Advertisement

ಕನ್ನಡಿಗರಿಗೆ ಖಾಸಗಿ ನೌಕರಿ: ಹೊಸ ಉದ್ಯೋಗ ನೀತಿಗೆ ಸಚಿವ ಸಂಪುಟ ಅನುಮೋದನೆ

02:00 AM Jul 23, 2022 | Team Udayavani |

ಬೆಂಗಳೂರು: ಇನ್ನು ಮುಂದೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಬಂಪರ್‌ ಉದ್ಯೋಗಾವಕಾಶ ಲಭ್ಯವಾಗಲಿದೆ. ಕೈಗಾರಿಕೆ ವಲಯದಲ್ಲಿ ಸ್ಥಳೀಯರು, ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ “ಕರ್ನಾಟಕ ಉದ್ಯೋಗ ನೀತಿ- 2025’ಕ್ಕೆ ಸಚಿವ ಸಂಪುಟ ಶುಕ್ರ ವಾರ ಅನುಮೋದನೆ ನೀಡಿದೆ.

Advertisement

ಮಧ್ಯಮ, ಬೃಹತ್‌, ಮೆಗಾ, ಅಲ್ಟ್ರಾ ಮತ್ತು ಸೂಪರ್‌ ಮೆಗಾ ಸಹಿತ ಯಾವುದೇ ಕೈಗಾರಿಕೆ ತಾನು ಹೂಡುವ ಬಂಡವಾಳಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಸೃಷ್ಟಿ ಮಾಡಿ, ಎಲ್ಲ ಶ್ರೇಣಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕೈಗಾರಿಕೆ ವಲಯದಲ್ಲಿ ಸೃಷ್ಟಿಯಾಗುವ ಎಲ್ಲ ಹಂತದ ಹುದ್ದೆಗಳನ್ನು ಸ್ಥಳೀಯರು ಮತ್ತು ಕನ್ನಡಿಗರಿಗೆ ನೀಡ ಬೇಕು. ಯಾವುದೇ ಕೈಗಾರಿಕೆ ವಿಸ್ತರಿಸುವ ಸಂದರ್ಭದಲ್ಲೂ ಅದೇ ಪ್ರಮಾಣದಲ್ಲಿ ಹೊಸ ಉದ್ಯೋಗ ಸೃಷ್ಟಿಸಿ ಕನ್ನಡಿಗರಿಗೆ ಕೊಡಬೇಕು ಎಂದು ಸಂಪುಟ ಸಭೆಯ ಅನಂತರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಮೂರು ವರ್ಷ ಜಾರಿ
ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ನಿರೀಕ್ಷಿತ ಪ್ರಮಾಣದಲ್ಲಿ ದೊರಕುತ್ತಿಲ್ಲ. ಬಹುತೇಕ ಹೊರ ರಾಜ್ಯ ದವರಿಗೆ ಇಲ್ಲಿನ ಉದ್ಯಮ, ಕೈಗಾರಿಕೆಗಳಲ್ಲಿ ಉದ್ಯೋಗ ಆದ್ಯತೆ ಸಿಗುತ್ತಿದೆ ಎಂಬ ಮಾತಿದೆ. ಹೀಗಾಗಿ ಸ್ಪಷ್ಟ ಮತ್ತು ರಾಜ್ಯಕ್ಕೆ ಪೂರಕ ತೀರ್ಮಾನ ಕೈಗೊಳ್ಳಲಾಗಿದೆ. ಈ ನೀತಿ 2025ರ ವರೆಗೆ ಜಾರಿಯಲ್ಲಿರುತ್ತದೆ ಎಂದರು.

ನೂತನ ಉದ್ಯೋಗ ನೀತಿಯಿಂದಾಗಿ ಮುಂದೆ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸುವ ಮತ್ತು ಈಗಾ ಗಲೇ ಸ್ಥಾಪಿಸಿರುವ ಉದ್ಯಮಗಳು ಬಂಡವಾಳ ಹೂಡಿಕೆ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸಿ ಸ್ಥಳೀಯ ರಿಗೆ ನೀಡಬೇಕಾಗುತ್ತದೆ. ಇದರ ಮೇಲ್ವಿಚಾರಣೆಯನ್ನು ಕೆಐಎಡಿಬಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಮಾಡಲಿದೆ ಎಂದರು.

Advertisement

ಕಾರ್ಮಿಕರಿಗೆ ಹಲವು ಸೌಲಭ್ಯ
-ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಉದ್ಯೋಗ ಶ್ರಮೀಕರಣ ಮತ್ತು ಸೇವಾ ಷರತ್ತುಗಳಿಗೆ ತಿದ್ದುಪಡಿ ತರಲು ನಿರ್ಧಾರ
-ಫ‌ಲಾನುಭವಿಯ ನೋಂದಣಿ ವಂತಿಗೆ ಮನ್ನಾ
-ಫ‌ಲಾನುಭವಿಗಳ ಪಿಂಚಣಿ ಸೌಲಭ್ಯ 2ರಿಂದ 3 ಸಾವಿರ ರೂ.ಗಳಿಗೆ ಏರಿಕೆ
-ಹೆರಿಗೆ ಸೌಲಭ್ಯದಡಿ 50 ಸಾವಿರ ರೂ., ಅಂತ್ಯಸಂಸ್ಕಾರ ಸಹಾಯಧನ 70 ಸಾವಿರಕ್ಕೆ ಹೆಚ್ಚಳ
-ಕೋವಿಡ್‌ನಿಂದ ಮೃತಪಟ್ಟ ಫ‌ಲಾನುಭವಿಯ ಅವಲಂಬಿತರಿಗೆ 2 ಲಕ್ಷ ರೂ. ಸಹಾಯಧನ
-ಫ‌ಲಾನುಭವಿಗೆ ಟೂಲ್‌ ಕಿಟ್‌ ವಿತರಣೆ
-ಗೃಹ ಭಾಗ್ಯ’ದಡಿ ಅರ್ಹ ಫ‌ಲಾನುಭವಿಗಳಿಗೆ ಮನೆ ಕಟ್ಟಲು ಸಾಲ/ಮುಂಗಡ ನಿಯಮ ಸರಳೀಕರಣ
-ಕೆಲಸದ ಸ್ಥಳದಲ್ಲಿ ಸಾವನ್ನಪ್ಪುವ ಕಾರ್ಮಿಕರ ಅವಲಂಬಿತರಿಗೆ 5 ಲಕ್ಷ ರೂ. ಪರಿಹಾರ
-ಮದುವೆ ಸಹಾಯಧನ 60 ಸಾವಿರ ರೂ.ಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ
-ವೈದ್ಯಕೀಯ ಸಹಾಯಧನ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆ
-ಸೀಮಿತ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ಕೆಎಸ್ಸಾರ್ಟಿಸಿ ಉಚಿತ ಬಸ್‌ ಪಾಸ್‌

ಕಸ್ತೂರಿರಂಗನ್‌ ವರದಿಗೆ ಒಪ್ಪಿಗೆಯಿಲ್ಲ
ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಕರ್ನಾಟಕದ ಒಪ್ಪಿಗೆ ಇಲ್ಲ ಎಂದು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ವರದಿ ಜಾರಿಯಿಂದ ಆ ಭಾಗದ ಜನರಿಗೆ ಭಾರೀ ಸಮಸ್ಯೆಯಾಗಲಿದ್ದು, ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಸದ್ಯದಲ್ಲೇ ಈ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಸರಕಾರದ ಅಭಿಪ್ರಾಯ ತಿಳಿಸಲಾಗುವುದು. ವರದಿ ಅನುಷ್ಠಾನ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಾವು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next