Advertisement

ರಾಜ್ಯದಲ್ಲಿ 65 ಸಾವಿರ ಕೋಟಿ ರೂ. ಹೂಡಿಕೆ; ದಾವೋಸ್‌ನ 25 ಕಂಪೆನಿ ಜತೆ ಸಿಎಂ ಮಾತುಕತೆ

10:38 PM May 27, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಂದಾಜು 65 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕಂಪೆನಿಗಳು ಮುಂದೆ ಬಂದಿವೆ. ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶುಕ್ರವಾರ ದಾವೋಸ್‌ನಿಂದ ಬೆಂಗಳೂರಿಗೆ ಆಗಮಿಸಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಧಿಸಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲದ ಮಾನವ ಸಂಪನ್ಮೂಲ, ಆರ್‌ಎಂಡ್‌ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹಕಗಳು, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ರಾಜ್ಯದ ಮೇಲೆ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಸುಮಾರು 25 ಕಂಪೆನಿಗಳೊಂದಿಗೆ ಚರ್ಚಿಸಲಾಗಿದೆ. ಭಾರತವನ್ನು ಹೊಸ ಆರ್ಥಿಕ ಶಕ್ತಿಯಾಗಿ ವಿಶ್ವ ಎದುರು ನೋಡುತ್ತಿದೆ. ಕರ್ನಾಟಕ ರಾಜ್ಯದ ಎಲ್ಲ ರಂಗಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು ಎಂದರು.

ರೆನ್ಯೂ ಪವರ್‌ ಪ್ರೈ.ಲಿ. ಕಂಪೆನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್‌, ಗ್ರೀನ್‌ ಹೈಡ್ರೋಜನ್‌ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.

ಲುಲು ಗ್ರೂಪ್‌, ಜ್ಯೂಬಿಲಿಯಂಟ್‌ ಗ್ರೂಪ್‌, ಹಿಟಾಚಿ ಎನರ್ಜಿ, ಸೀಮೆನ್ಸ್‌ , ಅಬ್‌ ಇನ್ಬೇವ್‌, ದಸ್ಸಾಲ್ಟಸಿಸ್ಟಂ, ಆರ್ಸೆಲಾರ್‌ ಮಿತ್ತಲ್‌ ಸಂಸ್ಥೆ ಭಾರ್ತಿ ಎಂಟರ್‌ ಪ್ರೈಸಸ್‌ ಮುಂತಾದವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ ಎಂದರು.

Advertisement

ಇದಲ್ಲದೆ ಅದಾನಿ ಗ್ರೂಪ್‌, ದಾಲಿ¾ಯಾ ಸಿಮೆಂಟ್‌, ಜಾನ್ಸನ್‌ ಕಂಟ್ರೋಲ್ಸ್‌, ಹನಿವೆಲ್ ಐಬಿಎಂ, ಐಕಿಯ ಸ್ಟೋರ್ಸ್‌, ಪೇಪಾಲ್ , ಆಕ್ಸಿಸ್‌ ಬ್ಯಾಂಕ್‌ ಸಂಸ್ಥೆಗಳು ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶ ಬಗ್ಗೆ ಆಸಕ್ತಿ ತೋರಿರುವುದಾಗಿ ತಿಳಿಸಿದರು.

ಸ್ಥಿರ ಸರಕಾರ ಗೊಂದಲವಿಲ್ಲ
ರಾಜ್ಯದಲ್ಲಿ ಸ್ಥಿರ ಸರಕಾರವಿದ್ದು ಲಕ್ಷ್ಮೀ ಮಿತ್ತಲ್‌ ಅವರು ಸ್ವಾಭಾವಿಕವಾಗಿ ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಹೆಚ್ಚು ಪ್ರಚಾರ ನೀಡಲಾಗಿದೆ. ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಈ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ಸ್ಥಿರ ಸರಕಾರ ಇರುವ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವೆ. ಕಾನೂನು ಸರಳಗೊಳಿಸಿರುವ ಬಗ್ಗೆಯೂ ಅವರಿಗೆ ತಿಳಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹದಿಂದ ಬಂಡವಾಳ ಹೂಡಿಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಿಂದಿನ ಸರಕಾರಗಳು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಈಗ ನಾವು ವ್ಯವಸ್ಥೆ ಸರಿಪಡಿಸಬೇಕಿದೆ. ನವೆಂಬರ್‌ ವೇಳೆಗೆ ನಗರದ ಮೂಲಸೌಲಭ್ಯವನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ.
-ಬಸವರಾಜ ಬೊಮ್ಮಾಯಿ, ಸಿಎಂ

ಶೀಘ್ರ ಹಳೆ ಕೈಗಾರಿಕಾ ವಲಯಗಳ ಅಭಿವೃದ್ಧಿ: ನಿರಾಣಿ
ಬೆಂಗಳೂರು: ರಾಜ್ಯದಲ್ಲಿರುವ ಹಳೆಯ ಕೈಗಾರಿಕಾ ವಲಯಗಳನ್ನು ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಶೀಘ್ರದಲ್ಲೇ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಲಘು ಉದ್ಯೋಗ ಭಾರತಿ ಸಂಸ್ಥೆಯಿಂದ ನಗರದಲ್ಲಿ ಶುಕ್ರವಾರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿನ ಸಾಧಕರಿಗೆ ನಾನಾ ವಿಧದ ಉದ್ಯಮ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ದೇಶದ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯದಲ್ಲಿರುವ ಎಲ್ಲ ಹಳೆಯ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕೈಗಾರಿಕೆಗಳಿಂದ ಸರಕಾರಕ್ಕೆ ಬರುವ ತೆರಿಗೆ ಪ್ರಮಾಣದ ಶೇ.40ರಷ್ಟು ಭಾಗವನ್ನು ಆಯಾ ಕೈಗಾರಿಕಾ ವಲಯಗಳ ಸಂಘಕ್ಕೆ ನೀಡಲಾಗುವುದು. ಆ ಹಣದಿಂದಲೇ ಈ ಕೈಗಾರಿಕಾ ವಲಯಗಳಿಗೆ ಮೂಲಸೌಕರ್ಯ ಹೆಚ್ಚಿಸುವುದು ಸಹಿತ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಇದರಿಂದ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಸರಕಾರದ ಆರ್ಥಿಕ ನೆರವು ನಿರೀಕ್ಷಿಸುವ ಅಗತ್ಯವಿರುವುದಿಲ್ಲ. ಈ ರೀತಿ ಹಳೆ ಕೈಗಾರಿಕಾ ವಲಯ ಅಭಿವೃದ್ಧಿಪಡಿಸುವುದಕ್ಕೆ ಮುಖ್ಯಮಂತ್ರಿಗಳು ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಇಂಧನ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಪ್ರಧಾನಮಂತ್ರಿಗಳ ಆತ್ಮನಿರ್ಭರ ಪರಿಕಲ್ಪನೆಯಡಿ ಗ್ರಾಮೀಣ ಭಾಗದಲ್ಲಿರುವ ಉದ್ದಿಮೆಗಳನ್ನು ಎಲ್ಲ ಹಂತಗಳಲ್ಲಿಯೂ ಉತ್ತೇಜಿಸಲಾಗುತ್ತಿದೆ. “ಉದ್ಯಮಿಯಾಗು-ಉದ್ಯೋಗ ನೀಡು’ ಘೋಷಣೆಯಡಿ ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಉದ್ದಿಮೆ ಸ್ಥಾಪನೆಯಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಬೇರೆ ದೇಶಗಳಂತೆ ನಮ್ಮಲ್ಲಿಯೂ ಉದ್ಯಮ ಬೆಳೆಸುವುದಕ್ಕೆ ಎಲ್ಲರೂ ಕೈಜೋಡಿಸಬೇಕು. ರಾಜ್ಯದಲ್ಲೂ ಉದ್ಯಮ ಸ್ಥಾಪನೆಗೆ ವಿದ್ಯುತ್‌ ಇಲಾಖೆಯಿಂದ ಎದುರಾಗುತ್ತಿರುವ ಎಲ್ಲ ರೀತಿಯ ಅಡೆ-ತಡೆಗಳ ನಿವಾರಣೆಗೆ ಸರಕಾರದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ
ಸಣ್ಣ ಮತ್ತು ಮಧ್ಯಮ ವಲಯದಲ್ಲಿ ಉದ್ಯಮ ಸ್ಥಾಪಿಸಿ ಯಶಸ್ಸು ಸಾಧಿಸಿರುವ ಶಿವಮೊಗ್ಗದ ಶಾಂತಲಾ ಗ್ರೂಪ್‌ ಆಫ್ ಕಂಪೆನಿಗಳ ಅಧ್ಯಕ್ಷ ರುದ್ರೇಗೌಡ, ಗುಲ್ಬರ್ಗದ ಬಿ.ಜಿ. ಪಾಟೀಲ್‌ ಗ್ರೂಪ್‌ ಆಫ್ ಕಂಪೆನಿಗಳ ಅಧ್ಯಕ್ಷ ಬಿ.ಜಿ. ಪಾಟೀಲ್‌, ಎಸಿಇ ಮ್ಯಾನುಫ್ಯಾಕ್ಚರಿಂಗ್‌ ಸಿಸ್ಟಮ್ಸ್‌ನ ಎಂಡಿ ಪಿ. ರಾಮದಾಸ್‌ ಅವರಿಗೆ ಜೀವಮಾನ ಸಾಧನೆ, ಮಹಿಳಾ ಸಾಧಕರಾದ ನೀರಜಾಕ್ಷಿ ಕೆ. ಸುಧಾರತಿ ಸಹಿತ 23 ಉದ್ಯಮಿಗಳಿಗೆ ಲಘು ಉದ್ಯೋಗ ಭಾರತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next