ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಗಾತ್ರ 1,86, 536 ಕೋಟಿ ರೂಪಾಯಿ ಅದರಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದು 2500 ಕೋಟಿ ರೂಪಾಯಿ ಮಾತ್ರ. ಅವ್ರನ್ನು ಬಿಟ್ರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗುತ್ತಾ? ನಿಜಾರ್ಥದಲ್ಲಿ ನಮ್ಮದೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಬಿಜೆಪಿಯವರದ್ದು ಏನಿದ್ದರೂ ಆತ್ಮವಂಚನೆ…ಇದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ನೀಡಿದ ತಿರುಗೇಟು.
ಮಂಗಳವಾರ ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆದ ಬಳಿಕ ನೀಡಿದ ಉತ್ತರದಲ್ಲಿ, ಬಿಜೆಪಿಯವರದ್ದು ಬರೇ ಆತ್ಮವಂಚನೆ. ದ್ವಂದ್ವ ನಿಲುವು ಅವರ ಜಾಯಮಾನ ಎಂದು ಟೀಕಿಸಿದರು.
ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ಬಜೆಟ್ ನಲ್ಲಿ ನೀಡಲಾಗಿದೆ ಎಂದು ಆರೋಪಿಸುತ್ತೀರಿ? ಜನಸಂಖ್ಯೇಲಿ ಶೇ.13ರಷ್ಟು ಇರುವ ಅವರನ್ನು ಬಜೆಟ್ ನಲ್ಲಿ ಆದ್ಯತೆ ಕೊಡದೇ ಕೈ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ವಿರೋಧಿಸಿದ್ದರು. ಈಗ ರೈತರ ಸಾಲಮನ್ನಾ ಮಾಡಿ ಎಂದು ಹುಯಿಲೆಬ್ಬಿಸುತ್ತಿದ್ದಾರೆ ಎಂದು ಸಿಎಂ ಹೇಳಿದಾಗ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ, ಆ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಈ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಿಎಂ, ರಾಜ್ಯದ ಬರ ಹಾಗೂ ರೈತರ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ರೈತರ ಸಾಲ ಮನ್ನಾ ಮಾಡಿ ಎಂದು ವಿನಂತಿಸಿದ್ದೆ. ಆದರೆ ಮೋದಿಯವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಉತ್ತರಪ್ರದೇಶ ರೈತರ ಸಾಲ ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತೆ, ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಲು ಆಗಲ್ವೇ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕೆಜಿ ಬೋಪಯ್ಯ, ವಿಶೇಷ ಜೈಲು ನಿರ್ಮಿಸುವುದಾಗಿ ಹೇಳಿದ್ದೀರಿ ಎಲ್ಲಿ ಹೋಯ್ತು ಸಿದ್ದರಾಮಯ್ಯನವರೇ ಎಂದು ಕೆಣಕಿದಾಗ, ಜೈಲು ನಿರ್ಮಾಣ ಮಾಡುವಷ್ಟರಲ್ಲಿ ನೀವೇ ಜೈಲಿಗೆ ಹೋಗಿ ಬಂದ್ರಲ್ಲಾ. ಅದಕ್ಕೆ ಬೇಡ ಅಂತ ಬಿಟ್ಟು ಬಿಟ್ಟೆ ಎಂದು ಯಡಿಯೂರಪ್ಪನವರನ್ನೂ ಪರೋಕ್ಷವಾಗಿ ಸೇರಿಸಿ ಟಾಂಗ್ ನೀಡಿದರು.