ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ. ಕನಕದಾಸರು ಜಾತಿ ಧರ್ಮಗಳ ಸಂಕೋಲೆಗಳನ್ನು ತೊರೆದು ಸಮಾಜಕ್ಕೆ ದಾರ್ಶನಿಕನಾದುದು ಅವರ ಜೀವನದ ಒಂದು ಭಾಗ ಮಾತ್ರ, ಹರಿಭಕ್ತಿಸಾರದ ಮೂಲಕ ಭಕ್ತಿಯ ಎಲ್ಲೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದು, ಭಕ್ತಿಯೆಂಬ ಮುಕ್ತಿ ಮಾರ್ಗವನ್ನು ಸಾರಿ ಹೇಳಿದ್ದು ಅವರ ಜೀವನದ ಇಂದಿಗೂ ಜನಪ್ರಿಯವಾಗದ ಇನ್ನೊಂದು ಸ್ಥಿತಿ. ಅಲೌಕಿಕ ಜೀವನಕ್ಕೆ ಕಾಲಿಟ್ಟ ದಾಸರು, ತಮ್ಮ 108 ಗದ್ಯಗಳ ಹರಿಭಕ್ತಿ ಸಾರದಲ್ಲಿ ಮುಕ್ತಿಯೆಂಬ ಲೋಕಕೆ ಜ್ಞಾನವೆಂಬುದು ನೈಜ ಮಾರ್ಗವೆಂಬುದನ್ನು ತಿಳಿಸಿದ್ದು ಮಾತ್ರವಲ್ಲ, ಹಿಂದಿನ ಜನ್ಮ ಮತ್ತು ಮುಂದಿನ ಜನ್ಮಗಳೆಂಬ ವಿಮರ್ಶೆಯೊಡನೆ, ಸಮಸ್ತ ಸಂಕುಲವನ್ನು ದೀನರನ್ನಾಗಿ ಮತ್ತು ಹರಿಯನ್ನು ದಾನಿಯನ್ನಾಗಿ ಹೇಳಿರುವ ಬಗೆಯಂತೂ ಉಲ್ಲೇಖನೀಯ.
ಭೋಗ ಭಾಗ್ಯವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || 17 ||
ಏನು ಮಾಡಿದರೇನು ಮುಕ್ತಿ ಜ್ಞಾನವಿಲ್ಲದೊಡಿಲ್ಲ ಭಕ್ತಿಗೆ ನೀನೆ
ಕಾರಣನಾಗಿ ರಕ್ಷಿಸು ನಮ್ಮ ನಮ್ಮನನವರತ || 67 ||
ಒಬ್ಬ ದಾರ್ಶನಿಕ, ಭಕ್ತಿ ಪರಂಪರೆಯ ಕವಿ ತನ್ನ ಅಸ್ತಿತ್ವದ ಐದುನೂರು ವರ್ಷಗಳ ಆನಂತರವೂ ಸತತವಾಗಿ ನಮ್ಮ ಸಾಮಾಜಿಕ ಬದುಕನ್ನು ಕೆದಕುತ್ತಲೇ ಪ್ರಸ್ತುತವಾಗುತ್ತಿರುವುದು, ಜತೆ ಜತೆಗೆ ಸಮಾಜವನ್ನು ಗಹನವಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಕ್ತಿ ಚಿಂತನೆಗೆ ಒಳಪಡುವಂತೆ ಮಾಡುತ್ತಿರುವುದು ಸೋಜಿ ಗದ ವಿಷಯ. ಮೊದಲನೆಯದಾಗಿ, ಹುಟ್ಟಿಗಂಟಿ ಬಂದ ಜಾತಿಯನ್ನು ತಳ್ಳಿ ಅದರ ವಿರುದ್ಧವಾಗಿ ಈಜಿದ ಕನಕದಾಸರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವುದು ಅಷ್ಟು ಸಮಂಜಸವಲ್ಲ. ಕನಕದಾಸರು ಇಂದು ಕೇವಲ ದಾಸಶ್ರೇಷ್ಠರಾಗಿ ಮಾತ್ರವಲ್ಲ, ಮಹಾನ್ ಮಾನವತಾವಾದಿ ಯಾಗಿ ಜನ ಮಾನಸದಲ್ಲಿ ನಿಂತಿದ್ದಾರೆ.
ಎರಡನೆಯದಾಗಿ, ಕೀರ್ತನಕಾರರಾದ ಅವರು, ಅದೇ ಸಂಪ್ರದಾಯದ ಇತರರಂತೆ ಕೇವಲ ಮಾಧ್ವಭಕ್ತಿ ಹಾಗೂ ಸಿದ್ಧಾಂತಗಳಿಗೆ ಕಟ್ಟು ಬೀಳದೆ, ಒಂದು ಉದಾರವಾದಿ ಧಾರ್ಮಿಕ ನಿಲುವನ್ನು ಪ್ರಕಟಿಸಿದ್ದು ಪ್ರಶಂಸನೀಯ. ತಾನು ಹುಟ್ಟಿನಲ್ಲಿ ಕುರುಬನೆಂಬ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ತಮ್ಮ ಭಕ್ತಿಯ ನಿಲುವನ್ನು ಹರಿಗೆ ಸಾರುತ್ತಾ ಸತುಲಗಳಿಗೆ ದೇವನೊಲಿವನೆಂಬ ಮಾನವ ನಿರ್ಮಿತ ತಪ್ಪು ಸಿದ್ಧಾಂತಗಳನ್ನು ತಲೆಕೆಳಗೆ ಮಾಡಿ “ದೇವನಿಗೆಲ್ಲವೂ ಸತುಲಗಳೆ’ ಎಂದು ತೋರಿಸಿದವರು ಭಕ್ತ ಕನಕದಾಸರು. ಕನಕದಾಸರ ಸಾಹಿತ್ಯದಲ್ಲಿ ಬದುಕಿನ ಹಸನನ್ನು ಅರಸುತ್ತಾ ಬೆಳೆಯುವ ಸಂಘರ್ಷಮಯ ಜೀವಂತ ತುಡಿತವಿದೆ. ಈ ಹಸನನ್ನು ಹೊಸ ಹೊಸ ವಿನ್ಯಾಸದ ಅನ್ವೇಷಣೆಗೆ ಒಳಪಡಿಸಿಕೊಂಡು ಉಗಾಭೋಗ, ಮುಂಡಿಗೆ ಮತ್ತು ಕೀರ್ತನೆಗಳ ಮೂಲಕ ಕೊಂಡೊಯ್ಯುವ ಪರಿ ಇದೆಯಲ್ಲ ಅದು ಇಂದಿನ ದಿನಮಾನಗಳಲ್ಲಿ ತಲ್ಲಣಗಳ ಹುಡುಕಾಟಕ್ಕೆ ಹಾತೊರೆದ ಸಮಾಜದ ಮುಂದೆ ಬೃಹದಾಕಾರದ ತಿರುವಾಗಿ ತೆರೆದುಕೊಳ್ಳಬಲ್ಲದು. ಇದುವೇ 16ನೇಯ ಶತಮಾನದ ಒಬ್ಬ ಸಂತ ಕವಿಯ ಜೀವನ ದರ್ಶನ ಮತ್ತು ಕಾವ್ಯ ಸಂದೇಶ… ಮತ, ಧರ್ಮ, ಕಾಲ ಸೀಮೆಗಳನ್ನು ಮೀರಿ ಇಂದಿಗೂ ಬಹು ಪ್ರಸ್ತುತವಾಗುತ್ತಿರುವ ಬಗೆ.
– ಎಂ.ಡಿ ಉಮೇಶ್, ಮಳವಳ್ಳಿ