ಮಂಗಳೂರು : ತೆಂಗು, ಕಂಗು, ಗೇರು, ಬಾಳೆ, ಭತ್ತದ ಜತೆ ರಬ್ಬರು ಬೆಳೆಗಳ ಸಮೃದ್ಧಿ. ಪಯಸ್ವಿನಿ ನದಿಯ ಸುಂದರ ಮಡಿಲು. ದ.ಕನ್ನಡ ಜಿಲ್ಲೆಯ ತುದಿಯ ಗಡಿಯೂ ಹೌದು. ಸಾಹಿತ್ಯ, ಸಂಸ್ಕೃತಿ, ಜನಪದ ಪರಂಪರೆಯ ಕೇಂದ್ರ. ಆಧುನಿಕ ಸುಳ್ಯದ ನಿರ್ಮಾತೃ ಕುರುಂಜಿ ವೆಂಕಟರಮಣ ಗೌಡ ಅವರ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ. ಗ್ರಾಮೀಣ ಪ್ರದೇಶಗಳೇ ಅಧಿಕ. ಆದರೆ, ತೋಟಗಾರಿಕಾ ಬೆಳೆಗಳ ಮೂಲಕ ಮಹತ್ವದ ಆರ್ಥಿಕ ಕೊಡುಗೆ.
ಇದು ಸುಳ್ಯ ವಿಧಾನಸಭಾ ಕ್ಷೇತ್ರದ ವೈಶಿಷ್ಟ್ಯ. ಇದು ದ.ಕನ್ನಡ, ಉಡುಪಿ ಜಿಲ್ಲೆಗಳ ಏಕೈಕ ಮೀಸಲು ಕ್ಷೇತ್ರವೂ ಆಗಿದೆ. 1952 ಮತ್ತು 1957ರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಸಂದರ್ಭದಲ್ಲಿ ಸುಳ್ಯ ಎಂಬ ಹೆಸರಿನಲ್ಲಿ ವಿಧಾನಸಭಾ ಕ್ಷೇತ್ರವಿರಲಿಲ್ಲ. ಆಗ, ಈಗಿನ ಸುಳ್ಯ ಕ್ಷೇತ್ರವು ಪಕ್ಕದ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಪುತ್ತೂರು ಆಗ ಇಬ್ಬರು ಚುನಾಯಿತ ಸದಸ್ಯರನ್ನು ಹೊಂದಿದ (ದ್ವಿಸದಸ್ಯ) ಕ್ಷೇತ್ರವಾಗಿತ್ತು.
1962ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆ ಚುನಾವಣೆಯಲ್ಲಿದು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲು ಆಗಿತ್ತು. 1967ರಿಂದ ಈ ಕ್ಷೇತ್ರ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲು ಆಗಿರುವ ಕ್ಷೇತ್ರವಾಗಿದೆ. ಹೀಗಾಗಿ, ಸುಳ್ಯ ಮೂಲದ ಇತರ ಸಮುದಾಯದ ರಾಜಕೀಯ ನಾಯಕರಲ್ಲಿ ಕೆಲವರು ಪಕ್ಕದ ಪುತ್ತೂರು, ಬೆಳ್ತಂಗಡಿ ಮುಂತಾದ ಕ್ಷೇತ್ರಗಳಿಂದ ಸ್ಪರ್ಧೆಗೆ ಮುಂದಾದ ನಿದರ್ಶನಗಳಿವೆ.
ಸುಳ್ಯ ಕ್ಷೇತ್ರದ ಈವರೆಗಿನ 12 ಚುನಾವಣೆಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿರುಸಿನ ಸ್ಪರ್ಧೆ ಇರುತ್ತಿತ್ತು ; ಈ ಬಾರಿಯೂ ಕೂಡಾ! ಈವರೆಗೆ ಬಿಜೆಪಿ 6 ಬಾರಿ; ಕಾಂಗ್ರೆಸ್ 4 ಬಾರಿ, ಸ್ವತಂತ್ರ ಪಕ್ಷ ಮತ್ತು ಜನತಾ ಪಕ್ಷ ತಲಾ ಒಂದು ಬಾರಿ ಜಯ ಗಳಿಸಿವೆ. ಈ ಕ್ಷೇತ್ರದಲ್ಲಿ 2014ರವರೆಗೆ ಸ್ಪರ್ಧಿಸಿದ ಇತರ ರಾಜಕೀಯ ಪಕ್ಷಗಳು: ಭಾರತೀಯ ಜನಸಂಘ, ಸಿಪಿಐ, ಸಿಪಿಎಂ, ಜನತಾದಳ, ಕೆಸಿಪಿ, ಜೆಡಿಎಸ್, ಕನ್ನಡ ನಾಡು, ಬಿಎಸ್‌ಪಿ, ಎಸ್.ಡಿ.ಪಿ.ಐ., ಕೆಜೆಪಿ.
ಬಿಜೆಪಿಯ ಎಸ್. ಅಂಗಾರ ಅವರಿಲ್ಲಿ 1994ರಿಂದ ಸತತ 5 ಬಾರಿ ಜಯಿಸಿದ್ದಾರೆ. 1989ರಲ್ಲಿ ಅವರು ಕಾಂಗ್ರೆಸ್‌ನ ಕೆ. ಕುಶಲರಿಗೆ ಸೋತಿದ್ದರು. ಹೀಗಾಗಿ ಅಂಗಾರ ಅವರಿಗೆ ಇದು ಸತತ 7ನೆಯ ಚುನಾವಣೆ! ಈಗಿನ ದ.ಕನ್ನಡ ಜಿಲ್ಲಾ ಭೌಗೋಳಿಕ ವ್ಯಾಪ್ತಿಯನ್ನಷ್ಟೇ ಪರಿಗಣಿಸಿದರೆ, ಅವರ ಸತತ 5 ಗೆಲುವುಗಳು ಈ ಜಿಲ್ಲೆಯ ಮಟ್ಟಿಗೆ ವಿಶೇಷವಾದ ದಾಖಲೆಯೂ ಹೌದು.
ಅಂದ ಹಾಗೆ…
ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಭೌಗೋಳಿಕ ಸ್ವರೂಪದ 8 ವಿಧಾನಸಭಾ ಕ್ಷೇತ್ರಗಳನ್ನು ಪರಿಗಣಿಸಿದರೆ, ಈವರೆಗೆ ಸಚಿವ ಸ್ಥಾನ ಪಡೆಯದ ಏಕೈಕ ಕ್ಷೇತ್ರ ಸುಳ್ಯ. ಜಿಲ್ಲೆಯ ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬೆಳ್ತಂಗಡಿ, ಮೂಡಬಿದಿರೆ ಕ್ಷೇತ್ರಗಳಿಗೆಲ್ಲ ಸಚಿವ ಸ್ಥಾನ ದೊರೆತಿದೆ. ಆದರೆ, ಸುಳ್ಯ ಮೂಲದವರಾದ ಡಿ. ವಿ. ಸದಾನಂದ ಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು; ಈಗ ಕೇಂದ್ರ ಸಚಿವರಾಗಿದ್ದಾರೆ.
— ಮನೋಹರ ಪ್ರಸಾದ್