Advertisement

ಚಾಮುಂಡೇಶ್ವರಿ ಜತೆ ಬಸವಕಲ್ಯಾಣದ ಮೊರೆ

06:00 AM Apr 06, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪಕ್ಷದ ಆಂತರಿಕ ವರದಿಯಿಂದಲೇ ತಲ್ಲಣರಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದ  ಹೊರತಾಗಿ ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Advertisement

ಕಾಂಗ್ರೆಸ್‌ ಪಕ್ಷವೇ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಬಾಧಿತವಾಗಿ ಉಳಿಸಿಕೊಳ್ಳಲು ತಮ್ಮ ಸ್ಪರ್ಧೆ ಹೇಗಿರಬೇಕು ಎನ್ನುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮತ್ತು ಖಾಸಗಿ ತಂಡದಿಂದ ವರದಿ ತರಿಸಿಕೊಂಡಿದ್ದಾರೆ. ಆದರೆ, ಈ ಎರಡೂ ವರದಿಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿ ಸೋಲು ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಪರ್ಧೆಗೆ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ ಎಂದು ಸಿಎಂ ಆಪ್ತ ವಲಯದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುವುದರಿಂದ ಅಲ್ಲೆ ಸ್ಪರ್ಧೆಗೆ ಇಚ್ಛಿಸಿದ್ದು, ಗೆಲುವಿನ ಓಟ ಮುಂದುವರಿಸಲು ಬಸವಕಲ್ಯಾಣವ ನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಗಿದೆ.

ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿರುವ ನಿಲುವು ಬಸವಕಲ್ಯಾಣದಲ್ಲಿ ಅವರಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಲಿಂಗಾಯತ ಧರ್ಮಗುರು ಮಾತೆ ಮಹಾದೇವಿ ಅವರು ಪ್ರತ್ಯೇಕಧರ್ಮದ ಚಳವಳಿಯಲ್ಲಿ ಮುಂಚೂಣಿಯಲ್ಲಿರುವುದು ಮತ್ತು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅದಕ್ಕೆ ಪೂರಕವಾಗಿರುವುದು ಬಸವಕಲ್ಯಾಣ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಶಿಫಾರಸಿನ ಪ್ರಮುಖ ಅಂಶ ಎಂದು ಸಿಎಂ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಅದರ ಜತೆಗೆ ಬಸವಣ್ಣನ ಅನುಭವ ಮಂಟಪ ಕಾಮಗಾರಿಗೆ ಸಿದ್ದರಾಮಯ್ಯ ಸರ್ಕಾರ 100 ಕೋಟಿ ಅನುದಾನ ಘೋಷಿಸಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆಯಾಗಿದೆ. ಇದು ಮಾತೆ ಮಹಾದೇವಿ ಹೋರಾಟಕ್ಕೆ ಸಿಕ್ಕ ಗೌರವ ಕೂಡ. ಇದು ಸಿದ್ದರಾಮಯ್ಯ ಅವರಿಗೂ ಆ ಕ್ಷೇತ್ರದ ಲಿಂಗಾಯತರ ಮತಭರವಸೆ ಸಿಗುವ ಅವಕಾಶ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ, ಅವರಿಬ್ಬರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್‌ ರಣತಂತ್ರ ಹೇರಿದ್ದು, ಒಳ ಒಪ್ಪಂದದ ಮೂಲಕ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರನ್ನು ಮತ್ತು ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಗೆಲ್ಲಿಸುವ ಬಗ್ಗೆ ತಯಾರಿ ನಡೆದಿದೆ ಎನ್ನಲಾದ ಮಾಹಿತಿ ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಹೆಣೆದಿರುವ ತಂತ್ರ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕೆಡಹುವ ಅವಕಾಶ ಹೆಚ್ಚಿದೆ ಎನ್ನುವುದೂ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ.

Advertisement

ಇದರ ಜತೆಯಲ್ಲೇ ಬಸವಕಲ್ಯಾಣದ ಹಾಲಿ ಶಾಸಕ ಜೆಡಿಎಸ್‌ನ‌ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಸೇರಿರುವುದು ಮತ್ತು ಬಿಜೆಪಿಯ ಮಾಜಿ ಶಾಸಕ ಎಂ.ಜಿ. ಮುಳೆ ಜೆಡಿಎಸ್‌ ಕದ ತಟ್ಟಿರುವುದು ಬಿಜೆಪಿಯಲ್ಲಿ ಬಂಡಾಯದ ಬಿಸಿ ಹೆಚ್ಚಿಸಿದೆ. ಈ ಬೆಳವಣಿಗೆ ಮತ್ತು  ಕ್ಷೇತ್ರದ ಜಾತಿ ಲೆಕ್ಕಾಚಾರ ಸಿದ್ದರಾಮಯ್ಯ ಅವರಿಗೆ ಲಾಭವಾಗಿ ಪರಿಣಮಿಸಬಹುದು ಎಂಬ ವಿವರ ವರದಿಯಲ್ಲಿದೆ.

ಬಸವಕಲ್ಯಾಣ ಯಾಕೆ? ವರಿದಿಯಲ್ಲಿ ಏನಿದೆ?
– ಬಸವಕಲ್ಯಾಣದ ಪ್ರಭಾವಿ ಸಮುದಾಯಗಳು: ರೆಡ್ಡಿಗಳು, ಹಿಂದುಳಿದವರು, ಪರಿಶಿಷ್ಟ (ಬಲ), ಪರಿಶಿಷ್ಟ (ಎಡ), ಲಂಬಾಣಿಗಳು, ಮುಸ್ಲಿಮರು, ಮರಾಠರು, ಲಿಂಗಾಯತರು.
– ಪರಿಶಿಷ್ಟ (ಎಡ) ಮತ್ತು ಪರಿಶಿಷ್ಟ (ಬಲ), ಲಂಬಾಣಿ, ಇತರ ಹಿಂದುಳಿದ ವರ್ಗದವರಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಸಿದ್ದರಾಮಯ್ಯ ಪರ ಒಲವು.
– ರೆಡ್ಡಿಗಳಲ್ಲಿ ಶೇ.30 ಮತ್ತು ಮರಾಠ ಸಮುದಾಯದಲ್ಲಿ ಶೇ.20 ಸಿದ್ದರಾಮಯ್ಯ ಅವರಿಗೆ ಮತ ಪರಿವರ್ತನೆಯಾಗಬಹುದು.
– ಲಿಂಗಾಯತರಲ್ಲಿ ಶೇಕಡಾ 25 ಮತಗಳು ಸಿದ್ದರಾಮಯ್ಯ ಪರವಾಗಬಹುದು. ಇದು ರಾಜ್ಯಾದ್ಯಂತ ಲಿಂಗಾಯತ ಮತ ವಿಭಜನೆಯ ದಿಕ್ಸೂಚಿಯೂ ಆಗಬಹುದು.
– ಮುಸ್ಲಿಮರ ಶೇಕಡಾ 90 ಮತ್ತು ಕುರುಬರ ಶೇ. 95 ಮತಗಳನ್ನು ಸಿದ್ದರಾಮಯ್ಯ ಸೆಳೆಯಬಹುದು.
– ಬಿಜೆಪಿಯಿಂದ ಮಲ್ಲಿಕಾರ್ಜುನ ಖೂಬಾ, ಜೆಡಿಎಸ್‌ನಿಂದ ಎಂ.ಜಿ. ಮುಳೆ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ.
– ಖೂಬಾ ಅವರಿಗೆ ಲಿಂಗಾಯತರ ಶೇ. 70 ಮತಗಳು ಬೀಳುವ ಸಾಧ್ಯತೆಯಿದ್ದು, ವಿಜಯಿಯಾಗಲು ಕಠಿಣ ಹಾದಿಯಿದೆ.

ಬಸವಕಲ್ಯಾಣದಲ್ಲಿ ಮತದಾರರು
ಲಿಂಗಾಯತರು-30,000
ಮುಸಲ್ಮಾನರು- 40,000
ಹಿಂದುಳಿದ ವರ್ಗ- 15,000
ಪರಿಶಿಷ್ಟ ಜಾತಿ (ಎಡ ಮತ್ತು ಬಲ)- 30,000
ಮರಾಠರು-30,000

– ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next