Advertisement

ಕರ್ಣನ ಪಾತ್ರ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ: ಶಿವಣ್ಣ

10:51 AM Jul 31, 2017 | Team Udayavani |

ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸದಿರುವುದಕ್ಕೆ ಡೇಟ್ಸ್‌ ಕ್ಲಾಶ್‌ ಕಾರಣವೇ ಹೊರತು, ಬೇರೇನೂ ಕಾರಣವಲ್ಲ ಎಂದು ಶಿವರಾಜಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ಶಿವರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ಅರ್ಜುನನ ಪಾತ್ರ ನೀಡಲಾಗಿತ್ತು, ದರ್ಶನ್‌ ಅವರೊಂದಿಗಿನ ಕೋಲ್ಡ್‌ ವಾರ್‌ನಿಂದಾಗಿ ಅವರು ಚಿತ್ರದಲ್ಲಿ ನಟಿಸಲಿಲ್ಲ ಎಂಬಂತಹ ವದಂತಿಗಳು ಇತ್ತೀಚೆಗೆ ಕೇಳಿ ಬಂದ ಹಿನ್ನೆಲೆಯಲ್ಲಿ, ಶಿವರಾಜಕುಮಾರ್‌ ಅವರನ್ನು ಮಾತನಾಡಿಸಿದಾಗ, ಅವರು ಇಡೀ ಪ್ರಕರಣದ ಕುರಿತಾಗಿ ಸ್ಪಷ್ಟತೆ ಕೊಟ್ಟರು.

Advertisement

“ನನಗೆ ಬಂದಿದ್ದು ಅರ್ಜುನನ ಪಾತ್ರವಲ್ಲ, ಕರ್ಣನ ಪಾತ್ರ. ಆ ಪಾತ್ರ ಮಾಡುವುದಕ್ಕೆ ಸಾಧ್ಯವಾಗದಿರುವುದಕ್ಕೆ ಕಾರಣವೆಂದರೆ ಡೇಟ್ಸ್‌ ಕ್ಲಾಶ್‌ ಅಷ್ಟೇ. ಸದ್ಯಕ್ಕೆ “ದಿ ವಿಲನ್‌’, “ಟಗರು’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ, ಚಿತ್ರಕ್ಕೆ ಡೇಟ್ಸ್‌ ಹೊಂದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದೊಂದು ಕಾರಣವಾದರೆ, ಇನ್ನೂ ಒಂದು ಕಾರಣವಿದೆ. ಕರ್ಣನ ಪಾತ್ರಕ್ಕೆ ಒಂದಿಷ್ಟು ತೂಕ ಹೆಚ್ಚಿಸಬೇಕಿತ್ತು. ನಾನೀಗ 67 ಕೆ.ಜಿ. ತೂಕ ಇದ್ದೀನಿ. ಕನಿಷ್ಠ 72 ಕೆಜಿಯಾದರೂ ಆ ಪಾತ್ರಕ್ಕೆ ಬೇಕು.

ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ, ತೂಕ ಹೆಚ್ಚಿಸಿಕೊಂಡರೆ ಆ ಪಾತ್ರಗಳಿಗೆ ಸಮಸ್ಯೆಯಾಗುತ್ತದೆ. ಇನ್ನು ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕು. ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಸಮಯ ಇಲ್ಲ. ತೂಕ ಹೆಚ್ಚಿಸದೆ ಕರ್ಣನ ಪಾತ್ರವನ್ನು ಮಾಡಿದರೂ ಅದು ಕಾಮಿಡಿಯಾಗಿ ಕಾಣುತ್ತದೆ. ಇದೇ ನಿಜವಾದ ಕಾರಣಗಳೇ ಹೊರತು, ದರ್ಶನ್‌ ಜೊತೆಗೆ ನಟಿಸಬೇಕು ಎಂಬ ಕಾರಣಕ್ಕೆ ಸಿನಿಮಾ ಬಿಟ್ಟಿಲ್ಲ. ನಿಜ ಹೇಳಬೇಕೆಂದರೆ, ಕರ್ಣನ ಪಾತ್ರ ಮಾಡದಿರುವುದನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೀನಿ’ ಎನ್ನುತ್ತಾರೆ ಶಿವರಾಜಕುಮಾರ್‌. 

ಆಗಸ್ಟ್‌ನಲ್ಲಿ ಒಳ್ಳೆಯ ಸುದ್ದಿ ಕೊಡುತ್ತೀನಿ: ಇನ್ನು ರಾಜಕೀಯಕ್ಕೆ ಬರುವ ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ಅವೆಲ್ಲಾ ಅಪ್ಪಟ ಸುಳ್ಳು ಎಂದರು. “ನನಗೆ ರಾಜಕೀಯಕ್ಕೆ ಬರುವುದಕ್ಕೆ ಯಾವುದೇ ಆಸಕ್ತಿ ಇಲ್ಲ. ಇನ್ನು ರಾಜಾಜಿನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಸಹ ಸುಳ್ಳು. ನಾನು ರಾಜಕೀಯಕ್ಕೆ ಬರಬೇಕೆಂದರೆ, ಸ್ವತಂತ್ರವಾಗಿ ಬರುತ್ತೇನೆ. ಆದರೆ, ನನಗೆ ಯಾವುದೇ ಆಸಕ್ತಿ ಇಲ್ಲ. ನಮ್ಮ ಕುಟುಂಬದಿಂದ ಒಂದೊಳ್ಳೆಯ ಕಾರ್ಯಕ್ರಮವನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಿದ್ದೇವೆ. ರೂಪುರೇಷೆಗಳೆಲ್ಲಾ ಸಿದ್ಧವಾದ ನಂತರ ಆಗಸ್ಟ್‌ ತಿಂಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ’ ಎಂದರು. 

ಲಂಡನ್‌ನಲ್ಲಿ ಫ್ಯಾಮಿಲಿ ತರಹ ಇದ್ವಿ: ಇನ್ನು ಇತ್ತೀಚೆಗೆ “ದಿ ವಿಲನ್‌’ ಚಿತ್ರಕ್ಕಾಗಿ ಸುದೀಪ್‌ ಅವರೊಂದಿಗೆ ಲಂಡನ್‌ನಲ್ಲಿ ಚಿತ್ರೀಕರಣ ಮಾಡಿದ್ದನ್ನು ನೆನಪಿಸಿಕೊಂಡ ಅವರು, “ಲಂಡನ್‌ನಲ್ಲಿ ಸುದೀಪ್‌ ಅವರ ಜೊತೆಗೆ ಕೆಲವು ಅದ್ಭುತವಾದ ಕ್ಷಣಗಳನ್ನು ಕಳೆದೆ. ಅಲ್ಲಿ ನಾವು ಚಿತ್ರೀಕರಣಕ್ಕೆ ಹೋಗಿದ್ದಿಕ್ಕಿಂತ ಹೆಚ್ಚಾಗಿ ಅಲ್ಲೊಂದು  ಫ್ಯಾಮಿಲಿ ಔಟಿಂಗ್‌ ತರಹ ಇತ್ತು. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ’ ಎಂದು ಹೇಳಿದರು. 

Advertisement

“ಒಪ್ಪಂ’ ರೀಮೇಕ್‌ನಲ್ಲಿ ನಟಿಸುತ್ತಿರುವುದು ನಿಜ: ಶಿವರಾಜಕುಮಾರ್‌ ಅವರು ಕಳೆದ 15 ವರ್ಷಗಳಿಂದ ಯಾವ ರೀಮೇಕ್‌ ಚಿತ್ರದಲ್ಲೂ ನಟಿಸಿಲ್ಲ. ಈ ಮಧ್ಯೆ ಅವರು ಮಲಯಾಳಂನ “ಒಪ್ಪಂ’ ಚಿತ್ರದ ರೀಮೇಕ್‌ನಲ್ಲಿ ನಟಿಸುತ್ತಿರುವ ಸುದ್ದಿ ಇದೆ. ಅದನ್ನು ಒಪ್ಪಿಕೊಳ್ಳುವ ಅವರು, ಕಥೆ ಚೆನ್ನಾಗಿರುವ ಕಾರಣ ರೀಮೇಕ್‌ನಲ್ಲಿ ನಟಿಸುತ್ತಿರುವುದಾಗಿ ಹೇಳುತ್ತಾರೆ. “ಸದ್ಯಕ್ಕೆ “ದಿ ವಿಲನ್‌’ ಮತ್ತು “ಟಗರು’ ಚಿತ್ರಗಳಿವೆ. ಅದನ್ನು ಮುಗಿಸಿದ ನಂತರ “ಒಪ್ಪಂ’ ರಿಮೇಕ್‌ನಲ್ಲಿ ನಟಿಸುತ್ತೇನೆ’ ಎನ್ನುತ್ತಾರೆ ಶಿವರಾಜಕುಮಾರ್‌.  

ದರ್ಶನ್‌ ಅವರ ಜೀನ್ಸ್‌ನಲ್ಲೇ ಇದೆ: ಇನ್ನು ತಮ್ಮ ಮತ್ತು ದರ್ಶನ್‌ ಮಧ್ಯೆ ಯಾವುದೇ ವೈರತ್ವವಿಲ್ಲ ಎನ್ನುವ ಅವರು, “ಈ ಚಿತ್ರದಲ್ಲಿ ನಾನು ಕರ್ಣನ ಪಾತ್ರ ಮಾಡಬೇಕಿತ್ತು. ಇನ್ನು ದರ್ಶನ್‌ ಅವರು ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದುಯೋರ್ಧನ ಮತ್ತು ಕರ್ಣನ ನಡುವೆ ಎಂತಹ ಸ್ನೇಹವಿತ್ತೋ, ಅದೇ ಸ್ನೇಹ ನಮ್ಮಿಬ್ಬರ ನಡುವೆಯೂ ಇದೆ.

ದರ್ಶನ್‌ ಅವರನ್ನು ಚಿಕ್ಕ ಹುಡುಗನಿದ್ದಾಗಿನಿಂದ ನೋಡುತ್ತಾ ಬಂದಿದ್ದೀನಿ. ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ. ದುರ್ಯೋಧನನ ಪಾತ್ರವನ್ನು ದರ್ಶನ್‌ ಅದ್ಭುತವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನಗಿದೆ. ಆ ತರಹದ ಪಾತ್ರಗಳು ಅವರಿಗೆ ಸುಲಭ. ಅದು ಅವರ ಜೀನ್ಸ್‌ನಲ್ಲೇ ಇದೆ’ ಎನ್ನುತ್ತಾರೆ ಶಿವರಾಜಕುಮಾರ್‌. 

-ಡೇಟ್ಸ್‌ ಕ್ಲಾಶ್‌ ಮತ್ತು ತೂಕದ ಸಮಸ್ಯೆಯಿಂದ “ಕುರುಕ್ಷೇತ್ರ’ ಬಿಡಬೇಕಾಯಿತು

-„ವದಂತಿಗಳಿಗೆ ತೆರೆ ಎಳೆದ ನಟ ಶಿವರಾಜಕುಮಾರ್‌

-ಕರ್ಣನ ಪಾತ್ರಕ್ಕಾಗಿ ಕನಿಷ್ಠ 5 ಕೆ.ಜಿ. ಯಾದರೂ ತೂಕ ಹೆಚ್ಚಿಸಬೇಕಾಗಿತ್ತು

– ದರ್ಶನ್‌ ಅದ್ಭುತವಾಗಿ ನಟಿಸುತ್ತಾರೆ ಎಂಬ ನಂಬಿಕೆ ಇದೆ

– ನನ್ನ, ದರ್ಶನ್‌ ನಡುವಿನ ಸ್ನೇಹ ಕರ್ಣ-ದುರ್ಯೋಧನನ ಸ್ನೇಹದ ತರಹ

-ರಾಜಕೀಯ ಸೇರುವ ಆಸಕ್ತಿಯೂ ಇಲ್ಲ, ಚುನಾವಣೆಗೂ ಸ್ಪರ್ಧಿಸುವುದಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next