Advertisement
ಮಾಯಕೊಂಡದಲ್ಲಿ ಮುನಿದ ಸವಿತಾದಾವಣಗೆರೆ: ಕಾಂಗ್ರೆಸ್ ಪಟ್ಟಿ ಬಿಡುಗಡೆ ನಂತರ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಬಂಡಾಯ ಏರ್ಪಟ್ಟಿದೆ. ಪ್ರಥಮ ಪಟ್ಟಿಯಲ್ಲಿ ಮಾಯಕೊಂಡ(ಎಸ್ಸಿ) ಮೀಸಲು ಕ್ಷೇತ್ರಕ್ಕೆ ಕೆ.ಎಸ್.ಬಸವಂತಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಟಿಕೆಟ್ ನಿರೀಕ್ಷೆಯಲ್ಲಿದ್ದ ಡಾ| ಸವಿತಾಬಾಯಿ ಮಲ್ಲೇಶ್ ನಾಯ್ಕ ಅಸಮಾಧಾನಕ್ಕೆ ಕಾರಣವಾಗಿದೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಸಿದ್ಧ ಎಂದು ಘೋಷಿಸಿದ್ದಾರೆ. ಟಿಕೆಟ್ ತಪ್ಪಿದ ಮತ್ತು ವೈಯಕ್ತಿಕ ನಿಂದನೆ ಹಿನ್ನೆಲೆಯಲ್ಲಿ ಸ್ವಪಕ್ಷದ ವಿರುದ್ಧವೇ ಸವಿತಾ ಬಂಡಾಯದ ಸಮರ ಸಾರಿದ್ದಾರೆ.
ಚನ್ನಗಿರಿ: ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಚನ್ನಗಿರಿ ಕ್ಷೇತ್ರದಿಂದ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಶಿವಗಂಗಾ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಾರಂಭದಲ್ಲಿ ಟಿಕೆಟ್‌ಗೆ ಅರ್ಜಿ ಸಲ್ಲಿಸಲೂ ನಿರಾಸಕ್ತಿ ತೋರಿದ್ದ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಒತ್ತಾಯಕ್ಕೆ ಮಣಿದು ಅರ್ಜಿ ಸಲ್ಲಿಸಿದ್ದರೂ ತಮ್ಮ ಸಹೋದರನ ಪುತ್ರ ವಡ್ನಾಳ್ ಅಶೋಕ್‌ಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಬಸವರಾಜ್ ಶಿವಗಂಗಾ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಅಸಮಾಧಾನಗೊಂಡಿರುವ ವಡ್ನಾಳ್ ಅಶೋಕ್ ಹಾಗೂ ಇತರೆ ಪ್ರಬಲ ಆಕಾಂಕ್ಷಿತರು ಹೈಕಮಾಂಡ್‌ನೊಂದಿಗೆ ಚರ್ಚಿಸಿದ ನಂತರ ಮುಂದಿನ ಹೆಜ್ಜೆಯಿಡುವುದಾಗಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಅಭ್ಯರ್ಥಿ ಬದಲಾವಣೆಗೆ ಒತ್ತಾಯ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಒಂದೆಡೆ ಕೀಲಾರ ರಾಧಾಕೃಷ್ಣ ಬೆಂಗಲಿಗರು ಪ್ರತಿಭಟನೆ ನಡೆಸಿದರೆ, ಮತ್ತೂಂದೆಡೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಬಣದ ಆಕಾಂಕ್ಷಿತರು ಪ್ರತ್ಯೇಕ ಸಭೆ ನಡೆಸಿ, ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆಯೇ ರಾಧಾಕೃಷ್ಣ ಮನೆ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು, ಬೆಂಬಲಿಗರು ಘೋಷಣೆ ಕೂಗಿ, ಕೂಡಲೇ ಅಭ್ಯರ್ಥಿ ಹೆಸರು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಬಣ ತಮ್ಮ 9 ಮಂದಿ ಟಿಕೆಟ್ ಆಕಾಂಕ್ಷಿತರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಲು ಮುಂದಾಗಿದೆ.
ಮಂಡ್ಯದಲ್ಲಿ ರಾಧಾಕೃಷ್ಣ ಬೆಂಬಲಿಗರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Related Articles
ಬೀದರ: ಬೀದರ್ ದಕ್ಷಿಣದಲ್ಲಿ ಮಾಜಿ ಶಾಸಕ, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ದಿ|ಧರಂಸಿಂಗ್ ಅವರ ಅಳಿಯ ಚಂದ್ರಸಿಂಗ್ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಂದು ದಶಕದಿಂದ ಚಂದ್ರಸಿಂಗ್ ಕಾಂಗ್ರೆಸ್ ಸಂಘಟಿಸಿ ಬಲಪಡಿಸಿದ್ದಾರೆ. ಕಳೆದ ಬಾರಿ ಕೆಎಂಪಿ ಪಕ್ಷದಿಂದ ಕಾಂಗ್ರೆಸ್‌ಗೆ ಸೇರಿದ್ದ ಅಶೋಕ ಖೇಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರಿಂದ ಚಂದ್ರಸಿಂಗ್ ಟಿಕೆಟ್ ವಂಚಿತರಾಗಿದ್ದರು. ಈ ಬಾರಿ ಆದ್ಯತೆ ಸಿಗಬಹುದೆಂದು ನಿರೀಕ್ಷೆಯಲ್ಲಿದ್ದರು. ಕೊನೆಗೆ ಖೇಣಿ ಹೆಸರು ಘೋಷಿಸಲಾಗಿದೆ. ಇದಕ್ಕೆ ಬಸವಕಲ್ಯಾಣ ಕ್ಷೇತ್ರದಿಂದ ಚಂದ್ರಸಿಂಗ್ ಭಾವ ವಿಜಯಸಿಂಗ್‌ಗೆ ಟಿಕೆಟ್ ನೀಡಿರುವುದು ಪ್ರಬಲ ಕಾರಣ ಎನ್ನಲಾಗಿದೆ. ಟಿಕೆಟ್ ಕೈತಪ್ಪುತ್ತಿದ್ದಂತೆ ಚಂದ್ರಸಿಂಗ್ ಬಂಡಾಯದ ಬಿಸಿ ಮುಟ್ಟಿಸಿ, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
Advertisement
ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯಚಿಕ್ಕಮಗಳೂರು: 2ನೇ ಪಟ್ಟಿಯಲ್ಲಿ ಕಡೂರು ಕ್ಷೇತ್ರಕ್ಕೆ ಕೆ.ಎಸ್.ಆನಂದ್‌ಗೆ ಟಿಕೆಟ್ ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ 50 ವರ್ಷಗಳಿಂದ ಸೇವೆ ಸಲ್ಲಿಸಿರುವ ಸಿ.ನಂಜಪ್ಪ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಯಿದೆ. ಇತ್ತೀಚೆಗೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಸಿ.ನಂಜಪ್ಪ ಈ ಬಾರಿ ಕಡೂರು ಕ್ಷೇತ್ರದಿಂದ ಟಿಕೆಟ್ ನೀಡಿಲ್ಲ ಎಂದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದಿದ್ದರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ವೈಎಸ್‌ವಿ ದತ್ತ ಅವರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಬಿಟ್ಟು ಕೆ.ಎಸ್.ಆನಂದ್‌ಗೆ ಟಿಕೆಟ್ ನೀಡಲಾಗಿದೆ. ಇದರಿಂದ ದತ್ತ ಪರ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಆದರೆ ದತ್ತ ನಡೆ ನಿಗೂಢವಾಗಿದೆ. ಕೈ ತೊರೆಯಲು ಮುಂದಾದ ಸಿದ್ದು ಕಟ್ಟಾ ಬೆಂಬಲಿಗ
ಬಾಗಲಕೋಟೆ: ಸಿದ್ದರಾಮಯ್ಯ ಅವರನ್ನು ನಂಬಿಕೊಂಡೇ ರಾಜಕೀಯ ಆರಂಭಿಸಿದ್ದ ವೈದ್ಯ, ಅಹಿಂದ ಮುಖಂಡ ಡಾ|ದೇವರಾಜ ಪಾಟೀಲ, ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದರು. ಇದೀಗ ಟಿಕೆಟ್ ಕೈ ತಪ್ಪಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧವೇ ಅಸಮಾಧಾನಗೊಂಡಿದ್ದು, ಬಾಗಲಕೋಟೆ ಕ್ಷೇತ್ರದಿಂದ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ. ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದ ಬೀಳಗಿಯ ಶಿವಾನಂದ ನಿಂಗನೂರ ಸಹಿತ ಸುಮಾರು 6ಕ್ಕೂ ಹೆಚ್ಚು ಆಕಾಂಕ್ಷಿಗಳು, ಜೆ.ಟಿ.ಪಾಟೀಲ್‌ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಗೌಪ್ಯ ಸಭೆ ನಡೆಸಿ, ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಉಮಾಶ್ರೀಗೆ ಟಿಕೆಟ್ ನೀಡಿದ್ರೆ ಬಂಡಾಯ ಖಚಿತ
ಬಾಗಲಕೋಟೆ: ತೇರದಾಳ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಇಟ್ಟಿರುವ ಕೈ ನಾಯಕರು, ಬರೋಬ್ಬರಿ 16 ಜನ ಟಿಕೆಟ್ ಕೇಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯುವ ವೈದ್ಯ ಡಾ|ಪದ್ಮಜೀತನಾಡಗೌಡ ಪಾಟೀಲ್ 5 ವರ್ಷದಿಂದ ಕ್ಷೇತ್ರದಲ್ಲಿ ಸಂಘಟನೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಉಮಾಶ್ರೀ ಬಿಟ್ಟು ನಾಡಗೌಡರಿಗೆ ಟಿಕೆಟ್ ಕೊಡುವಂತೆ ತೀವ್ರ ಒತ್ತಾಯ ಕೇಳಿ ಬಂದಿದೆ. ತೇರದಾಳ, ಮಹಾಲಿಂಗಪುರ ಮತ್ತು ರಬಕವಿ-ಬನಹಟ್ಟಿ ಮೂರು ಭಾಗದ ಸ್ಥಳೀಯ ನಾಯಕರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ಕೊಡಿ. ಉಮಾಶ್ರೀಗೆ ಟಿಕೆಟ್ ಕೊಟ್ಟರೆ ಪಕ್ಷೇತರ ಸ್ಪರ್ಧೆ ಪಕ್ಕಾ ಎಂದು ನಾಡಗೌಡ ಎಚ್ಚರಿಕೆ ನೀಡಿದ್ದಾರೆ. ಬಾದಾಮಿಯಲ್ಲಿ ಸಿದ್ದು ಬೆಂಬಲಿಗರ ಪ್ರತ್ಯೇಕ ಸಭೆ
ಬಾಗಲಕೋಟೆ: ಸಿದ್ದರಾಮಯ್ಯ ಪ್ರತಿನಿಧಿಸಿದ ಬಾದಾಮಿ ಕ್ಷೇತ್ರದ ಕಾಂಗ್ರೆಸ್‌ನಲ್ಲೂ ಅಸಮಾಧಾನ ಜೋರಾಗಿದೆ. ಇಲ್ಲಿ ಬಿ.ಬಿ. ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ಟಿಕೆಟ್ ಫೈನಲ್ ಆಗುತ್ತಿದ್ದಂತೆ, ಬಾದಾಮಿಯಲ್ಲಿ ಸಿದ್ದು ಬೆಂಬಲಿಗರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ ಇಲ್ಲಿಂದ ಸ್ಪರ್ಧೆ ಮಾಡಬೇಕು. ಇಲ್ಲದಿದ್ದರೆ ನಾವು ಚುನಾವಣೆಯೇ ಮಾಡಲ್ಲ ಎಂಬ ಬೆದರಿಕೆ ಹಾಕಿದ್ದಾರೆ. ಇನ್ನು ಮೊದಲ ಪಟ್ಟಿಯಲ್ಲೇ ಜಮಖಂಡಿ ಕ್ಷೇತ್ರಕ್ಕೆ ಹಾಲಿ ಶಾಸಕ ಆನಂದ ನ್ಯಾಮಗೌಡಗೆ ಟಿಕೆಟ್ ಘೋಷಣೆಯಾಗಿದ್ದು, ಇಲ್ಲಿ ಜಿಪಂ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಪಕ್ಷೇತರರಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಧಾರವಾಡ ಗ್ರಾ.: “ತಮಟೆ”ಗಾರ ಸದ್ದು
ಧಾರವಾಡ: ಧಾರವಾಡ ಗ್ರಾಮೀಣ-71 ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಟಿಕೆಟ್ ಘೋಷಣೆಯಾಗಿದೆ. ಇನ್ನೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಇಸ್ಮಾಯಿಲ್ ತಮಟಗಾರ ಕೈ ವಿರುದ್ಧ ಮುನಿಸಿಕೊಂಡು ಜೆಡಿಎಸ್ ಅಥವಾ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಪ್ರಯತ್ನದಲ್ಲಿದ್ದಾರೆ. ಆದರೆ ಈ ಕುರಿತು ಇನ್ನೂ ಯಾವ ಘೋಷಣೆ ಮಾಡಿಲ್ಲ ಕಲಘಟಗಿ ಕ್ಷೇತ್ರಕ್ಕೆ ಸಂತೋಷ ಲಾಡ್ ಹೆಸರು ಬಿಡುಗಡೆಯಾಗುತ್ತಿದ್ದಂತೆ ಅಲ್ಲಿಯೂ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಕ್ಷೇತ್ರದ ತುಂಬಾ ಕುಕ್ಕರ್ ಹಂಚಿಕೆ ಮಾಡಿದ್ದರು. ಇದೀಗ ಟಿಕೆಟ್ ಸಿಗದಿದ್ದರಿಂದ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹಾಲಿ ಶಾಸಕ ಸಿ.ಎಂ. ನಿಂಬಣ್ಣವರ ಹೊರಗಿನವರಿಗೆ ಟಿಕೆಟ್ ನೀಡಿದರೆ ತಕ್ಕಪಾಠ ಕಲಿಸುತ್ತೇನೆ ಎಂದು ಗುಡುಗಿದ್ದಾರೆ. ಅಸಮಾಧಾನ ಬೂದಿ ಮುಚ್ಚಿದ ಕೆಂಡ
ಚಿತ್ರದುರ್ಗ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚಿತ್ರದುರ್ಗದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ಸಿ ರಘು ಆಚಾರ್ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಇತ್ತ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಮ್ಮ ನಿರ್ಧಾರವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ವಲಸೆ ಬಂದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ಇಲ್ಲಿ ಆಕಾಂಕ್ಷಿಯಾಗಿದ್ದ ಜಿಪಂ ಮಾಜಿ ಸದಸ್ಯ ಯೋಗೀಶ್ ಬಾಬು ನಡೆ ಇನ್ನೂ ನಿಗೂಢವಾಗಿದೆ. ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಸವಾಲಾಗಿದ್ದ ಸವಿತಾ ರಘು ದಂಪತಿ ಕೂಡಾ ಈವರೆಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಹಿರಿಯೂರು ಕ್ಷೇತ್ರಕ್ಕೆ ಮಾಜಿ ಸಚಿವ ಡಿ.ಸುಧಾಕರ್‌ಗೆ ಟಿಕೆಟ್ ಘೋಷಣೆಯಾಗಿದ್ದು, ಇಲ್ಲಿ ಆಕಾಂಕ್ಷಿಯಾಗಿದ್ದ ಬಿ.ಸೋಮಶೇಖರ್ ಇತ್ತೀಚೆಗೆ ಬೆಂಬಲಿಗರ ಸಭೆ ನಡೆಸಿದ್ದರು. ಈ ವೇಳೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯ ಮಾಡಿದ್ದರು. ಆದರೆ, ಸೋಮಶೇಖರ್ ಇನ್ನೂ ನಿರ್ಧಾರ ಬಹಿರಂಗಪಡಿಸಿಲ್ಲ. ಐದೂ ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟ
ಹಾವೇರಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂ.ಎಂ.ಹಿರೇಮಠ ಈ ಬಾರಿ ಹಾವೇರಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಇವರು ಅಸಮಾಧಾನಗೊಂಡಿದ್ದು, ಪಕ್ಷೇತರರಾಗಿ ಸ್ಪ ರ್ಧಿಸಲು ಮುಂದಾಗಿದ್ದಾರೆ. ಹಾನಗಲ್ಲ ಕ್ಷೇತ್ರದ ಹಾಲಿ ಶಾಸಕ ಶ್ರೀನಿವಾಸ ಮಾನೆಗೆ ಕಾಂಗ್ರೆಸ್ ಟಿಕೆಟ್ ಘೋಷಿಸುತ್ತಿದ್ದಂತೆ ಮಾಜಿ ಸಚಿವ ಮನೋಹರ್ ತಹಶೀಲ್ದಾರ ಬಂಡಾಯದ ಬಾವುಟ ಹಾರಿಸಿದ್ದು, ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬ್ಯಾಡಗಿ ಕ್ಷೇತ್ರಕ್ಕೆ ಮಾಜಿ ಸಚಿವ ಬಸವರಾಜ ಶಿವಣ್ಣನವರಿಗೆ ಟಿಕೆಟ್ ಖಾತ್ರಿಯಾಗುತ್ತಿದ್ದಂತೆ ಎಸ್.ಆರ್. ಪಾಟೀಲ ಬಂಡಾಯದ ಬಾವುಟ ಹಾರಿಸಿದ್ದಾರೆ. ರಾಣಿಬೆನ್ನೂರ ಕ್ಷೇತ್ರಕ್ಕೆ ಪ್ರಕಾಶ ಕೋಳಿವಾಡಗೆ ಟಿಕೆಟ್ ಘೋಷಣೆಯಾಗಿದೆ. ಕೈ ಟಿಕೆಟ್ ಬಯಸಿದ್ದ ಜಟ್ಟೆಪ್ಪ ಕರಿಗೌಡರ ಬಂಡಾಯ ಎದ್ದಿದ್ದಾರೆ. ಇನ್ನು ಹಿರೇಕೆರೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಿ.ಎಚ್. ಬನ್ನಿಕೋಡ ಅವರಿಗೆ ಈ ಸಾರಿ ಟಿಕೆಟ್ ತಪ್ಪಿದೆ. ಹೀಗಾಗಿ, ಬಂಡೆದ್ದಿರುವ ಬನ್ನಿಕೋಡ 13ಕ್ಕೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.