Advertisement

ಕಾರ್ಕಳ: ಬರಿದಾಗುತ್ತಿವೆ ನದಿ ಪಾತ್ರಗಳು

09:32 PM Dec 14, 2020 | mahesh |

ಕಾರ್ಕಳ: ಪ್ರವಾಹದ ಮಟ್ಟಕ್ಕೆ ತಲುಪಿದ್ದ ನದಿ ಪಾತ್ರಗಳು ಈಗ ಬಹುಬೇಗನೆ ಬರಿದಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ಈ ಬೇಸಗೆಯಲ್ಲಿ ನೀರಿನ ಅಭಾವ ತೀವ್ರವಾಗಿ ಕಾಡುವ ಅಪಾಯವಂತೂ ಗೋಚರಿಸತೊಡಗಿದೆ.

Advertisement

ಕಳೆದ ವರ್ಷ ತಾಲೂಕಿನಲ್ಲಿ ಪ್ರಮುಖ ನದಿಗಳು ಸಹಿತ ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಸಮೃದ್ಧವಾಗಿತ್ತು. ಆದರೆ ಈ ಬಾರಿ ಬೇಗನೆ ತನ್ನ ಹರಿವನ್ನು ನಿಲ್ಲಿಸುವ ಸೂಚನೆ ನೀಡುತ್ತಿವೆ. ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರವರಿ ಆರಂಭದಲ್ಲಿ ನದಿ ತೋಡುಗಳಿಗೆ ಸಾಂಪ್ರದಾಯಿಕ ಕಟ್ಟ ನಿರ್ಮಾಣ ವಾಡಿಕೆ. ಆದರೆ ಈ ಬಾರಿ ಡಿಸೆಂಬರ್‌ಗೆ ಕಟ್ಟ ಹಾಕುವ ಮುನ್ನವೇ ಅಂತರ್ಜಲ ಕುಸಿಯುತ್ತಿರುವ ಲಕ್ಷಣ ಗೋಚರಿಸುತ್ತಿವೆ.

ನೀರ ಹರಿವು ಇಳಿಕೆ
ತಾಲೂಕಿನ ನದಿ ಮೂಲವಾದ ಶಾಂಭವಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಸಂಕಲಕರಿಯ, ಸಚೇcರಿಪೇಟೆ, ಕಡಂದಲೆ, ಮುಂಡ್ಕೂರು, ಏಳಿಂಜೆ, ಪಕಳ, ಪೊಸ್ರಾಲು, ಕೊಟ್ರಪ್ಪಾಡಿ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗಳ ಈ ಪ್ರದೇಶಗಳಲ್ಲಿ ನೀರಿನ ಒಳ ಹರಿವು ಉತ್ತಮ ಸ್ಥಿತಿಯಲ್ಲಿತ್ತು. ಬಜಗೋಳಿ ವ್ಯಾಪ್ತಿಯ ಮಾಳ, ಮಲ್ಲಾರ್‌ ಹೊಳೆ, ಕಡಾರಿ ಹೊಳೆ, ಮಂಜಲ್ತಾರ್‌ ಹೊಳೆಗಳಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನದಿಗಳ ನೀರಿನ ಹರಿವು ಉತ್ತಮ ರೀತಿಯಲ್ಲಿತ್ತು. ಅಜೆಕಾರು ಎಣ್ಣೆಹೊಳೆಯ ಸುವರ್ಣಾ ನದಿ ಸೇರಿದಂತೆ ಹೆಚ್ಚಿನ ನದಿಗಳಲ್ಲಿ ಡಿಸೆಂಬರ್‌ ತಿಂಗಳಲ್ಲಿ ನೀರು ಉತ್ತಮವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆಯೇ ಇದೆ.

ಶೀಘ್ರ ಹಲಗೆ ಹಾಕಬೇಕಾದ್ದು ಅನಿವಾರ್ಯ
ತಾಲೂಕಿನಲ್ಲಿ ಸುಮಾರು 74 ಕಿಂಡಿ ಅಣೆಕಟ್ಟುಗಳಿವೆ. ಇವುಗಳಿಗೆ ಹಲಗೆ ಜೋಡಿಸುವ ಕಾರ್ಯ ಜನವರಿ ವೇಳೆಗೆ ನಡೆಯುತ್ತದೆ. ಈಗ ನೀರಿನ ಹರಿವಿನ ಮಟ್ಟ ಗಮನಿಸಿದರೆ ಶೀಘ್ರ ಹಲಗೆ ಜೋಡಣೆ ಅಗತ್ಯವಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಣೆ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಇಂಗುವಿಕೆ ಕಡಿಮೆ
ಹಿಂದೆ ತಾಲೂಕಿನಲ್ಲಿ ಬೇಸಾಯ, ಕೃಷಿ ಜಮೀನು ಹೆಚ್ಚಿತ್ತು. ಮಳೆ ನೀರು ಇವುಗಳಲ್ಲಿ ಇಂಗುತ್ತಿತ್ತು. ಹೀಗಾಗಿ ಕಡುಬೇಸಗೆ ಅರ್ಧದ ತನಕವೂ ನದಿ ಹಾಗೂ ಹಳ್ಳ, ತೋಡು, ಬಾವಿ, ಕೆರೆಗಳಲ್ಲಿ ಅಂತರ್ಜಲ ಮಟ್ಟ, ನೀರಿನ ಹರಿವು ಹೆಚ್ಚಿರುತ್ತಿತ್ತು. ಈಗ ಇವೆಲ್ಲವೂ ಇದ್ದೂ ಇಲ್ಲವಾಗಿ ಅಂತರ್ಜಲ ಮಟ್ಟ ಇಳಿಕೆಯಾಗುತ್ತಿದೆ. ನೀರ ಹರಿವೂ ಕಡಿಮೆಯಾಗಿದೆ.

Advertisement

ನೀರಿನ ಸಮಸ್ಯೆ ಖಚಿತ
ಈ ಬಾರಿ ಹೆಚ್ಚು ಮಳೆ ಸುರಿದಿದೆ. ಆದರೆ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಮುಂದಿನ ಅವಧಿಯಲ್ಲಿ ಬೇಗ ಮಳೆಯಾಗದಿದ್ದಲ್ಲಿ ನೀರಿನ ಸಮಸ್ಯೆ ಖಂಡಿತ ಎದುರಾಗಲಿದೆ. ಡಿಸೆಂಬರ್‌ ತಿಂಗಳೊಳಗೆ ಹಲಗೆ ಜೋಡಣೆ ಮುಗಿಸಿಕೊಳ್ಳುವುದು ಅಗತ್ಯವೆನಿಸಿದೆ.
-ಕೃಷ್ಣ ನಾಯ್ಕ, ಕೃಷಿಕ, ಕಾಡುಹೊಳೆ

ಹಲಗೆ ಜೋಡಣೆಗೆ ಕ್ರಮ
ನದಿಗಳ ಕೆಲವು ಕಡೆಗಳ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಹರಿವು ಹೆಚ್ಚಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ತೀರಾ ಕಡಿಮೆಯಿದೆ. ನೀರಿನ ಹರಿವು ಜಾಸ್ತಿ ಇದ್ದಲ್ಲಿ ಬೇಗ ಹಲಗೆ ಹಾಕಿದರೆ ಸಮಸ್ಯೆಯಾಗುತ್ತದೆ. ಇಲಾಖೆಯ ಸಣ್ಣ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಣೆ ಪೂರ್ತಿಗೊಳಿಸಿದ್ದೇವೆ. ಉಳಿದ ಕಡೆ ಡಿಸೆಂಬರ್‌ ಒಳಗೆ ಪೂರ್ತಿಗೊಳಿಸುತ್ತೇವೆ.
-ಶೇಷಕೃಷ್ಣ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next