Advertisement

ರಾಜ್ಯಕ್ಕೆ ನೀರಾವರಿ; ಡೋಂಟ್‌ವರಿ: ಮಹಾದಾಯಿಗೆ ಸಾವಿರ ಕೋಟಿ ರೂಪಾಯಿ

10:45 PM Feb 17, 2023 | Team Udayavani |

ಕೃಷಿ ಉತ್ಪಾದನೆ ಹೆಚ್ಚಿಸಲು ಈ ವರ್ಷ 1.5 ಲಕ್ಷ ಎಕ್ರೆ ಪ್ರದೇಶಕ್ಕೆ ಹೆಚ್ಚುವರಿಯಾಗಿ ನೀರಾವರಿ ಕಲ್ಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕಳಸಾ ಬಂಡೂರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನದ ಭರವಸೆ ನೀಡಲಾಗಿದೆ. ಸ್ವತಃನೀರಾವರಿ ತಜ್ಞರೂ ಆಗಿರುವ ಮುಖ್ಯ­ಮಂತ್ರಿ ಬೊಮ್ಮಾಯಿ ಈ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

Advertisement

ಬಿಜೆಪಿ ಅಧಿಕಾರ ವಹಿಸಿಕೊಂಡ ಅನಂತರ ನೀರಾವರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲಾಗಿದ್ದು 1.25 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ಇದೀಗ 1.5 ಲಕ್ಷ ಎಕ್ರೆ ಪ್ರದೇಶಕ್ಕೆ ನೀರಾ­ವರಿ ಒದಗಿಸುವ ಗುರಿ ಹೊಂದಿದ್ದು 25 ಸಾವಿರ ಕೋಟಿ ರೂ. ಮೊತ್ತವನ್ನು ನೀರಾವರಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.

ಸಮುದ್ರಕ್ಕೆ ಸೇರುವ ನೀರನ್ನು ತಡೆ­ಹಿಡಿದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿ­ಸಲು ರೂಪಿಸಲಾಗಿರುವ ಪಶ್ಚಿಮ­ವಾಹಿನಿ ಯೋಜನೆಯ ಎರಡನೇ ಹಂತದಡಿ ಅನುಮೋದನೆಯಾಗಿ­ರುವ 378 ಕೋಟಿ ರೂ.ಗಳ ಕಾಮಗಾರಿ ಅನುಷ್ಠಾನಕ್ಕೆ ಸರಕಾರ ತೀರ್ಮಾನಿಸಿದೆ.

ಕೆ.ಸಿ.ವ್ಯಾಲಿ ಮತ್ತು ವಿವಿಧ ಯೋಜ­ನೆಗಳ ಮೂಲಕ ಬೆಂಗ­ಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ­ಯಿಂದ ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟ ಇನ್ನಷ್ಟು ಸುಧಾ­ರಿಸಿ ಕೃಷಿಗೆ ಯೋಗ್ಯವನ್ನಾಗಿ ಮಾಡಲು ಟೆರಿಟೆರಿ ಮಾದರಿಯ ಸಂಸ್ಕರಣ ಕ್ರಮ ಅಳವಡಿಕೆಯನ್ನು ಪ್ರಸ್ತಾವಿಸಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಡಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭೂ ಸ್ವಾಧೀನಕ್ಕೆ ಏಕರೂಪ ದರ ನಿಗದಿಪಡಿಸುವ ಸಂಬಂಧ ಐತಿಹಾಸಿಕ ನಿರ್ಣಯ­ಗೊಂಡಿದ್ದು ಶೀಘ್ರ ಭೂ ಪರಿಹಾರಕ್ಕೆ 5 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಒದಗಿಸುವ ಭರವಸೆ ನೀಡಲಾಗಿದೆ.

Advertisement

ನೀರಾವರಿ ಆದ್ಯತೆ ದೃಷ್ಟಿಯಿಂದ 2022-23ನೇ ಸಾಲಿನಲ್ಲಿ 111,236 ಕೋಟಿ ರೂ. ಮೊತ್ತದ 38 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದನ್ನು ಈ ವರ್ಷ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಗತಿಯಲ್ಲಿರುವ ಜಗಳೂರು, ಕಿತ್ತೂರು, ಬಾಳಂಬೀಡ, ಹರಪನ­ಹಳ್ಳಿ, ಯಾದಗಿರಿ, ರಾಯಚೂರಿನ ಕೆರೆ ತುಂಬಿಸುವ ಜತೆಗೆ ಸಸಾಲಟ್ಟಿ-ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮಿ ಮತ್ತು ವೆಂಕಟೇಶ್ವರ ಏತ ನೀರಾವರಿ ಯೋಜನೆ, ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಯೋಜನೆ ಈ ವರ್ಷ ಪೂರ್ಣ­ಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಆನ್‌ಲೈನ್‌ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಸಿಸ್ಟಂ
ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿನ ಯೋಜನೆಗಳ ಪ್ರಗತಿ ಮೇಲ್ವಿಚಾರಣೆ ಹಾಗೂ ಗುತ್ತಿಗೆದಾರರಿಗೆ ನೇರವಾಗಿ ಆನ್‌ಲೈನ್‌ ಬಿಲ್‌ ಪಾವತಿಸಲು ಆನ್‌ಲೈನ್‌ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಸಿಸ್ಟಂ ಪ್ರಾರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈ ವರ್ಷವೇ ಎತ್ತಿನ ಹೊಳೆ ನೀರು
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು ತುಮಕೂರು ಜಿಲ್ಲೆಯವರೆಗಿನ ಗುರುತ್ವ ಕಾಲುವೆ ಮತ್ತು ಫೀಡರ್‌ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಈ ವರ್ಷ ನೀರು ಹರಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಮತ್ತು ಶ್ರೀನಿವಾಸಪುರ-ಕೋಲಾರ ಫೀಡರ್‌ ಚಾಲನೆಗಳ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಲಿದೆ.
ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಹೂಡಿರುವ ದಾವೆ ಶೀಘ್ರ ಇತ್ಯರ್ಥಪಡಿಸಿ ಕಾಮಗಾರಿ ಪ್ರಾರಂಭಿಸಲು ಅಗತ್ಯ ಅನುದಾನ ಒದಗಿಸಲಾಗುವುದು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಣ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನ ಜಲಾಶಯ ನಿರ್ಮಿಸಲು ಯೋಜನಾ ವರದಿ ಸಿದ್ಧವಾಗಿದ್ದು ಈ ಸಂಬಂಧ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಯವರ ಜತೆ ಸಭೆ ನಡೆಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಮಹಾದಾಯಿ ಬದ್ಧತೆ
ಕಳಸಾ ಮತ್ತು ಬಂಡೂರಿ ನಾಲಾ ತಿರುವ ಯೋಜನೆಗಳಿಗೆ ಮಹಾದಾಯಿ ನ್ಯಾಯಮಂಡಳಿಯಿಂದ ಹಂಚಿಕೆಯಾದ 3.90 ಟಿಎಂಸಿ ನೀರಿನ ಬಳಕೆಗೆ ಯೋಜನಾ ವರದಿ ತಯಾರಿಸಿ ಸತತ ಪ್ರಯತ್ನದಿಂದ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಪಡೆಯಲಾಗಿದೆ. ಈ ಕಾಮಗಾರಿ ಪ್ರಾರಂಭಿಸಲು 1 ಸಾವಿರ ಕೋಟಿ ರೂ. ಮೀಸಲಿಟ್ಟು ತ್ವರಿತವಾಗಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಸರಕಾರದ ಪ್ರಯತ್ನದಿಂದಾಗಿ ರಾಷ್ಟ್ರೀಯ ಯೋಜನೆ ಮಾನ್ಯತೆ ದೊರಕಿದ್ದು 5,300 ಕೋಟಿ ರೂ. ಕೇಂದ್ರದ ಸಹಾಯಧನ ಲಭ್ಯವಾಗಿದ್ದು ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಹೊಸ ಘೋಷಣೆ
1. ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ 1 ಸಾವಿರ ಕೋಟಿ ರೂ.
2. 1.5 ಲಕ್ಷ ಎಕ್ರೆ ಕೃಷಿ ಜಮೀನಿಗೆ ನೀರಾವರಿ ಸಾಮರ್ಥ್ಯ ಹೆಚ್ಚಳ
3.ರೈತರಿಗೆ ಪರಿಕರ ಸಂಗ್ರಹಕ್ಕೆ ಭೂಸಿರಿ ಯೋಜನೆ
4.ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಭರವಸೆ
5.ಎತ್ತಿನಹೊಳೆ ಯೋಜನೆಯಡಿ ತುಮಕೂರುವರೆಗೆ ಈ ವರ್ಷ ನೀರು
6.ನವಿಲೆ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಕ್ರಮ
7.ಆನ್‌ಲೈನ್‌ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಸಿಸ್ಟಂ ಆರಂಭ

 

 

Advertisement

Udayavani is now on Telegram. Click here to join our channel and stay updated with the latest news.

Next