Advertisement

Karnataka: ಬೊಕ್ಕಸ ಭರ್ತಿಗೆ 400 ಹೊಸ ಮದ್ಯದಂಗಡಿ- ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ

11:31 PM Sep 24, 2023 | Team Udayavani |

ಬೆಂಗಳೂರು: ಐದು ಗ್ಯಾರಂಟಿಗಳು ಸಹಿತ ಹಲವು ಕಾರಣಗಳಿಂದ ಬರಿದಾಗುತ್ತಿರುವ ಬೊಕ್ಕಸ ತುಂಬಿಸಲು ಹೊಸ ಪ್ಲಾನ್‌ ಮಾಡಿರುವ ಸರಕಾರ, ರಾಜ್ಯಾದ್ಯಂತ ಖಾಸಗಿ ಮದ್ಯ ಮಾರಾಟಗಾರರಿಂದ ಸುಮಾರು 400 ಹೊಸ ಮದ್ಯದಂಗಡಿಗಳನ್ನು ತೆರೆಯಲು ಉದ್ದೇಶಿಸಿದೆ. ವಿಶೇಷವಾಗಿ ಇವು ಗ್ರಾಮೀಣ ಪ್ರದೇಶಗಳಲ್ಲಿ ತಲೆಯೆತ್ತುವ ಸಾಧ್ಯತೆ ಇದೆ.

Advertisement

ಮೂರು ಸಾವಿರ ಜನಸಂಖ್ಯೆ ಇರುವ ಪ್ರದೇಶಗಳಲ್ಲೂ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಪಂಚಾಯತ್‌ ಮಟ್ಟದಲ್ಲಿ ಇನ್ನಷ್ಟು ಮದ್ಯದಂಗಡಿಗಳು ತಲೆಯೆತ್ತಲಿವೆ. ಇದಲ್ಲದೆ, ಅಬಕಾರಿ ಇಲಾಖೆಯು ಎಂಎಸ್‌ಐಎಲ್‌ಗೆ ನೀಡಿದ್ದ ಸುಮಾರು 200ಕ್ಕೂ ಹೆಚ್ಚು ಲೈಸೆನ್ಸ್‌ಗಳನ್ನು ಹಿಂಪಡೆದು, ಅದಕ್ಕೆ ಇನ್ನೂ 200 ಲೈಸೆನ್ಸ್‌ ಗಳನ್ನು ಹೆಚ್ಚುವರಿಯಾಗಿ ಸೇರಿಸಿ ಖಾಸಗಿ ಮದ್ಯ ಮಾರಾಟಗಾರರಿಗೆ ನೀಡಲು ಯೋಜಿಸಲಾಗಿದೆ. ಈ ಕ್ರಮ ದಿಂದ ಸರಕಾರವು ವಾರ್ಷಿಕ ಸುಮಾರು ಎರಡೂವರೆ ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ.

2009ರಿಂದ 2013ರ ವರೆಗೆ ಸರಕಾರದ ಅಂಗ ಸಂಸ್ಥೆಯಾದ ಎಂಎಸ್‌ಐಎಲ್‌ಗೆ ಎರಡು ಹಂತಗಳಲ್ಲಿ 1,250 ಮಳಿಗೆಗಳನ್ನು ತೆರೆಯಲು ಅಬಕಾರಿ ಇಲಾಖೆ ಅನುಮತಿ ನೀಡಿದೆ. ಜತೆಗೆ ಮಳಿಗೆ ತೆರೆಯಲು ಇದ್ದ ನಿಯಮಾವಳಿಗಳನ್ನೂ ಸಡಿಲಿಸಲಾಗಿದೆ. ಈವರೆಗೆ ಅಂದಾಜು ಸಾವಿರ ಮಳಿಗೆಗಳನ್ನು ಮಾತ್ರ ತೆರೆಯಲು ಸಾಧ್ಯವಾಗಿದೆ. ಹೀಗಾಗಿ, ಉಳಿದ ಲೈಸೆನ್ಸ್‌ಗಳನ್ನು ಹಿಂಪಡೆದು ಖಾಸಗಿಯವರಿಗೆ ಹರಾಜು ಮೂಲಕ ಮಾರಾಟ ಮಾಡಲು ಉದ್ದೇಶಿಸಿದೆ. ಇದರ ಜತೆಗೆ ಇನ್ನೂ 200 ಲೈಸೆನ್ಸ್‌ಗಳನ್ನು ನೀಡುವ ಲೆಕ್ಕಾಚಾರ ಇದೆ ಎಂದು ಅಬಕಾರಿ ಇಲಾಖೆ ಮೂಲಗಳು “ಉದಯವಾಣಿ”ಗೆ ತಿಳಿಸಿವೆ.

ಚುನಾವಣೆ ಬಳಿಕ ಅನುಮತಿ?
ಈ ಸಂಬಂಧದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಮುಖ್ಯ
ಮಂತ್ರಿ ಭೇಟಿಗೆ ಸಮಯವನ್ನೂ ಕೇಳಲಾಗುತ್ತಿದೆ. ಒಂದು ವೇಳೆ ಗ್ರೀನ್‌ ಸಿಗ್ನಲ್‌ ಸಿಕ್ಕಿದರೆ ಬಳಿಕ ಮುಂದಿನ ಪ್ರಕ್ರಿಯೆಗಳು ಆರಂಭವಾಗಲಿವೆ. ಎಲ್ಲವೂ ಅಂದು
ಕೊಂಡಂತೆ ನಡೆದರೆ, ಪ್ರಸ್ತುತ ನೀಡಲಾಗುತ್ತಿರುವ “ಸಿಎಲ್‌-7′ ಲೈಸೆನ್ಸ್‌ಗಳನ್ನು ವಿತರಿಸಲಾಗುವುದು. ಆದರೆ ಮೂಲಗಳ ಪ್ರಕಾರ ಲೋಕಸಭಾ ಚುನಾವಣೆ ಬಳಿಕವೇ ಸರಕಾರ ಇದಕ್ಕೆ ಮುಂದಾಗಲಿದೆ.

ಪ್ರಸ್ತುತ ಐದು ಸಾವಿರ ಜನಸಂಖ್ಯೆ ಇರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗುತ್ತಿದೆ. ಈಗ ಅದನ್ನು ಮೂರು ಸಾವಿರ ಜನಸಂಖ್ಯೆಗೆ ಸೀಮಿತಗೊಳಿಸಲು ಉದ್ದೇಶಿಸಲಾಗಿದೆ. ಜತೆಗೆ ಸೂಪರ್‌ ಮಾರ್ಕೆಟ್‌ಗಳಲ್ಲೂ ಮದ್ಯಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಪ್ರಸ್ತಾವನೆ ಇದೆ. ಅಲ್ಲದೆ, ಕೆಲವೆಡೆ ತಲೆಯೆತ್ತಿರುವ ಬೇನಾಮಿ ಅಂಗಡಿಗಳನ್ನು ಶೇ. 25ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಿಕೊಂಡು ಸಕ್ರಮಗೊಳಿಸುವ ಚಿಂತನೆ ಇದೆ. ಈ ಎಲ್ಲ ಕ್ರಮಗಳಿಂದ ಮದ್ಯ ಮಾರಾಟ ಹೆಚ್ಚಳವಾಗಿ ಸರಕಾರಕ್ಕೂ ಆದಾಯ ಬರಲಿದೆ ಎಂಬ ಲೆಕ್ಕಾಚಾರ ಇದೆ.

Advertisement

ಈ ಮಧ್ಯೆ ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 36 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಕಳೆದ ಸೆಪ್ಟಂಬರ್‌ಗೆ ಹೋಲಿಸಿದರೆ ಈ ಬಾರಿ ಇಲಾಖೆ 1,600 ಕೋ. ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 30 ಸಾವಿರ ಕೋಟಿ ರೂ. ತೆರಿಗೆ ಗುರಿ ನೀಡಲಾಗಿತ್ತು.

ಮನೆ-ಮನೆಗೂ ಮದ್ಯಭಾಗ್ಯ ನೀಡುವ ಮೂಲಕ ರಾಜ್ಯ ಸರಕಾರವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ. ಇದು ಈ ಸರಕಾರದ 6ನೇ ಗ್ಯಾರಂಟಿ.
 -ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ರಾಜ್ಯದಲ್ಲಿ ಇನ್ನೂ 400 ಮದ್ಯದಂಗಡಿಗಳಿಗೆ ಲೈಸೆನ್ಸ್‌ ನೀಡುವ ಚಿಂತನೆ ಇದೆ. ಇದರಲ್ಲಿ ಎಂಎಸ್‌ಐಎಲ್‌ಗೆ ನೀಡಿದ್ದ ಪರವಾನಿಗೆಗಳೂ ಸೇರಿವೆ. ಈ ಅಂಶ ಇನ್ನೂ ಚರ್ಚೆ ಹಂತದಲ್ಲಿದೆ. ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆ ಆಗಿಲ್ಲ.

– ನಾಗರಾಜಪ್ಪ, ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ, (ಐಎಂಎಲ್‌)

Advertisement

Udayavani is now on Telegram. Click here to join our channel and stay updated with the latest news.

Next