ಬೆಂಗಳೂರು: ಬಳ್ಳಾರಿ ಜಿಲ್ಲೆಯ ಎಲ್ಲಾ ವರ್ಗದ ಜನತೆ ವಿಎಸ್ ಉಗ್ರಪ್ಪನವರ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿ ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸುತ್ತೇನೆ. ಅಲ್ಲದೇ ಬಹಳ ಶಾಂತಿ ಮತ್ತು ಸೌಮ್ಯದಿಂದ ಚುನಾವಣೆ ನಡೆಸಿದ ಶ್ರೀರಾಮುಲು ಅಣ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಜಯಭೇರಿ ಬಾರಿಸಿದ ನಿಟ್ಟಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ. ಈ ಚುನಾವಣೆಯ ಗೆಲುವನ್ನು ಬಳ್ಳಾರಿ ಜಿಲ್ಲೆ ಶಾಸಕರಿಗೆ ಅರ್ಪಿಸುತ್ತೇನೆ ಎಂದರು.
ಬಳ್ಳಾರಿಯಲ್ಲಿ ಉಗ್ರಪ್ಪನವರು ಗೆದ್ದಿದ್ದಾರೆಂದು ನಾನು ಹಿಗ್ಗುವುದಿಲ್ಲ. ನನ್ನ ಬಾಂಬ್ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಮಾಡುವುದಾಗಿದೆ. ನನಗೆ ಯೋಗಕ್ಕಿಂತ ಯೋಗಕ್ಷೇಮವೇ ಮುಖ್ಯ. ಹುಟ್ಟಿದ ಮೇಲೆ ಸಾಯದೇ ಇರಲು ಆಗಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ತನ್ನ ಟೀಕಿಸಿದವರಿಗೆ ಟಾಂಗ್ ನೀಡಿದ್ದಾರೆ.
ಬಳ್ಳಾರಿ ಸೋಲಿನ ಹೊಣೆ ನಾನೇ ಹೊರುವೆ:ಶ್ರೀರಾಮುಲು
ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ಸೋತಿರುವುದಕ್ಕೆ ಯಾವ ನಾಯಕರೂ ಕಾರಣರಲ್ಲ. ಸೋಲಿನ ಹೊಣೆಯನ್ನು ನಾನೇ ಹೊರುವೆ. ಹಗಲು, ರಾತ್ರಿ ಕೆಲಸ ಮಾಡಿದರೂ ಫಲ ಸಿಕ್ಕಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಹಣ, ಹೆಂಡ ಹಂಚುವ ಮೂಲಕ ಕಾಂಗ್ರೆಸ್ ಬಳ್ಳಾರಿಯಲ್ಲಿ ವಾಮಮಾರ್ಗದ ಮೂಲಕ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು ಸರ್ಕಾರವನ್ನು ದುರುಪಯೋಗಪಡಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.