂದ ಒಂದು ರಾಜಕೀಯ ಸಮೀಕರಣ. ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ
ಕಾರ್ಯಕ್ರಮಗಳ ರೂಪದಲ್ಲಿ ಒಂದಿಷ್ಟು ಅದು ಕಾಣಿಸಿಕೊಂಡಿದೆ. ಆದರೆ, ಅದಕ್ಕೆ ತಾತ್ವಿಕ ಸ್ವರೂಪ ಬಂದಿಲ್ಲ ಏಕೆ?

ಮುಖ್ಯಮಂತ್ರಿ: ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ಆಶಯಗಳ ಮುಂದುವರಿದ ಭಾಗವೇ ನನ್ನ ಅಹಿಂದ ಹೋರಾಟ. ಕಾಂಗ್ರೆಸ್‌ ಸರ್ಕಾರ ಅದನ್ನು ಸಾಕಾರಗೊಳಿಸುತ್ತಿದೆ. ನಾನು ಅಹಿಂದ ಪರ, ನನ್ನದು ಅಹಿಂದ ಬಜೆಟ್‌, ನಮ್ಮದು ಅಹಿಂದ ಸರ್ಕಾರ ಎಂದು ಟೀಕೆ ಮಾಡಲಾಗುತ್ತದೆ. ಆದರೆ, ನಾನು ಅಹಿಂದ ಪರ ಎಂದು ಹೇಳಿಕೊಳ್ಳಲು
ಮುಜುಗರ ಅಥವಾ ಭಯ ಪಡುವುದಿಲ್ಲ. ಅದೆನ್ನೆಲ್ಲ “ಕಾಂಪ್ಲಿಮೆಂಟ್‌’ ಆಗಿ ತೆಗೆದುಕೊಳ್ಳುತ್ತೇನೆ. ಹಾಗಂತ,
ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳನ್ನು ನಾನು ನಿರ್ಲಕ್ಷ್ಯ ಮಾಡಿಲ್ಲ. ಅಹಿಂದ ತತ್ವ ಗಟ್ಟಿಯಾದರೆ, ಹಿಂದುಳಿದ ವರ್ಗಗಳ ಯುವಕರು ಭಜರಂಗದಳ, ಶ್ರೀರಾಮಸೇನೆ, ಎಬಿವಿಪಿ ಸೇರಿಕೊಳ್ಳುವುದಿಲ್ಲ ಮತ್ತು ಹಿಂದುತ್ವದ ಪ್ರತಿಪಾದನೆ ಮಾಡುವುದಿಲ್ಲ. ದಾರಿ ತಪ್ಪುವುದೂ ಇಲ್ಲ.

ವೆಲೆರಿಯಾನ್‌ ರೋಡ್ರಿಗ್ಸ್‌: ನಿಮ್ಮ ಜಾತಿ ವಿನಾಶ ಮತ್ತು ಸಮ ಸಮಾಜದ ವಾದ ಕೇವಲ ಭಾಷಣಗಳಲ್ಲಿದೆ. ಕಾರ್ಯಕ್ರಮಗಳಲ್ಲಿ ಒಂದೇ ವರ್ಗಕ್ಕೆ ಆದ್ಯತೆ ಸಿಗುತ್ತಿದೆ. ಇದು ಸಹ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುತ್ತದೆ.
ದೇವರಾಜ ಅರಸು ಹೀಗೆಯೇ ಮಾಡಿದ್ದರು. ನೀವು ಅದೇ ಹಾದಿಯಲ್ಲಿ ಹೋಗುತ್ತಿದ್ದಾರಾ ಎಂಬ
ಆರೋಪಗಳಿಗೆ ನಿಮ್ಮ ಉತ್ತರವೇನು?

ಮುಖ್ಯಮಂತ್ರಿ: ಹಣಕಾಸು ಸಚಿವನಾಗಿ ಏಳು ಮತ್ತು ಮುಖ್ಯಮಂತ್ರಿಯಾಗಿ ಒಟ್ಟು 12 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಈ ಎಲ್ಲ ಬಜೆಟ್‌ಗಳಲ್ಲಿ ಯಾವುದೂ ಒಂದು ಜಾತಿ ಅಥವಾ ವರ್ಗಕ್ಕೆ ಓಲೈಕೆ ಮಾಡಿದ್ದೇನೆ ಎಂದು ಯಾವ ಪ್ರಜ್ಞಾವಂತ ನಾಗರಿಕನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಪರ ಇಲ್ಲದವರು, ಯಥಾಸ್ಥಿತಿವಾದಿಗಳು
ಈ ರೀತಿ ಆರೋಪಗಳನ್ನು ಮಾಡುತ್ತಾರೆ. ಈಗ ದಲಿತರ ಮನೆಗೆ ಹೋಗಿ ಹೋಟೆಲ್‌ನಿಂದ ತರಿಸಿದ ತಿಂಡಿ ತಿನ್ನುವವರು, ಐದು ವರ್ಷ ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದರು ಎಂದು ಹೇಳಲಿ.

ಕೆ. ನೀಲಾ: ಡಾ. ಎಂ.ಎಂ. ಕಲಬುರಗಿ ಹತ್ಯೆಯಾಗಿ 2 ವರ್ಷ ಆಗುತ್ತಾ ಬಂದಿದೆ. ಆದರೆ, ಇಲ್ಲಿವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲಾದರೂ ಸಂಶಯದ ಮೇಲೆ ಒಂದಿಬ್ಬರನ್ನು 
ಬಂಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದೂ ಇನ್ನೂ ಏನೂ ಆಗಿಲ್ಲ ಯಾಕೆ?

ಮುಖ್ಯಮಂತ್ರಿ: ಡಾ. ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಸಿಐಡಿ ತನಿಖೆ ನಡೆದಿದೆ. ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಸಹ ಇಲ್ಲಿ ಮಾಹಿತಿ ಕಲೆ ಹಾಕಿದೆ. ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ರಾಜೇಂದ್ರ ಚೆನ್ನಿ: ಜಾತಿಗಣತಿ ಸಾಮಾಜಿಕ ನ್ಯಾಯ ತರುವ ಅಸOಉ ಎಂದು ಹೇಳಲಾಗುತ್ತಿದೆ, ಈ ಬಗ್ಗೆ ನಿಮ್ಮ ಗ್ರಹಿಕೆ ಏನು? 

ಮುಖ್ಯಮಂತ್ರಿ: 1931ರವರೆಗೆ ಜನಗಣತಿ ಜತೆ ಜಾತಿ ಗಣತಿ ಆಗುತ್ತಿತ್ತು. ಅನೇಕ ಬಾರಿ ಚರ್ಚೆಗಳು ಬಂದಾಗ ನ್ಯಾಯಾಲಯಗಳಲ್ಲಿ ನೀಡಲು ಖಚಿತ ಮಾಹಿತಿ ಇರಲಿಲ್ಲ. ಸ್ವತಂತ್ರ ಭಾರತದಲ್ಲಿ ಸರ್ಕಾರದ ಫ‌ಲ ಯಾರಿಗೆ ಸಿಕ್ಕಿದೆ ಗೊತ್ತಾಗಬೇಕು. ಮೇಲ್ಮಟ್ಟದಲ್ಲಿ ನಡೆಸಿದ ಕಾರ್ಯಕ್ರಮಗಳು ಬದಲು ತಳಮಟ್ಟದಲ್ಲಿ ಜಾರಿ ಮಾಡಲು ವರದಿ. ಕಟ್ಟಕಡೆಯ ಮನುಷ್ಯನಿಗೆ ಪ್ರಾಧಾನ್ಯ ನೀಡಲು ಅವಕಾಶ ಆಗುತ್ತದೆ. ಆದರೆ, ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿ¨ªಾರೆ. ಜಾತಿ ಎಂಬುದು ವಾಸ್ತವ. ಜಾತಿ ಇಲ್ಲ ಎಂದು ಹೇಳಿದ ತಕ್ಷಣ ಎಲ್ಲವೂ ಸರಿಯಾಗಲ್ಲ.

ಡಿ. ಉಮಾಪತಿ: ಗಣಿ ರೆಡ್ಡಿಗಳ ಕಾಲದಲ್ಲಿ “ಬಳ್ಳಾರಿ ರಿಪಬ್ಲಿಕ್‌’ ಆಗಿತ್ತು. ಅದೇ ರೀತಿ ಈ ನೆಲದ ಕಾನೂನಿಗೆ ಗೌರವ ಕೊಡದ ದಕ್ಷಿಣ ಕನ್ನಡ ಜಿಲ್ಲೆ ಇಂದು ರಿಪಬ್ಲಿಕ್‌ ರೀತಿಯಲ್ಲಿ ಎದುರಾಗಿ ನಿಂತಿದೆ. ಇಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ತಾತ್ಕಾಲಿಕ ಮತ್ತು ಖಾಯಂ ಕ್ರಮಗಳೇನು?

ಸಿದ್ದರಾಮಯ್ಯ: ನಮ್ಮ ಸರ್ಕಾರದಲ್ಲಿ ಸಣ್ಣಪುಟ್ಟ ಘಟನೆ ಬಿಟ್ಟರೆ ದೊಡ್ಡಮಟ್ಟದಲ್ಲಿ ಕೋಮುಗಲಭೆಗಳು ನಡೆದಿಲ್ಲ.
ಕೋಮುವಾದಿಗಳು ಮತ್ತು ಮತೀಯ ಶಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಚಟುವಟಿಕೆಗಳ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿವೆ. ಬಹಳ ವರ್ಷಗಳಿಂದ ಇದು ನಡೆದಿದೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯವರು ಶಾಂತಿ ಪ್ರಿಯರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಒಂದು ವೇಳೆ ಅಲ್ಲಿನ ಜನ ಶಾಂತಿ ಪ್ರಿಯರು ಇಲ್ಲದೇ ಇದ್ದಿದ್ದರೆ, ಏಳು ಶಾಸಕರು ಗೆಲ್ಲಲು ಸಾಧ್ಯವಾಗುತ್ತಿತ್ತಾ?. ಇಷ್ಟಕ್ಕೂ ಕೆಲವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಹಿಂದುಳಿದ ವರ್ಗಗಳ ಯುವಕರನ್ನು ದಾರಿ ತಪ್ಪಿಸಿ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಶಾಂತಿ-ಸೌಹಾರ್ದತೆ ನೆಲೆಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next