Advertisement

Karnataka ಲಂಚದ ಲೆಟರ್‌: ಮುಗಿಯದ ಜಟಾಪಟಿ

12:36 AM Aug 09, 2023 | Team Udayavani |

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಹೊರಿಸಿ ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರ ಪ್ರಕರಣದ ಜಟಾಪಟಿ ಮಂಗಳವಾರವೂ ಮುಂದುವರಿದಿದೆ. ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಸರಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವರು ಸಮರ್ಥಿಸಿಕೊಂಡಿರುವ ಬೆನ್ನಲ್ಲೇ, ಪತ್ರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಎಸ್ಪಿಯವರಿಗೆ ದೂರು ನೀಡಿದ್ದಾರೆ.

Advertisement

ಪತ್ರ ಕುರಿತು ಸೂಕ್ತ ಕ್ರಮಕ್ಕೆ ದೂರು
ಮಂಡ್ಯ: ಸಚಿವ ಎನ್‌. ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಹೊರಿಸಿ ಜಿಲ್ಲೆಯ ಏಳು ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ವಿ.ಎಸ್‌. ಅಶೋಕ್‌ ಅವರು ಪೊಲೀಸ್‌ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಕಳೆದ 2022ರ ಎಪ್ರಿಲ್‌ 13ರಿಂದ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೆ ಆ. 7ರಂದು ಕೃಷಿ ಸಚಿವರು, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಕೇಳಿ ಬಂದಿದೆ. ಆದ್ದರಿಂದ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೈಸೂರಿನಿಂದ ಪೋಸ್ಟ್‌ ಆಗಿರುವ ಶಂಕೆ
ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಅರ್ಜಿಯು ಮೈಸೂರಿನಿಂದ ಅಂಚೆ ಮೂಲಕ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಇಲಾಖೆಗೆ ಸಂಬಂಧಪಡದ ಅನಾಮಿಕ ರಮೇಶ್‌ ಎಂಬ ಹೆಸರಿನಲ್ಲಿ ಕೃಷಿ ಇಲಾಖೆಯ ಅಧಿ ಕಾರಿಯೊಬ್ಬರ ಮೊಬೈಲ್‌ ನಂಬರ್‌ ನಮೂದಿಸಿ, ರಾಜ್ಯಪಾಲರಿಗೆ ಮೈಸೂರು ನಗರದ ಅಂಚೆ ಪೆಟ್ಟಿಗೆಯಲ್ಲಿ ಹಾಕಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ.

ಸರಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ
ಮೈಸೂರು: ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ದೂರಿದರು. ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಶಾಸಕರ ಪತ್ರ ನಕಲಿ ಮಾಡಿದ್ದರು. ಇದಕ್ಕೆ ವ್ಯಾಪಕ ಪ್ರಚಾರ ಸಹ ಸಿಕ್ಕಿತ್ತು. ಸಚಿವ ಎನ್‌. ಚಲುವರಾಯಸ್ವಾಮಿ ವಿಚಾರದಲ್ಲೂ ಈಗಾಗಲೆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಪತ್ರ ನಾವು ಬರೆದಿಲ್ಲ, ಅದು ನಕಲಿ. ಈ ವಿಚಾರವೇ ನಮಗೆ ಗೊತ್ತಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜನರಿಗೆ ಸರಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದೊಂದು ರಾಜಕೀಯ ಆಟ. ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದರು. ವೈಎಸ್‌ಟಿ ಟ್ಯಾಕ್ಸ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರ್ದಿಷ್ಟವಾದ ದಾಖಲೆಗಳಿದ್ದರೆ ಕುಮಾರಸ್ವಾಮಿ ಅವರು ಕೊಡಲಿ. ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಅದನ್ನು ಬಿಟ್ಟು ಹಿಟ್‌ ಆ್ಯಂಡ್‌ ರನ್‌ ಮಾಡುವುದು ಸರಿಯಲ್ಲ. ಅಧಿಕಾರಿಗಳಿಗೆ ತೊಂದರೆಯಾದರೆ ನೇರವಾಗಿ ಲೋಕಾಯುಕ್ತಗೆ ದೂರು ನೀಡಬಹುದು ಎಂದು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next