ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರದ ಸಂಪುಟ ವಿಸ್ತರಣೆ ನಿಗದಿಯಂತೆ ಬುಧವಾರ (ಜನವರಿ 13, 2021) ಸಂಜೆ 3.30ಕ್ಕೆ ನಡೆಯಲಿದ್ದು, 7ರಿಂದ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಮಂತ್ರಿಗಳಿಗೆ ಈಗಾಗಲೇ ವಿಷಯ ತಿಳಿಸಲಾಗಿದೆ. ಪಟ್ಟಿಯನ್ನು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಚಿವರ ಪ್ರಮಾಣವಚನದ ಕುರಿತು ರಾಜಭವನಕ್ಕೆ ಮಾಹಿತಿ ರವಾನಿಸಲಾಗಿದ್ದು, ನಾಳೆ ಮಧ್ಯಾಹ್ನ 3.30ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಬಿಜೆಪಿ ಹೈಕಮಾಂಡ್ ನ ನಾಯಕರು ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಸಂಪುಟದಿಂದ ಯಾರಿಗೆ ಕೊಕ್ ಸಿಗಲಿದೆ, ಸಂಪುಟಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಸಂಭಾವ್ಯ ಪಟ್ಟಿಯಂತೆ ಮುರುಗೇಶ್ ನಿರಾಣಿ, ಮುನಿರತ್ನ, ಸಿಪಿ ಯೋಗೇಶ್ವರ್, ಉಮೇಶ್ ಕತ್ತಿ, ಎಸ್.ಅಂಗಾರ ಸೇರಿದಂತೆ 7 ಮಂದಿಗೆ ಸಚಿವ ಸ್ಥಾನ ದೊರಕಲಿದ್ದು, ಒಂದು ಸ್ಥಾನವನ್ನು ಸಿಎಂ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುರುಗೇಶ್ ನಿರಾಣಿ ಅವರು ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ತನಗೆ ಸಚಿವ ಪದವಿ ಕುರಿತಂತೆ ಸಿಎಂ ಕಾರ್ಯಾಲಯದಿಂದ ಯಾವುದೇ ಕರೆ ಬಂದಿಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ಅಬಕಾರಿ ಸಚಿವ ನಾಗೇಶ್ ಅವರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಯಾರು ಸಚಿವ ಸಂಪುಟ ಸೇರ್ಪಡೆಯಾಗಲಿದ್ದಾರೆ, ಯಾರನ್ನು ಕೈಬಿಡಲಾಗಿದೆ ಎಂಬ ಸ್ಪಷ್ಟ ಚಿತ್ರಣ ನಾಳೆ ಲಭ್ಯವಾಗಲಿದೆ.