Advertisement

ಉತ್ತರ ಕರ್ನಾಟಕದಲ್ಲಿ ಕಾರ್ಮುಗಿಲು; ಹೊಸ ಹುಡುಗನ ಕನಸು ನನಸು

03:28 PM Jul 21, 2018 | Sharanya Alva |

ಉತ್ತರ ಕರ್ನಾಟಕದಿಂದ ಸಾಕಷ್ಟು ಮಂದಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇನ್ನು ಕೆಲವು ಸಿನಿಮಾಗಳು ಉತ್ತರ ಕರ್ನಾಟಕದಲ್ಲೇ ತಯಾರಾಗಿ ಅಲ್ಲೇ ಬಿಡುಗಡೆ ಕೂಡಾ ಆಗುತ್ತದೆ. ಈಗ ಉತ್ತರ ಕರ್ನಾಟಕದ ಮಂದಿಯೇ ಸೇರಿಕೊಂಡು ಮಾಡಿರುವ ಸಿನಿಮಾವೊಂದು ಜುಲೈ 27ರಂದು ತೆರೆಗೆ ಬರಲು ಸಿದ್ಧವಾಗಿದೆ. ಅದು “ಕಾರ್ಮುಗಿಲು’. ಹೌದು, “ಕಾರ್ಮುಗಿಲು’ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಜುಲೈ 27 ರಂದು ಬಿಡುಗಡೆಯಾಗುತ್ತಿದೆ. ಮಾಧವ ಶಿವಾ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. 

Advertisement

ಸಿನಿಮಾ ನಿರ್ದೇಶಕರಾಗಿ ಇವರಿಗೆ ಇದು ಚೊಚ್ಚಲ ಸಿನಿಮಾ. ಈ ಹಿಂದೆ ಕೇವಲ 68 ರೂಪಾಯಿಯಲ್ಲಿ ಐದು ನಿಮಿಷದ ಕಿರುಚಿತ್ರ ನಿರ್ಮಿಸಿ ಫ್ರೀ ಸ್ಟೈಲ್‌ ಅವಾರ್ಡ್‌ನಲ್ಲಿ 1300ಕ್ಕೂ ಹೆಚ್ಚು ಕಿರುಚಿತ್ರಗಳ ಪೈಪೋಟಿ ಮಧ್ಯೆ 2ನೇ ಸ್ಥಾನ ಪಡೆದ ಮಾಧವ ಶಿವಾ ಅವರು ಈಗ “ಕಾರ್ಮುಗಿಲು’ ಮಾಡಿದ್ದಾರೆ. ಮಾಧವ ಶಿವಾ ಅವರು ಸಿನಿಮಾವನ್ನು ಅದ್ಧೂರಿಯಾಗಿ ಮಾಡಿದ್ದು, ಯಾವುದೇ ವಿಚಾರದಲ್ಲೂ ರಾಜಿಯಾಗಿಲ್ಲವಂತೆ. ಚಿತ್ರದ ಬಗ್ಗೆ ಮಾತನಾಡುವ ಮಾಧವ ಶಿವಾ ಅವರು, “ಚಿತ್ರದಲ್ಲಿ ನಾಯಕ ನಟನಾಗಿ ಕನಸು ಹೊತ್ತು ಬೆಂಗಳೂರಿಗೆ ಹೋದ ನನಗೆ ನಿರ್ದೇಶಕರೊಬ್ಬರು ಮಾಡಿದ ಅವಮಾನವೇ ನಾನಿಂದು ನಿರ್ದೇಶಕ, ನಟನಾಗಲು ಸಾಧ್ಯವಾಗಿದೆ.

 ಈಗಾಗಲೇ ಚಿತ್ರದ ಹಾಡುಗಳು ಜನರ ಮನಸ್ಸು ಗೆದ್ದಿದ್ದು, ಈಗ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಮಾಡಲಾಗಿದೆ. ಉತ್ತರ ಕರ್ನಾಟಕದ ಜನ ಕೈ ಬಿಡೋದಿಲ್ಲ ಎಂಬ ನಂಬಿಕೆ ಇದ್ದು, ಆದಷ್ಟು ಈ ಭಾಗದ ಚಿತ್ರಮಂದಿರಗಳಲ್ಲಿ ಜುಲೈ 27ಕ್ಕೆ ಬಿಡುಗಡೆ ಆಗಲಿದೆ. ನಾಯಕನ ಬದುಕಿನಲ್ಲಿ ಆಕಾಂಕ್ಷೆಗಳನ್ನು ಹೊತ್ತ ಮೋಡಗಳು ಕವಿದಿರುತ್ತವೆ. ಅವು ನನಸಾಗಿ ಹನಿ ಹನಿಯಾಗಿ ಜಾರಬೇಕಷ್ಟೆ. ಆದರೆ ಅವು ಮಳೆಯಾಗಿ ಧರೆಗೆ ಇಳಿಯುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಚಿತ್ರದಲ್ಲಿ ಕಾಣಬಹುದು. ಇದು ಕೇವಲ ಕಾಲ್ಪನಿಕ ಕಥೆಯಾದರೂ ಇಲ್ಲಿ ಮೂಡಿ ಬಂದಿರುವ ದೃಶ್ಯಗಳು ವಾಸ್ತವಕ್ಕೆ ಹತ್ತಿರವಾಗಿವೆ’ ಎನ್ನುತ್ತಾರೆ.

ಚಿತ್ರದ “ಕಾರ್ಮುಗಿಲೆ, ಕಾರ್ಮುಗಿಲೆ ಕಳಚಿತು ನಿನ್ನ ಬಾನಿನ ಬಂಧ. ಹನಿಯಾಗಿ ನೀ ಧರೆ ಸೋಕುವ ಮುನ್ನ, ಸೇರುತಿರುವೆಯಾ ನೀ ಕಡಲ ತೀರವ…’ ಎಂಬ ಗೀತೆಯನ್ನು ಮಾಧವ ಅವರೇ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು,  ಪ್ರಣತಿ ಎಸ್‌, ಜೋಯಲ್‌ ಸಕ್ರಿ ಹಾಗೂ ಅಮಿತ್‌ ಚೌಗಲೆ, ಸುಜಯಿಂದ್ರ ಸೇರಿದಂತೆ ಸ್ಥಳೀಯ ಗಾಯಕರಿಗೆ ಅವಕಾಶ ನೀಡಲಾಗಿದೆ. 

ನಾಯಕಿಯಾಗಿ ಚೈತ್ರಾ ಸುಂಕದ ಬಣ್ಣ ಹಚ್ಚಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯವನ್ನು ಮಾಧವ ಅವರೇ ಬರೆದಿದ್ದು, ಸಂಭಾಷಣೆಗೆ ಜಯದೇವ ಪೂಜಾರ ಸಾಥ್‌ ನೀಡಿದ್ದಾರೆ. ಈ ಚಿತ್ರಕ್ಕಾಗಿ ಭೂಮಿ ಫಿಲ್ಮ್ ಕ್ರಿಯೇಶನ್ಸ್‌ ಎಂಬ ಹೋಮ್‌ ಬ್ಯಾನರ್‌ ಅಡಿಯಲ್ಲಿ ಮಾಧವ ಅವರ ಸಹೋದರ ಮಹಾದೇವ ಅಳಗವಾಡಿ ಬಂಡವಾಳ ಹೂಡಿದ್ದಾರೆ. ಜೋಯಲ್‌ ಸಕ್ರಿ ಸಂಗೀತ ಸಂಯೋಜನೆ, ಹರ್ಷವರ್ಧನ ಡಿ.ಎಂ. ಛಾಯಾಗ್ರಹಣದಲ್ಲಿ ಚಿತ್ರ ಮೂಡಿಬಂದಿದೆ.

Advertisement

– ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next