Advertisement

ದಕ್ಷಿಣ ಕನ್ನಡ: ನಿರೀಕ್ಷೆ ಹಲವು; ಈಡೇರಿದ್ದು ಕೆಲವು

12:56 AM Mar 09, 2021 | Team Udayavani |

ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಲವು ಕೊಡುಗೆಗಳನ್ನು ನೀಡಲಾಗಿದೆ. ಬಜೆಟ್‌ ಪೂರ್ವದಲ್ಲಿ ಜಿಲ್ಲೆಗೆ ಪೂರಕವಾಗಿ ಬಹಳಷ್ಟು ಬೇಡಿಕೆಗಳನ್ನು ಮಂಡಿಸಲಾಗಿದ್ದು, ಅವುಗಳಲ್ಲಿ ಒಂದಷ್ಟು ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಇದೇ ವೇಳೆ ಕೆಲವು ಪ್ರಮುಖ ಬೇಡಿಕೆಗಳನ್ನು ಪರಿಗಣಿಸಲಾಗಿಲ್ಲ.

Advertisement

ಮೀನುಗಾರಿಕಾ ಕ್ಷೇತ್ರವನ್ನು ಪರಿಗಣಿಸಿದರೆ ಡೀಸೆಲ್‌ ಕರ ರಿಯಾಯಿತಿಯನ್ನು ನೇರವಾಗಿ ಮೀನುಗಾರರಿಗೆ ವಿತರಣ ಕೇಂದ್ರದಲ್ಲೇ ನೀಡಬೇಕು ಎಂಬ ಕೆಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಇದು ಮೀನುಗಾರಿಕೆ ಕ್ಷೇತ್ರಕ್ಕೆ ಚೇತೋಹಾರಿಯಾಗಿದೆ. ಇದೇ ರೀತಿ ಮೀನುಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪೂರಕ ಕ್ರಮಗಳಿಗೆ ಮೀನುಗಾರಿಕಾ ಅಭಿವೃದ್ಧಿ ನಿಗಮ ಬಜೆಟ್‌ ಪೂರ್ವದಲ್ಲಿ ಮಂಡಿಸಿರುವ ಸುಮಾರು 30 ಕೋ.ರೂ. ಮೊತ್ತದ ಬೇಡಿಕೆಗೆ ಸ್ಪಂದಿಸಲಾಗಿದೆ.

ಕರಾವಳಿ ಅಭಿವೃದ್ಧಿ ಮಂಡಳಿ
ಕಳೆದ ಹಲವಾರು ವರ್ಷಗಳಿಂದ ಇದ್ದ ಇನ್ನೊಂದು ಬೇಡಿಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯಾಗಿ ಮಾಡಬೇಕು ಎಂಬುದು. ಈ ಬಾರಿಯ ಬಜೆಟ್‌ನಲ್ಲಿ ಸ್ಪಂದಿಸಿರುವ ಸಮಾಧಾನ ತಂದಿದೆ. ಇದು ಈ ವ್ಯವಸ್ಥೆ ಕರಾವಳಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪೂರಕವಾಗಿದೆ.
ಮಂಗಳೂರಿನ ಗಂಜೀಮಠದಲ್ಲಿ ಸ್ಥಾಪನೆ ಯಾಗಲಿರುವ ಪ್ಲಾಸ್ಟಿಕ್‌ ಪಾರ್ಕ್‌ಗೆ ರಾಜ್ಯ ಸರಕಾದ ಪಾಲು 66 ಕೋ.ರೂ. ಅನುದಾನವನ್ನು ಘೋಷಿಸಲಾಗಿದೆ. ಸಾವಿರಾರು ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವ ಯೋಜನೆ ಶೀಘ್ರಗತಿಯಲ್ಲಿ ಅನುಷ್ಠಾನಗೊಳ್ಳುವಲ್ಲಿ ಇದು ಪೂರಕವಾಗಲಿದೆ.

ಪಶ್ಚಿಮ ವಾಹಿನಿಗೆ 500 ಕೋ.ರೂ.
ಪಶ್ಚಿಮ ವಾಹಿನಿ ಯೋಜನೆಯ ಬಗ್ಗೆ ಹಿಂದಿನ ಹಲವಾರು ಬಜೆಟ್‌ಗಳಲ್ಲೂ ಪ್ರಸ್ತಾವನೆಯಾಗಿದೆ. ಅದೇರೀತಿ ಈ ಬಾರಿಯ ಬಜೆಟ್‌ನಲ್ಲಿಯೂ ಪ್ರಸಕ್ತ ಸಾಲಿಗೆ 500 ಕೋ.ರೂ. ಮೀಸಲಿಡಲಾಗಿದೆ. ಅದು ಆದ್ಯತೆಯಲ್ಲಿ ಅನುಷ್ಟಾನವಾದರೆ ಜಿಲ್ಲೆಯ ಜಲ ಸಂಪತ್ತು ವೃದ್ಧಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ.

ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ದ.ಕ. ಜಿಲ್ಲೆಯನ್ನು ಉಲ್ಲೇಖೀಸುವುದಾದರೆ ಮಂಗಳೂರು-ಪಣಜಿ ಜಲಮಾರ್ಗ, ನೇತ್ರಾವತಿ, ಗುರುಪುರ ನದಿಗಳಲ್ಲಿ ಜಲಮಾರ್ಗ ಹೊರತುಪಡಿಸಿ ದರೆ ಹೆಚ್ಚಿನ ಕೊಡುಗೆ ಕಂಡುಬಂದಿಲ್ಲ. ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ನಿರ್ಲಕ್ಷ್ಯಕ್ಕೊಳಗಾಗಿರುವ ಜಿಲ್ಲೆಗೆ ಈ ಬಾರಿಯ ಬಜೆಟ್‌ನ ಹೆಚ್ಚಿನ ಉತ್ತೇಜನ-ಅನುದಾನ ನಿರೀಕ್ಷೆ ಮಾಡಲಾಗಿತ್ತು. ಕಾನ, ಬಾಣೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿಯನ್ನು ಘೋಷಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಶಾದಾಯಕವಾಗಿದೆ.

Advertisement

ಬಜೆಟ್‌ನಲ್ಲಿ ಉಲ್ಲೇಖವಿಲ್ಲದ ಯೋಜನೆಗಳು
ಐಟಿ ಪಾರ್ಕ್‌, ಆಹಾರ ಸಂಸ್ಕರಣೆ ಪಾರ್ಕ್‌, 2018ರ ಬಜೆಟ್‌ನಲ್ಲಿ ಘೋಷಿಸಿದ್ದ ಕೊಣಾಜೆ-ಮಣಿಪಾಲ ನಾಲೆಡ್ಜ್-ಹೆಲ್ತ್‌ ಕಾರಿಡಾರ್‌, ಬೆಂಗಳೂರು ಮಾದರಿಯಲ್ಲಿ ಮಂಗಳೂರು ಮೆಟ್ರೋ ರೈಲು ವ್ಯವಸ್ಥೆ ಅನುಷ್ಠಾನಕ್ಕೆ ಪೂರಕ ಕ್ರಮಗಳು, ಗ್ರಾಮಾಂತರ ಪ್ರದೇಶ ಗಳಲ್ಲಿ ರಸ್ತೆಗಳು, ಕುಡಿಯುವ ನೀರು ಪೂರೈಕೆ ಸೌಲಭ್ಯ ಮುಂತಾದ ಜಿಲ್ಲೆಯ ಬೇಡಿಕೆಗಳು ಈ ಬಾರಿ ಬಜೆಟ್‌ನಲ್ಲಿ ಪ್ರಸ್ತಾವವಾಗದಿರುವುದು ಜಿಲ್ಲೆಯ ಪಾಲಿಗೆ ಒಂದಷ್ಟು ನಿರಾಸೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next