Advertisement

ಕಿವಿ ಮೇಲೆ ಹೂವು ಇರಿಸಿದ ಕಾಂಗ್ರೆಸಿಗರು: ಮಾತಿನ ಚಕಮಕಿ

11:12 PM Feb 17, 2023 | Team Udayavani |

ಬೆಂಗಳೂರು: ಬಜೆಟ್‌ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಹಿತ ಕಾಂಗ್ರೆಸ್‌ ಸದಸ್ಯರು ಕಿವಿ ಮೇಲೆ ಹೂವು ಇರಿಸಿಕೊಂಡದ್ದು ಮಾತಿನ ಚಕಮಕಿಗೆ ಕಾರಣವಾಯಿತು.

Advertisement

ಕವರ್‌ನಲ್ಲಿ ಹೂವು ಇಟ್ಟುಕೊಂಡು ಸದನ ಪ್ರವೇಶಿಸಿದ್ದ ನಾಯಕರು ಬಜೆಟ್‌ ಮಂಡನೆಗೆ ಮುಖ್ಯಮಂತ್ರಿ ಪ್ರವೇಶಿಸುತ್ತಿದ್ದಂತೆ ಕಿವಿಯಲ್ಲಿ ಇರಿಸಿಕೊಂಡರು.

ಇದನ್ನು ಕಂಡ ಸಿಎಂ, ಯಾಕೆ ಕಿವಿಯಲ್ಲಿ ಹೂವು ಇಟ್ಟುಕೊಂಡಿದ್ದೀರಿ. ಇದು ಸರಿ ಯಲ್ಲ. ಇಷ್ಟು ದಿನ ನೀವು ರಾಜ್ಯದ ಜನರಿಗೆ ಕಿವಿ ಮೇಲೆ ಹೂವು ಇಡುತ್ತ ಬಂದಿರಿ, ಇನ್ನುಮುಂದೆ ನಿಮಗೆ ಕಿವಿ ಮೇಲೆ ಹೂವೇ ಗತಿ ಎಂದು ಛೇಡಿಸಿದರು.

ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಬಜೆಟ್‌ ರಾಜ್ಯದ ಏಳು ಕೋಟಿ ಜನರಿಗೆ ಕಿವಿ ಮೇಲೆ ಹೂವು ಇಡುವ ಬಜೆಟ್‌. ನಿಮ್ಮದು ಸುಳ್ಳಿನ ಕಾರ್ಖಾನೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ 56 ಕಾರ್ಯಕ್ರಮ ಅನುಷ್ಠಾನ ಮಾಡಿಲ್ಲ, ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.90ರಷ್ಟು ಭರವಸೆ ಈಡೇರಿಸಿಲ್ಲ, ನೀವು ಮಂಡಿಸುವ ಬಜೆಟ್‌ಗೆ ಮಹತ್ವವೇ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಸದಸ್ಯರು ಒಮ್ಮೆಲೆ ಎದ್ದು ನಿಂತು ವಿರೋಧ ವ್ಯಕ್ತಪಡಿಸಿದಾಗ ಎದ್ದು ನಿಂತರೆ ಹೆದರಿಕೊಳ್ಳುತ್ತೇನಾ ಎಂದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಖ್ಯಮಂತ್ರಿಯವರು ಬಜೆಟ್‌ ಮಂಡಿಸಲಿ ಎಂದು ಮನವಿ ಮಾಡಿದರು. ಬಜೆಟ್‌ ಮಂಡನೆಗೆ ಮುನ್ನ ಮುಖ್ಯಮಂತ್ರಿಯವರಿಗೆ ಮಾತನಾಡಲು ಅವಕಾಶ ಕೊಟ್ಟ ನೀವು, ನಮಗೇಕೆ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಪ್ರಶ್ನಿಸಿದರು.

Advertisement

ಈ ನಡುವೆ ಕಾಗೇರಿ ಅವರು, ನೀವು (ಬಿಜೆಪಿ) ಕೇಸರಿ ಬಣ್ಣ ನಮ್ಮದು ಅನ್ನುತ್ತೀರಿ. ಕಾಂಗ್ರೆಸ್‌ ಸದಸ್ಯರು ಕೇಸರಿ ಬಣ್ಣದ ಹೂವು ಕಿವಿಯಲ್ಲಿ ಇಟ್ಟುಕೊಂಡು ಬಂದಿದ್ದಾರೆ ಎಂದು ಕಾಲೆಳೆದರು. ಕಾಂಗ್ರೆಸ್‌ ಸದಸ್ಯರ ಗದ್ದಲದ ನಡುವೆಯೇ ಮುಖ್ಯಮಂತ್ರಿಯವರು ಬಜೆಟ್‌ ಭಾಷಣ ಓದಲು ಆರಂಭಿಸಿದರು. ಅನಂತರ ಕಾಂಗ್ರೆಸ್‌ ಸದಸ್ಯರು ಸುಮ್ಮನಾದರು.

ಹೂವು ಇರಿಸಿಕೊಂಡೇ ಪ್ರತಿಕ್ರಿಯೆ
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡುವಾಗಲೂ ಕಿವಿಯಲ್ಲಿ ಹೂವು ಇಟ್ಟುಕೊಂಡೇ ಇದ್ದರು. ಕಾಂಗ್ರೆಸ್‌ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಹೂವು ಇಟ್ಟುಕೊಂಡಿದ್ದು ಎಲ್ಲರ ಗಮನ ಸೆಳೆಯಿತು.

ಈ ನಡುವೆ ಡಿ.ಕೆ. ಶಿವಕುಮಾರ್‌ ಅವರು ಕೆಂಗಲ್‌ ಹನುಮಂತಯ್ಯ ಗೇಟ್‌ ಮೂಲಕ ಹೊರ ಹೋಗುವಾಗ ಯಡಿಯೂರಪ್ಪ ಎದುರಾದರು, ಕಿವಿಯಲ್ಲಿ ಹೂವು ಇದ್ದದ್ದು ನೋಡಿ ನಕ್ಕು ಮುಂದೆ ಸಾಗಿದರು.

ಕವಿತೆ ಸಾಲು ಓದಿದ ಸಿಎಂ
153 ಪುಟಗಳ ಬಜೆಟನ್ನು ಮುಖ್ಯಮಂತ್ರಿಯವರು 2.40 ತಾಸು ಕಾಲ ಓದಿದರು. 10.15ಕ್ಕೆ ಆರಂಭಗೊಂಡ ಭಾಷಣ 12.55ಕ್ಕೆ ಮುಗಿಯಿತು. ಕೃಷಿ ವಲಯದ ಬಜೆಟ್‌ ಓದುವಾಗ ನರಸಿಂಹಸ್ವಾಮಿಯವರ “ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ, ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ’ ಸಾಲನ್ನು ಉಲ್ಲೇಖೀಸಿದರು. ಅದೇ ರೀತಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ ಡಾ| ಜಿ.ಎಸ್‌. ಶಿವರುದ್ರಪ್ಪ ಅವರ “ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಎಂಬ ಕವಿತೆಯ ಸಾಲು ಓದಿದರು.

Advertisement

Udayavani is now on Telegram. Click here to join our channel and stay updated with the latest news.

Next