Advertisement

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

07:13 PM Nov 16, 2024 | Team Udayavani |

ಕಾರ್ಕಳ: ತಾಲೂಕಿನ ಮಿಯಾರು ಗ್ರಾಮ ಪಂಚಾಯತ್ ನ ಎಸ್.ಎಲ್.ಆರ್.ಎಂ(Solid and Liquid Resource Management) ಸ್ವಚ್ಛತಾ ವಾಹನ ಸಿಬಂದಿಗಳು ಕಸದಲ್ಲಿ ಸಿಕ್ಕಿದ 25 ಗ್ರಾಂ ಚಿನ್ನದ ಸರ ಮತ್ತು ಹಣ ಮರಳಿಸಿ ಪ್ರಾಮಾಣಿಕತೆ ಮೆರೆದು ವ್ಯಾಪಕ ಪ್ರಶಂಸೆಗೆ ಭಾಜನರಾಗಿದ್ದಾರೆ.

Advertisement

ನ 15 ರಂದು ಮಿಯಾರು ಗ್ರಾಮದ ಬೋರ್ಕಟ್ಟೆ ವ್ಯಾಪ್ತಿಯಲ್ಲಿ ಒಣಕಸ ಸಂಗ್ರಹಿಸಿ ವಿಂಗಡನೆ ಮಾಡುವ ಸಮಯದಲ್ಲಿ ಒಂದು ಪರ್ಸಿನಲ್ಲಿ ಅಂದಾಜು 25 ಗ್ರಾಂ ಹವಳದ ಚಿನ್ನದ ಸರ, 2921.ರೂ. ನಗದು ಸಿಕ್ಕಿದ್ದು,ಕೂಡಲೇ ಸಿಬಂದಿಗಳು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದು ಪರ್ಸ್ ಪರಿಶೀಲಿಸಿದಾಗ ಗಣೇಶ್ ಶೆಣೈ ಬೊರ್ಕಟ್ಟೆ ಅವರ ಆಧಾರ್ ಕಾರ್ಡ್ ಪ್ರತಿ ಇತ್ತು. ಅವರನ್ನು ಸಂಪರ್ಕಿಸಿದಾಗ ತಾಯಿಗೆ ಕಣ್ಣಿನ ದೃಷ್ಟಿ ಸರಿ ಇಲ್ಲದ ಕಾರಣ ಕಸದಲ್ಲಿ ಹಾಕಿದ್ದು, ಅದನ್ನು ಮನೆಯಲ್ಲಿ ಹುಡುಕಿ ಕೊರಗುತ್ತಿದ್ದ ವಿಚಾರದ ಬಗ್ಗೆ ತಿಳಿಸಿರುತ್ತಾರೆ.

ಸ್ವತ್ತನ್ನು ಗ್ರಾಮ ಪಂಚಾಯತ್ ಮೂಲಕ ಮಧ್ಯಾಹ್ನ ಒಪ್ಪಿಸಲಾಗಿದೆ. ಕಳೆದು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಮರಳಿ ಸಿಕ್ಕಿದ್ದರಿಂದ ಸಂತೋಷಗೊಂಡ ಗಣೇಶ್ ಶೆಣೈರವರು ಗ್ರಾಮ ಪಂಚಾಯತ್ ಎಸ್.ಎಲ್. ಆರ್.ಎಂ ಸಿಬಂದಿಗಳಾದ ಲಲಿತ , ಸುನೀತ ಹಾಗೂ ಕೃಷ್ಣ ಇವರಿಗೆ ಅಭಿನಂದನೆಯನ್ನು ಸಲ್ಲಿಸಿ ಹೊಗಳಿಕೆ ಮಾತುಗಳನ್ನಾಡಿದರು.

ಹಣ ಕಂಡರೆ ಹೆಣವು ಬಾಯಿ ಬಿಡುತ್ತದೆ ಎನ್ನುವ ಈ ಕಾಲದಲ್ಲಿ ಲಕ್ಷಾಂತರ ಬೆಲೆ ಬಾಳುವ ಆಭರಣ ಹಾಗೂ ನಗದನ್ನು ಮಾಲಕರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯತ್ ಮೂಲಕ ಅವರಿಗೆ ತಲುಪಿಸಿದ ನಮ್ಮ ಸಿಬಂದಿಗಳ ಮುಗ್ದತೆ, ನಿಷ್ಕಲ್ಮಶ ಮನಸ್ಸು,ನಿಸ್ವಾರ್ಥತೆ, ಪ್ರಮಾಣಿಕತೆ ಮೆಚ್ಚತಕ್ಕದ್ದು. ಜೀವನ ನಿರ್ವಹಣೆಗಾಗಿ ಸ್ವಚ್ಚತಾ ಕಾರ್ಯನಿರ್ವಹಿಸುತ್ತಿರುವ ಇಂತಹ ಪ್ರಾಮಾಣಿಕ ಸಿಬಂದಿಗಳು ನಮಗೆ ಸಿಕ್ಕಿರುವುದು ಅದೃಷ್ಟಕರ ಎಂದು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next