ಕಾರ್ಕಳ: ಹೆಬ್ರಿ ತಾಲೂಕಿನ ವಾಣಿಜ್ಯ ಮಳಿಗೆ, ಕ್ವಾಟ್ರಸ್ ನಿರ್ವಹಣೆ ಜವಾಬ್ದಾರಿಯನ್ನು ಇದುವರೆಗೆ ಕಾರ್ಕಳ ತಾ.ಪಂ. ವತಿಯಿಂದಲೇ ನಿರ್ವಹಿಸಲಾಗುತ್ತಿತ್ತು. ಅದರ ಪೂರ್ಣ ಜವಾಬ್ದಾರಿಯನ್ನು ಇನ್ನು ಮುಂದೆ ಹೆಬ್ರಿ ತಾ.ಪಂ.ಗೇ ವಹಿಸಲು ಕಾರ್ಕಳ ತಾ.ಪಂನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಕಾರ್ಕಳ ತಾ.ಪಂ. ಸಾಮಾನ್ಯ ಸಭೆ ಶುಕ್ರವಾರ ತಾ.ಪಂ. ಸಾಮರ್ಥ್ಯ ಸಭಾಂಗಣದಲ್ಲಿ ನಡೆಯಿತು. ಪ್ರತಿಭಾ ಆರ್. ಕಾರ್ಕಳ ತಾ.ಪಂ. ಆಡಳಿತಾಧಿಕಾರಿ, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಸಹಾಯಕ ಲೆಕ್ಕಾಧಿಕಾರಿ ನಿತಿನ್‌ಕುಮಾರ್, ಕಚೇರಿ ವ್ಯವಸ್ಥಾಪಕ ರಾಮದಾಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ 2022-23ನೇ ಸಾಲಿನ ಯೋಜನೇತರ ಶೀರ್ಷಿಕೆಯಡಿ ಕಚೇರಿಗೆ 6 ಬ್ಯಾಟರಿಗಳ ಖರೀದಿಗೆ ದರ ಪಟ್ಟಿ ಅನುಮೋದನೆ ನೀಡಲಾಯಿತು. 2023- 24ನೇ ಸಾಲಿನ ತಾ.ಪಂ. ವೇತನ/ ವೇತನೇತರ ಆಯವ್ಯಯಕ್ಕೆ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು.
ತಾಲೂಕಿನ 27 ಗ್ರಾ.ಪಂ.ಗಳ 2023-24ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. 2022-23ನೇ ಸಾಲಿನಲ್ಲಿ ತಾ.ಪಂ.ಗೆ ಬಾಹ್ಯ ಮೂಲದಿಂದ ಸಿಬಂದಿಯನ್ನು ಪಡೆಯಲು ಹೊರಗುತ್ತಿಗೆ ಸಂಸ್ಥೆಯನ್ನು ಆಯ್ಕೆ ಮಾಡಲು ಕರೆಯಲಾದ ಇ-ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು.
2021-22ನೇ ಸಾಲಿನ ತಾ.ಪಂ.ನ ಡಿಸೆಂಬರ್-2021, ಜನವರಿ-2022, ಫೆಬ್ರವರಿ-2022 ಹಾಗೂ ಮಾರ್ಚ್-2022 ಮಾಸಿಕ ಲೆಕ್ಕಪತ್ರ ಅನುಮೋದನೆ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು. ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ ಇರುವ ಭೂಪರಿವರ್ತನ ಸ್ಥಳಗಳಲ್ಲಿ ಏಕ/ಬಹು ವಿನ್ಯಾಸದ ಪ್ರಸ್ತಾವನೆಗೆ ಅನುಮೋದನೆಯನ್ನು ಸಭೆಯಲ್ಲಿ ನೀಡಲಾಯಿತು. ಹೆಬ್ರಿ ತಾ.ಪಂ.ಗೆ ಕೆಲವು ವಸ್ತುಗಳ ನಿರ್ವಹಣೆ ಜವಾಬ್ದಾರಿಯನ್ನು ಹಸ್ತಾಂತರಕ್ಕೆ ನಿರ್ಧರಿಸಲಾಯಿತು.
ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಕಂದಾಯ, ರೇಷ್ಮೆ, ಕಾರ್ಮಿಕ, ಮೀನುಗಾರಿಕೆ, ಕೃಷಿ, ಆರೋಗ್ಯ, ಪಶು ಸಂಗೋಪನ, ಶಿಶು ಅಭಿವೃದ್ಧಿ, ಪಿಆರ್‌ಇಡಿ, ಶಿಕ್ಷಣ, ಪಿಡಬ್ಲೂéಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.