ರಾಯಚೂರು:ಮಹಿಳೆಯೊಬ್ಬರು ನಾಲ್ಕು ಕಾಲು ಹಾಗೂ 2 ಶಿಶ್ನ ಇರುವ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ರಾಯಚೂರಿನ ಧಾಡೆಯಸುಗುರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ ರಾಯಚೂರು ತಾಲೂಕಿನ ಸಿಂಧನೂರಿನ ಪುಲದಿನ್ನಿ ಗ್ರಾಮದ ಲಲಿತಮ್ಮ(23ವರ್ಷ) ಹಾಗೂ ಚೆನ್ನಬಸಪ್ಪ(26ವರ್ಷ) ದಂಪತಿಗೆ ಗಂಡು ಮಗು ಜನಿಸಿತ್ತು.
ಆದರೆ ಈ ಮಗುವಿಗೆ 2 ಕೈ, 4 ಕಾಲು ಮತ್ತು 2 ಲಿಂಗಗಳಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದೀಗ ಮಗುವನ್ನು ಬಳ್ಳಾರಿಯ ವಿಜಯನಗರ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ವಿಐಎಂಎಸ್) ಗೆ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ತಿಳಿಸಿದೆ.
ಮಗುವನ್ನು ಬಳ್ಳಾರಿಗೆ ಕಳುಹಿಸಲು ಎಲ್ಲಾ ರೀತಿಯ ನೆರವನ್ನು ನೀಡಲಾಗಿದೆ. ಇದು ನಾರ್ಮಲ್ ಹೆರಿಗೆ ಎಂದು ಡಾ.ವಿರೂಪಾಕ್ಷ ಟಿ ವಿವರಿಸಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬಳ್ಳಾರಿಗೆ ಮಗುವನ್ನು ಕಳುಹಿಸಿದ್ದು, ಈ ಮಗು ತನಗೆ ದೇವರು ಕೊಟ್ಟ ವರ ಎಂದು ಮಗುವಿನ ತಾಯಿ ಲಲಿತಮ್ಮ ವೈದ್ಯರ ಬಳಿ ತಿಳಿಸಿರುವುದಾಗಿ ವರದಿ ಹೇಳಿದೆ.
ಕೊನೆಗೆ ಮಗುವಿನ ತಾಯಿಯ ಕುಟುಂಬಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮಾಹಿತಿ ನೀಡಿ ಮನವೊಲಿಸಿದ ಬಳಿಕ ಮಗುವನ್ನು ಬಳ್ಳಾರಿ ಆಸ್ಪತ್ರೆಗೆ ಕಳುಹಿಸಲು ಸಮ್ಮತಿ ಸೂಚಿಸಿರುವುದಾಗಿ ವರದಿ ವಿವರಿಸಿದೆ.
ಭಾನುವಾರವೇ ವಿಐಎಂಎಸ್ ಸರ್ಜನ್ಸ್ ಜೊತೆ ಮಾತನಾಡಿದ್ದು, ಅವರು ಮಗುವನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ಡಾ.ವಿರೂಪಾಕ್ಷ ಹೇಳಿದ್ದಾರೆ.
ಮಗುವಿನ ದೇಹ ಸ್ಥಿತಿ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದೊಂದು ತುಂಬಾ ಸವಾಲಿನ ಕೆಲಸವಾಗಿದೆ ಎಂದು ವಿಐಎಂಎಸ್ ವೈದ್ಯ ಡಾ.ದಿವಾಕರ್ ಗಡ್ಡಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.