Advertisement

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

11:04 PM Nov 18, 2024 | Team Udayavani |

 

Advertisement

 

 

ಬೆಂಗಳೂರು: ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸುವ ಕಲರ್‌ ಕಾಟನ್‌ ಕ್ಯಾಂಡಿ, ಕಬಾಬ್‌, ಗೋಬಿ ಮಂಚೂರಿಗಳ ಮಾರಾಟ ನಿಷೇಧ ಆದೇಶ ಹೊರಡಿಸಿ ವರ್ಷ ಪೂರ್ಣಗೊಳ್ಳುವುದರ ಒಳಗಾಗಿ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಣ್ಣ ಬಣ್ಣದ ಕಾಟನ್‌ ಕ್ಯಾಂಡಿ ಮಾರಾಟ ಮತ್ತೆ ಆರಂಭವಾಗಿದೆ. ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಕೆಯ ಪ್ರಕರಣಗಳು ವರದಿಯಾಗುತ್ತಿವೆ.

ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಬಣ್ಣದ ಕಾಟನ್‌ ಕ್ಯಾಂಡಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೆಚ್ಚಿನವು ಮನುಷ್ಯ ಸೇವನೆಗೆ ಅಸುರಕ್ಷಿತ ಹಾಗೂ ಆರೋಗ್ಯಕ್ಕೆ ಮಾರಕವಾದ ಬಣ್ಣವನ್ನು ಬಳಕೆ ಮಾಡಿರುವುದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ 2024ರ ಮಾ. 11ರಂದು ಇಲಾಖೆಯು ಕಾಟನ್‌ ಕ್ಯಾಂಡಿ ತಯಾರಿಕೆಯಲ್ಲಿ ಕೃತಕ ಬಣ್ಣ ಬೆರೆಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

Advertisement

ಗರಿಗೆದರಿದ ಬಣ್ಣದ ಕ್ಯಾಂಡಿ!
ಇತ್ತೀಚೆಗಿನ ದಿನಗಳಲ್ಲಿ ಬಿಳಿ ಕ್ಯಾಂಡಿ ಖರೀದಿಗೆ ಮಕ್ಕಳು ಹಾಗೂ ಸಾರ್ವಜನಿಕರು ನಿರೀಕ್ಷಿತ ಪ್ರಮಾಣದಲ್ಲಿ ಆಸಕ್ತಿ ವಹಿಸದ ಹಿನ್ನೆಲೆಯಲ್ಲಿ ವಿವಿಧೆಡೆ ಗುಲಾಬಿ ಮತ್ತಿತರ ಬಣ್ಣಗಳ ಕಾಟನ್‌ ಕ್ಯಾಂಡಿ ಮಾರಾಟ ಗರಿಗೆದರಿದೆ.

ದೃಢವಾದರೆ ಕಠಿನ ಕ್ರಮ
ನಿಯಮ ಉಲ್ಲಂ ಸಿದ ಆಹಾರ ತಯಾರಕರಿಗೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದರೊಂದಿಗೆ 10 ಲಕ್ಷ ರೂ. ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಕಾನೂನಿನಲ್ಲಿ ಇಷ್ಟೆಲ್ಲ ಕಠಿನ ಕ್ರಮಗಳಿದ್ದರೂ ಕೃತಕ ಬಣ್ಣಗಳ ಬಳಕೆ ಮಾತ್ರ ಕಡಿಮೆ ಆಗಿಲ್ಲ. ಇಲಾಖೆಯು ಬಣ್ಣದ ಕಾಟನ್‌ ಕ್ಯಾಂಡಿ ಮಾರಾಟ ಮಾಡಿದವರ ವಿರುದ್ಧ ಯಾವ ರೀತಿಯಾದ ಕ್ರಮ ಕೈಗೊಂಡಿದೆ ಎನ್ನುವ ಮಾಹಿತಿ ಲಭ್ಯವಿಲ್ಲ.

ವ್ಯವಸ್ಥಿತ ಕಾರ್ಯಾಚರಣೆ
ಕೇವಲ ಬಣ್ಣದ ಕಾಟನ್‌ ಕ್ಯಾಂಡಿ ಮಾತ್ರವಲ್ಲ, ಗೋಬಿ ಮಂಚೂರಿ ಹಾಗೂ ಕಬಾಬ್‌ಗಳಲ್ಲಿ ಕೃತಕ ಬಣ್ಣವನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯು ವ್ಯವಸ್ಥಿತ ಕಾರ್ಯಾಚರಣೆ ನಡೆಸಬೇಕಾಗಿದೆ.

ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಕೃತಕ ಬಣ್ಣ ಬಳಕೆಗೆ ನಿಷೇಧವಿದೆ. ವಿಷಕಾರಿ ಕೃತಕ ಬಣ್ಣ ಬಳಕೆಯಾದ ಬಳಿಕ ಎಲ್ಲೆಡೆ ಬಿಳಿಯ ಕಾಟನ್‌ ಕ್ಯಾಂಡಿ ಮಾರಾಟವಾಗುತ್ತಿತ್ತು. ಈಗ ಬಣ್ಣದ ಕಲರ್‌ ಕ್ಯಾಂಡಿ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರೀಕ್ಷೆ ಹಾಗೂ ತಪಾಸಣೆ ನಡೆಸಲು ಸೂಚಿಸಲಾಗುತ್ತದೆ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next