ಮೈಸೂರು: ಪ್ರಸಕ್ತ ರಣಜಿ ಋತುವಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮೊದಲ ಹೆಜ್ಜೆಯನ್ನಿಟ್ಟಿದೆ. ಪ್ರವಾಸಿ ಮಹಾರಾಷ್ಟ್ರ ವಿರುದ್ಧ ಆರಂಭವಾದ ಪಂದ್ಯದಲ್ಲಿ ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ಕರ್ನಾಟಕ ಎದುರಾಳಿ ತಂಡವನ್ನು 113 ರನ್‌ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿದೆ.
ಇಲ್ಲಿನ ಮಾನಸ ಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಬುಧವಾರದಿಂದ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು.
ಎದುರಾಳಿ ತಂಡದ ಸಾಧಾರಣ ಮೊತ್ತದ ಎದುರು ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ 3 ವಿಕೆಟ್ ನಷ್ಟಕ್ಕೆ 70 ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕ ಮೊದಲ ದಿನದ ಗೌರವ ಸಂಪಾದಿಸಿದೆ. ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ 40 ಓವರ್‌ಗೆ ದಿನದಾಟ ಅಂತ್ಯಗೊಳಸಿದೆ. ಆರಂಭಿಕ ಆಟಗಾರ ಡಿ.ನಿಶ್ಚಲ್ (32) ಹಾಗೂ ಜೆ.ಸುಚಿತ್ (2) ಅಜೇಯರಾಗಿ ಕಣದಲ್ಲಿದ್ದಾರೆ.
ಬೌಲರ್‌ಗಳ ನಿಖರ ಬೌಲಿಂಗ್: ಮಹಾರಾಷ್ಟ್ರ ಇನಿಂಗ್ಸ್ ಆರಂಭದಿಂದಲೇ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿದ ರಾಜ್ಯದ ಬೌಲರ್‌ಗಳು ಎದುರಾಳಿ ತಂಡವನ್ನು 113 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಬೆನ್ನುನೋವಿನ ಕಾರಣ ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಆರ್. ವಿನಯ್‌ಕುಮಾರ್(19ಕ್ಕೆ 2) ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು ಮಹಾರಾಷ್ಟ್ರ ತಂಡದ ಕುಸಿತಕ್ಕೆ ನಾಂದಿ ಹಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಭಿಮನ್ಯು ಮಿಥುನ್ (42ಕ್ಕೆ 2) ಹಾಗೂ ರೋನಿತ್ ಮೋರೆ (16ಕ್ಕೆ 2) ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಪರಿಣಾಮ ಮಹಾರಾಷ್ಟ್ರ ತಂಡ ಕೇವಲ 50 ರನ್‌ಗಳಿಸುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸುಚಿತ್ ಸ್ಪಿನ್ ಮೋಡಿ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮಹಾರಾಷ್ಟ್ರ ತಂಡಕ್ಕೆ ಗಾಯಕ್ವಾಡ್ (39) ಹಾಗೂ ವಿಕೆಟ್ ಕೀಪರ್ ಮೋಟ್ವಾನಿ (34) ಚೇತರಿಕೆ ನೀಡುವ ಯತ್ನ ನಡೆಸಿದರು. ಇವರಿಬ್ಬರಿಂದಲೇ ಆ ತಂಡದ ಮೊತ್ತ ನೂರರ ಗಡಿದಾಟಲು ಸಾಧ್ಯವಾಯಿತು. ಇಬ್ಬರೂ ಆಟಗಾರರು ಕರ್ನಾಟಕ ಬೌಲರ್‌ಗಳಿಗೆ ಸ್ವಲ್ಪಮಟ್ಟಿನ ಪ್ರತಿರೋಧ ನೀಡಿದ ಪರಿಣಾಮ ಭೋಜನ ವಿರಾಮದ ವೇಳೆಗೆ ಮಹಾರಾಷ್ಟ್ರ 5 ವಿಕೆಟ್ ನಷ್ಟಕ್ಕೆ 84 ರನ್‌ಗಳಿಸಿತ್ತು. ಈ ಹಂತದಲ್ಲಿ ಬೌಲಿಂಗ್ ದಾಳಿ ಆರಂಭಿಸಿದ ಸ್ಥಳೀಯ ಪ್ರತಿಭೆ ಜೆ.ಸುಚಿತ್(26ಕ್ಕೆ 4) ತಮ್ಮ ಸ್ಪಿನ್ ಕೈಚಳಕ ತೋರಿದರು.
ತಮ್ಮ ನಿಖರ ಎಡಗೈ ಆಫ್ಸ್ಪಿನ್ ಮೂಲಕ ಸುಚಿತ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಕ್ಕಾಬಿಕ್ಕಿ ಮಾಡಿದರು. ಇದರ ಪರಿಣಾಮ ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸುಚಿತ್ ಬೌಲಿಂಗ್‌ನ ಮರ್ಮವನ್ನರಿಯದೇ ತತ್ತರಿಸಿದರು. ಇದು ಮಹಾರಾಷ್ಟ್ರ ಇನಿಂಗ್ಸ್ ಅತಿ ಶೀಘ್ರ ಮುಕ್ತಾಯಕ್ಕೆ ಕಾರಣವಾಯಿತು. ಈ ಬಾರಿ ರಣಜಿ ಋತುವಿನಲ್ಲಿ ಸುಚಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಿಂದಿನ ವಿದರ್ಭ ಹಾಗೂ ಮುಂಬೈ ವಿರುದ್ಧದ ಪಂದ್ಯದಲ್ಲೂ ಅವರು ತಮ್ಮ ಸ್ಪಿನ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಗಲಿಬಿಲಿ ಮಾಡಿದ್ದರು.
ಕಳಪೆ ಫಾರ್ಮ್: ಸ್ಟುವರ್ಟ್ ಬಿನ್ನಿಗೆ ಸ್ಥಾನವಿಲ್ಲ
ಹಿಂದಿನ ಎರಡೂ ಪಂದ್ಯಗಳಲ್ಲಿ ರಾಜ್ಯದ ಖ್ಯಾತ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಕಳಪೆ ಆಟವಾಡಿದ್ದು ಅವರಿಗೆ ಮುಳುವಾಗಿದೆ. ಒಟ್ಟು ನಾಲ್ಕು ಇನಿಂಗ್ಸ್‌ಗಳಲ್ಲಿ ಕೇವಲ 53 ರನ್ ಒಗ್ಗೂಡಿಸಿರುವ ಅವರು, ಬೌಲಿಂಗ್‌ನಲ್ಲೂ ವಿಫಲರಾಗಿ ಒಂದೇ ಒಂದು ವಿಕೆಟ್ ತೆಗೆದುಕೊಂಡಿದ್ದರು. ಆದ್ದರಿಂದ ಅವರನ್ನು ಹೊರಗಿಡಲಾಗಿದೆ. ಇದರ ಜೊತೆಗೆ ಹಿಂದಿನ ಪಂದ್ಯದಲ್ಲಿ ಕುತ್ತಿಗೆ ನೋವಿನಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ನಾಯಕ ವಿನಯ್ ಕುಮಾರ್, ಚೇತರಿಸಿಕೊಂಡಿದ್ದು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
– ಸಿ. ದಿನೇಶ್