Advertisement

ಕಲಾಪಗಳಿಗೆ ಗದ್ದಲದ ಸೋಂಕು

12:34 AM Sep 23, 2020 | mahesh |

ಬೆಂಗಳೂರು: ವಿಧಾನಮಂಡಲದ ಸದನಗಳಲ್ಲಿ ಮಂಗಳವಾರ ಕೊರೊನಾ ನಿರ್ವಹಣೆ ಮತ್ತು ಉಪಕರಣ ಖರೀದಿಯ ಅವ್ಯವಹಾರ ಆರೋಪ ಪ್ರತಿಧ್ವನಿಸಿತು. ಸರಕಾರವು ತಾನು ಕೈಗೊಂಡಿರುವ ಕ್ರಮಗಳನ್ನು ವಿಧಾನ ಪರಿಷತ್‌ನಲ್ಲಿ ಸಮರ್ಥಿಸಿಕೊಂಡಿತು. ಆದರೆ ಇದರಿಂದ ಸಮಾಧಾನಗೊಳ್ಳದ ಕಾಂಗ್ರೆಸ್‌ ಸಭಾತ್ಯಾಗ ಮಾಡಿತು. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ಮುಖಂಡರು ಸರಕಾರದ ಕ್ರಮಗಳನ್ನು ತರಾಟೆಗೆ ಎತ್ತಿಕೊಂಡರಲ್ಲದೆ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಉಪಕರಣ ಖರೀದಿಯಲ್ಲಿ 2 ಸಾವಿರ ಕೋ.ರೂ.ಗಳಷ್ಟು ಅವ್ಯವಹಾರ ನಡೆದಿದೆ, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಚರ್ಚೆ ಕೊನೆಯಾಗಿದ್ದು, ಸರಕಾರವು ಬುಧವಾರ ವಿಧಾನಸಭೆಯಲ್ಲಿ ಉತ್ತರ ನೀಡಲಿದೆ.

Advertisement

ಅವ್ಯವಹಾರ ಆಗಿಲ್ಲ
ಮೇಲ್ಮನೆಯಲ್ಲಿ ಸರಕಾರದ ಪರವಾಗಿ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ತಡೆಯುವಲ್ಲಿ ಸರಕಾರ ಸಂಪೂರ್ಣಯಶಸ್ಸು ಸಾಧಿಸದಿದ್ದರೂ ತಕ್ಕಮಟ್ಟಿಗೆ ಸಾಫ‌ಲ್ಯ ಕಂಡಿದೆ. ಲಸಿಕೆ ಬರುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಕೊರೊನಾದೊಂದಿಗೆ ಬದುಕುವುದು ಅನಿವಾರ್ಯ. ಉಪಕರಣಗಳ ಖರೀದಿಗೆ ಸಂಬಂಧಿಸಿ ಕಳಪೆ ಉತ್ಪನ್ನ ನೀಡಿದ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ. ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿಲ್ಲ ಎಂದರು.

ಕಾಂಗ್ರೆಸ್‌ ಸಭಾತ್ಯಾಗ
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಆರೋಗ್ಯ ಸಚಿವರು ಭಾವನಾ ತ್ಮಕವಾಗಿ ಮಾತನಾಡಿ¨ªಾರೆ. ಆದರೆ ನಿಯಂತ್ರಣ ವಿಚಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ ಏನೂ ಹೇಳಿಲ್ಲ. ಯಾವ ರೀತಿಯಲ್ಲಿ ಕೊರೊನಾ ತಡೆಯುತ್ತೇವೆ ಎಂಬುದನ್ನು ಉಲ್ಲೇಖೀಸಿಲ್ಲ. ಆರಂಭದ ದಿನಗಳಲ್ಲೇ ರಾಜ್ಯಕ್ಕೆ ವಿದೇಶದಿಂದ ಬರುವವರನ್ನು ಸೂಕ್ತವಾಗಿ ಕ್ವಾರಂಟೈನ್‌ ಮಾಡಿದ್ದರೆ ಸಮಸ್ಯೆ ಇಷ್ಟು ಉಲ್ಬಣಿಸುತ್ತಿರಲಿಲ್ಲ ಎಂದರು.

ಲಾಕ್‌ಡೌನ್‌, ಸೀಲ್‌ಡೌನ್‌ನಿಂದ ವ್ಯಾಪಾರ ವಹಿವಾಟು ನಷ್ಟ ಆಗುತ್ತಿರ ಲಿಲ್ಲ. ಸರಕಾರದ ವೈಫ‌ಲ್ಯದಿಂದ ಕೊರೊನಾ ನಿಯಂತ್ರಣ ಸಾಧ್ಯವಾಗಿಲ್ಲ. ಆರೊಗ್ಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದೆ. ಸಚಿವರ ಉತ್ತರದಿಂದ ತೃಪ್ತಿಯಾಗಿಲ್ಲ. ಹೀಗಾಗಿ ಸಭಾತ್ಯಾಗ ಮಾಡುತ್ತೇವೆ ಎಂದರು.

ನಮ್ಮಿಂದ ಸಂಪೂರ್ಣ ಸಹಕಾರ
ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸರಕಾರದ ವೈಖರಿಯನ್ನು ಟೀಕಿಸಿ, ಕೊರೊನಾ ನಿರ್ವಹಣೆ ವಿಚಾರದಲ್ಲಿ ನಾವು ವಿಪಕ್ಷವಾಗಿ ಎಲ್ಲ ರೀತಿಯ ಸಹಕಾರ ನೀಡಿದೆವು. ಆದರೆ ಸರಕಾರವು ತನ್ನ ಜವಾಬ್ದಾರಿ ನಿರ್ವಹಿಸಲಿಲ್ಲ. ಶೇ. 10ರಷ್ಟು ಜನರಿಗೂ ಪ್ಯಾಕೇಜ್‌ ತಲುಪಲಿಲ್ಲ. ಸಿದ್ದರಾಮಯ್ಯ ಆಗಲಿ, ನಾನಾಗಲಿ; ಯಾರೇ ತಪ್ಪು ಮಾಡಿದ್ದರೂ ಗಲ್ಲಿಗೇರಿಸಿ. ಆದರೆ ಸರಕಾರದ ತಪ್ಪಿಲ್ಲ ಎಂದರೆ ತನಿಖೆ ನಡೆಸಲು ಯಾಕೆ ಭಯ ಎಂದು ಪ್ರಶ್ನಿಸಿದರು.

Advertisement

2 ಸಾವಿರ ಕೋ.ರೂ. ಅವ್ಯವಹಾರ
ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಉಪಕರಣ ಖರೀದಿಯಲ್ಲಿ 2 ಸಾವಿರ ಕೋ.ರೂ.ಗಳಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಪಿಪಿಇ ಕಿಟ್‌, ವೆಂಟಿಲೇಟರ್‌ ಮತ್ತಿತರ ಪರಿಕರಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಪ್ರತೀ ಖರೀದಿ ಸಂದರ್ಭದಲ್ಲೂ ಬೆಲೆ ಏರಿಳಿತವಾಗಿದೆ. ಕಂಪೆನಿಗೂ ಉಪಕರಣಕ್ಕೂ ಸಂಬಂಧವಿಲ್ಲದಂತಿದೆ. ಬೆಂಗಳೂರು ವಸ್ತು ಪ್ರದರ್ಶನದ ಕೇಂದ್ರ (ಬಿಐಇಸಿ)ದ ಕೊರೊನಾ ಕೇರ್‌ ಸೆಂಟರ್‌ಗೆ ಸಂಬಂಧಿಸಿ 20 ಕೋಟಿ ರೂ. ಅವ್ಯವಹಾರ ನಡೆದಿದೆ. ಕಂಟೈನ್ಮೆಂಟ್‌ ವಲಯ ನಿರ್ವಹಣೆಯಲ್ಲೂ ಯದ್ವಾತದ್ವಾ ಹಣ ಖರ್ಚು ಮಾಡಲಾಗಿದೆ ಎಂದು ಸಿದ್ದಾರಾಮಯ್ಯ ಗಂಭೀರ ಆರೋಪ ಮಾಡಿದರು. ಖರೀದಿ ಅವ್ಯವಹಾರ ಕುರಿತು ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿ ದರು. ಬಳಿಕ ಅದನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.

ಅಮಾನವೀಯ ಅಂತ್ಯಕ್ರಿಯೆ
ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಸಂಬಂಧ ರಾಜ್ಯದ ಕೆಲವೆಡೆ ಅಮಾನವೀಯವಾಗಿ ನಡೆದುಕೊಂಡಿರುವ ಬಗ್ಗೆ ಕಾಂಗ್ರೆಸ್‌ ಸದಸ್ಯ ಯು.ಟಿ. ಖಾದರ್‌ ಪ್ರಸ್ತಾವಿಸಿದರು. ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ- ಖಾದರ್‌ ನಡುವೆ ವಾಕ್ಸಮರ ನಡೆಯಿತು. ಮಧ್ಯಪ್ರವೇಶ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌, ಕೊರೊನಾ ಸಂದರ್ಭದಲ್ಲಿ ಸಂಬಂಧಿಕರೇ ಪಾರ್ಥಿವ ಶರೀರ ಪಡೆಯಲು ಮುಂದೆ ಬರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಸರಕಾರ ಮುಂದೆ ನಿಂತು ಅಂತ್ಯಸಂಸ್ಕಾರ ನಡೆಸಿದೆ. ಬಳ್ಳಾರಿ ಪ್ರಕರಣದಲ್ಲಿ ಸಂಬಂಧಿತರನ್ನು ಅಮಾನತು ಮಾಡಿ ಅನಂತರ ಸೂಕ್ತ ಸೂಚನೆ ನೀಡಲಾಗಿತ್ತು ಎಂದರು.

ಕೋವಿಡ್‌-19ರಿಂದ ಸಾವನ್ನು ಹಣೆಬರಹ ಎನ್ನಲಾಗದು. ನಮ್ಮ ಬೇಜವಾಬ್ದಾರಿತನ, ಸರಕಾರದ ಬೇಜವಾಬ್ದಾರಿತನದಿಂದ ಸಾವು ಸಂಭವಿಸುತ್ತಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next