Advertisement

ಜಲ ಕರ್ನಾಟಕ ಮಾತೆ…

12:30 AM Feb 09, 2019 | |

ಜಲ ಸಂಪನ್ಮೂಲ ಇಲಾಖೆಯಲ್ಲಿ ಬೃಹತ್‌ ನೀರಾವರಿ ಯೋಜನೆಗಳ ಮೊರೆ ಹೋಗದೆ ಸಣ್ಣ ಪುಟ್ಟ ಏತ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಬೃಹತ್‌ ಯೋಜನೆಗಳಾದ ಮಹದಾಯಿ, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನದ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ.

Advertisement

ಜಲ ಸಂಪನ್ಮೂಲ ಇಲಾಖೆಗೆ 2019-20ನೇ ಸಾಲಿನಲ್ಲಿ 17,212 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದ್ದು, ಏತ ನೀರಾವರಿ ಯೋಜನೆಗಳಿಗೆ 1,563 ಕೋಟಿ ರೂ. ನೀಡಲಾಗಿದೆ. ಬಾದಾಮಿ ತಾಲೂಕಿನ ಕೆರೂರು ಏತ ನೀರಾವರಿ, ಮಸ್ಕಿ, ಲಿಂಗಸಗೂರು ತಾಲೂಕಿನ ನಂದವಾಡಗಿ ಏತ ನೀರಾವರಿ 2ಹಂತದ ಯೋಜನೆ, ಕೊಪ್ಪಳ, ಇಂಡಿ, ನಾಗಠಾಣಾ ವ್ಯಾಪ್ತಿಯ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಹಾಗೂ ಕಂಪ್ಲಿ ವ್ಯಾಪ್ತಿಯ ಜಮೀನುಗಳಿಗೆ ನೀರುಣಿಸುವ ಏತ ನೀರಾವರಿ, ವಾರಾಹಿ ನದಿಯಿಂದ ಸಿದ್ದಾಪುರ ಸೌಕೂರು ಏತ ನೀರಾವರಿ, ಶಿಕಾರಿಪುರ ತಾಲೂಕಿನ ಕೆರೆ ತುಂಬಿಸಲು ಹುಡುಗುಣಿ-ತಾಳಗುಂದ ಹೊಸೂರು ಏತ ನೀರಾವರಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕುಗಳ ಹಳ್ಳಿಗಳ ಜಮೀನುಗಳಿಗೆ ನೀರುಣಿಸುವ ಕಾಚೇನಹಳ್ಳಿ 3ನೇ ಹಂತ, ಹೇಮಾವತಿ ನದಿಯಿಂದ ಒಂಟಿ ಗುಡ್ಡ ಏತ ನೀರಾವರಿ ಯೋಜನೆ, ಬಸವ ಕಲ್ಯಾಣ, ಭಾಲ್ಕಿ ತಾಲೂಕುಗಳ ಕೆರೆ ತುಂಬಿಸುವುದು, ಕಾರ್ಕಳ ತಾಲೂಕಿನ ಗ್ರಾಮಗಳಿಗೆ ನೀರು ಒದಗಿಸುವ ಎಣ್ಣೆ ಹೊಳೆ ಯೋಜನೆ ಹಾಗೂ ಬಕರಿಹಳ್ಳ ಕಡಗಿನಬೈಲು ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕೆರೆ ತುಂಬಿಸುವ ಯೋಜನೆಗಳಿಗೆ 1,680 ಕೋಟಿ ರೂ.ಬಳಕೆ ಮಾಡುವುದಾಗಿ ಹೇಳಿದ್ದು, ರಾಯಚೂರು ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಕೃಷ್ಣಾ ನದಿಯಿಂದ ಗಣೇಕಲ್‌ ಸಮತೋಲನ ಜಲಾಶಯಕ್ಕೆ ನೀರು ಪೂರೈಸುವ ಯೋಜನೆ, ತುಂಗಭದ್ರಾ ನದಿಯಿಂದ ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದ ಬಸಪ್ಪ, ಸಿಂಧನೂರು ತಾಲೂಕಿನ ಚನ್ನಳ್ಳಿ, ಸಿದ್ದರಾಮಪುರ, ಹುಡ ಮತ್ತು ಮಾವಿನಮಡು ಕೆರೆ ತುಂಬಿಸುವುದು, ಗುರುಮಿಠಕಲ್‌ ವ್ಯಾಪ್ತಿಯ 20 ಕೆರೆಗಳಿಗೆ ಭೀಮಾ ನದಿಯಿಂದ ನೀರು ತುಂಬಿಸುವುದು. ಹೇಮಾವತಿ ನದಿಯಿಂದ ಅರಕಲಗೂಡು ತಾಲೂಕಿನ 150 ಕೆರೆಗಳನ್ನು ತುಂಬಿಸುವುದು, ಬೇಲೂರು ಹೋಬಳಿಯ ದ್ವಾರಸಮುದ್ರ, ಕರಿಕಟ್ಟೆಹಳ್ಳಿ ಕೆರೆ ತುಂಬಿಸುವುದು, ಕಬಿನಿ ನದಿಯಿಂದ ನಂಜನಗೂಡು ತಾಲೂಕು ಗಳನ್ನು ತುಂಬಿಸುವುದು, ಶಿರಹಟ್ಟಿ, ಹೊಸಪೇಟೆ, ಕಾಗವಾಡ, ಶಿವಮೊಗ್ಗ, ಭದ್ರಾವತಿ, ಬೀದರ್‌, ಖಾನಾಪುರ, ಕುಂದಗೋಳ, ಮುಂಡಗೋಡ, ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನ ಕೆರೆಗಳಿಗೆ ವಿವಿಧ ನದಿಗಳಿಂದ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ 445 ಕೋಟಿ, ನೀರಾವರಿ ಯೋಜನೆಗಳಿಗೆ 477 ಕೋಟಿ ರೂ.ಮೀಸಲಿಡಲಾಗಿದೆ. ಕಾಲುವೆಗಳ ಆಧುನೀಕರಣ ಅಭಿವೃದ್ಧಿ ಕಾಮಗಾರಿಗಳಿಗೆ 860 ಕೋಟಿ ರೂ., ಬ್ರಿಡ್ಜ್ ಮತ್ತು ಬ್ಯಾರೇಜ್‌ ನಿರ್ಮಾಣ ಕಾಮಗಾರಿಗಳಿಗೆ 160 ಕೋಟಿ ರೂಪಾಯಿ, ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 506 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು ಹಾಗೂ ಸತತ ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜಲಸಂರಕ್ಷಣೆಗೆ ಬಜೆಟ್‌ನಲ್ಲಿ ಒತ್ತು ಕೊಡಲಾಗಿದ್ದು, 2019ನ್ನು ‘ಜಲವರ್ಷ’ ಎಂದು ಘೋಷಿಸಿ, ‘ಜಲಾಮೃತ’ ಯೋಜನೆಯಡಿ 20 ಸಾವಿರ ಜಲ ಸಂರಕ್ಷಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.

Advertisement

ಗ್ರಾಮೀಣ ಜನವಸತಿಗಳಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಒದಗಿಸಲು ‘ಜಲಧಾರೆ’ ಯೋಜನೆಯಡಿ ಮೊದಲ ಹಂತದಲ್ಲಿ 4 ಸಾವಿರ ಕೋಟಿ ರೂ.ವೆಚ್ಚದಲ್ಲಿ ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೋಜನೆ ಪ್ರಾರಂಭಿಸಲಾಗುತ್ತಿದೆ.

ರಾಜ್ಯದ 1 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರು ಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿ ಸುವ ‘ಸ್ವಚ್ಛಮೇಯ ಜಯತೆ’ ಆಂದೋಲನದ ಗುರಿಯನ್ನು ಬಜೆಟ್‌ನಲ್ಲಿ ಇಟ್ಟುಕೊಳ್ಳಲಾಗಿದೆ.

‘ಸುಭದ್ರ ಶಾಲೆ ಯೋಜನೆ’ಯಡಿ ರಾಜ್ಯದ 6,825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ 90 ಕೋಟಿ ರೂ.ವೆಚ್ಚದಲ್ಲಿ ಕಾಂಪೌಂಡ್‌ ತಡೆಗೋಡೆಗಳ ನಿರ್ಮಾಣ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳ ಡಿಜಿಟಲೀಕರಣ ಮತ್ತು ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ.

ಮಹಾತ್ಮಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪಾರದರ್ಶಕತೆ ಬಿಂಬಿಸಲು ಮತ್ತು ಸಾರ್ವಜನಿಕರ ಮಾಹಿತಿಗಾಗಿ, ಗ್ರಾಮ ಪಂಚಾಯಿತಿ ಆಯವ್ಯಯ ಕಿರು ಪುಸ್ತಕ ಪ್ರಕಟಿಸುವುದಾಗಿ 2019-20ನೇ ಸಾಲಿನ ಬಜೆಟ್‌ನಲ್ಲಿ ಹೇಳಲಾಗಿದೆ. ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಅನುದಾನ

ಬಾದಾಮಿಗೆ 25 ಕೋಟಿ ರೂ.
ಚಾಲುಕ್ಯರ ಪರಂಪರೆಯನ್ನು ಪರಿಚಯಿಸುವ ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣ ಹಾಗೂ ಕರಕುಶಲ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲು 25 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ವಿಶ್ವವಿಖ್ಯಾತ ಹಂಪಿ ಹಾಗೂ ಮೈಸೂರಿನಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ಲಂಡನ್‌ ಬಿಗ್‌ ಬಸ್‌ ಮಾದರಿಯಲ್ಲಿ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌ ಸೇವೆ ಆರಂಭಿಸುವುದಾಗಿ ಘೋಷಿಸಲಾಗಿದೆ. ಕರ್ನಾಟಕದತ್ತ ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಹಂಪಿಯಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ ಹಾಗೂ ವಿಜಯಪುರದಲ್ಲಿ ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ ಸ್ಥಾಪನೆಗೆ ತಲಾ 1 ಕೋಟಿ ರೂ. ಮೀಸಲಿಡಲಾಗಿದೆ.

ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂ. ಅನು ದಾನ ನೀಡಲಾಗಿದೆ. ಇಲಾಖೆಗೆ ಸಂಬಂಧಿಸಿದ 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳನ್ನು ಮುಂದಿನ ಐದು ವರ್ಷದಲ್ಲಿ ಸಮೀಕ್ಷೆ ನಡೆಸುವ ಜತೆಗೆ ಸಂರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಗಿದೆ.

ಅನಿರ್ಬಂಧಿತ ಅನುದಾನ ಹೆಚ್ಚಳ
ರಾಜ್ಯ ಹಣಕಾಸು ಆಯೋಗದ ಶಿಫಾರಸಿನಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಅನಿರ್ಬಂಧಿತ ಅಭಿವೃದ್ಧಿ ಅನುದಾನದ ‘ಬಂಪರ್‌’ ನೀಡಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು 4 ಕೋಟಿ ರೂ.ಗಳಿಂದ ಗರಿಷ್ಠ 8 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 172 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ. ಅದೇ ರೀತಿ ಪ್ರತಿ ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು 1 ಕೋಟಿ ರೂ.ಗಳಿಂದ ಗರಿಷ್ಠ 2 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ಇದಕ್ಕಾಗಿ 372 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.

ಸಣ್ಣ ನೀರಾವರಿಯಿಂದಲೂ ಕೆರೆ ತುಂಬಿಸುವುದು
ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಕೆ.ಸಿ.ವ್ಯಾಲಿ ಯೋಜನೆ ಅಡಿಯಲ್ಲಿ ಕೆಐಎಡಿಬಿಗೆ ನೀರು ಪೂರೈಸಲು, ಪೈಪ್‌ಲೈನ್‌ ಅಳವಡಿಕೆಗೆ 40 ಕೋಟಿ ರೂ., ಮಂಡ್ಯ ಜಿಲ್ಲೆಯ ಪಾಂಡವಪುರ, ಬೀದರ್‌ ಜಿಲ್ಲೆಯ ಎಲ್ಲ ಕೆರೆಗಳ ಸುಧಾರಣೆಗೆ 300 ಕೋಟಿ, ತುಂಗಾ ನದಿಯಿಂದ ಶಿವಮೊಗ್ಗ ಜಿಲ್ಲೆಯ 8 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಹಾಗೂ ಗೋಕಾಕ್‌ ತಾಲೂಕಿನ ಕಲ್ಲಮರಡಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳ ಲಾಗುವುದು. ಅಲ್ಲದೆ, ಅಂತರ್ಜಲ ಕುಸಿದಿರುವ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸಲು ‘ಚೆಕ್‌ ಡ್ಯಾಂ, ಬ್ಯಾರೇಜ್‌ ಕಂ, ಬಾಂದಾರ್‌ ಮರುಪೂರಣ ರಚನೆ ನಿರ್ದೇಶನಾಲಯ’ ಸ್ಥಾಪಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next