Advertisement

Karkala: ಹೇಯ ಕೃತ್ಯದ ವಿರುದ್ಧ ಒಂದಾದ ಸಮಾಜ, ಸಾರ್ವತ್ರಿಕ ಖಂಡನೆ

12:49 AM Aug 25, 2024 | Team Udayavani |

ಕಾರ್ಕಳ: ಯುವತಿ ಮೇಲಿನ ಅತ್ಯಾಚಾರವನ್ನು ವಿವಿಧ ಸಂಘಟನೆಗಳು ಹಾಗೂ ಪ್ರಮುಖರು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಶಾಸಕ ಸುನಿಲ್‌ ಆಕ್ರೋಶ‌
ಬೋವಿ ಸಮುದಾಯದ ಬಡ ಯುವತಿಗೆ ಮತ್ತು ಭರಿಸುವ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವುದು ಖಂಡ ನೀಯ. ಇದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿದೆ. ಪೊಲೀಸರು ಸಮಗ್ರ ತನಿಖೆ ನಡೆಸಿ ಪ್ರಕರಣದ ಹಿಂದಿರುವ ಶಕ್ತಿಗಳನ್ನು ಬಹಿರಂಗಗೊಳಿಸಬೇಕು. ಆರೋಪಿಗಳು ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಬೇಕು. ಸಂತ್ರಸ್ತೆಯ ಚಿಕಿತ್ಸೆ ವೆಚ್ಚವನ್ನು ಸರಕಾರ ಭರಿಸಬೇಕು. ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಶಾಸಕ ವಿ.ಸುನಿಲ್‌ಕುಮಾರ್‌ ಆಗ್ರಹಿಸಿದ್ದಾರೆ.

ತಲೆ ತಗ್ಗಿಸುವ ಕೃತ್ಯ: ಕಾಮತ್‌

ಹಿಂದೂ ಯುವತಿಯನ್ನು ಅಲ್ತಾಫ್‌ ಎಂಬ ವ್ಯಕ್ತಿ ತನ್ನ ಸಹಚರರೊಂದಿಗೆ ಅಪಹರಿಸಿ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವುದು ವಿಕೃತ ಮನಃಸ್ಥಿತಿಯಾಗಿದೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು. ಇದು ರಾಜ್ಯವೇ ತಲೆತಗ್ಗಿಸುವ ಕೃತ್ಯ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

Advertisement

ಡಾ| ವೀರಪ್ಪ ಮೊಯ್ಲಿ ಖಂಡನೆ
ಯುವತಿ ಮೇಲಿನ ಕೃತ್ಯ ಅತ್ಯಂತ ಹೇಯ ಮತ್ತು ಖಂಡನೀಯ. ತಪ್ಪಿತಸ್ಥ ರಿಗೆ ಕಾನೂನಿನಡಿ ಸೂಕ್ತ ಶಿಕ್ಷೆ ಆಗಬೇಕು. ಕಾರ್ಕಳದಲ್ಲಿ ಎಲ್ಲ ಸಮುದಾಯದವರು ಅನ್ಯೋನ್ಯದಿಂದಿದ್ದು, ಇಲ್ಲಿ ಇಂಥ ಘಟನೆಗಳು ಮರುಕಳಿಸಬಾರದು. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಹಾಗೂ ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಪೈಶಾಚಿಕ ಮನಃಸ್ಥಿತಿ ಸಮಾಜಕ್ಕೆ ಕಂಟಕವಾದುದು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಕಠಿನ ಶಿಕ್ಷೆಗೆ ಒಳಪಡಿಸಬೇಕೆಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಆಗ್ರಹಿಸಿದ್ದಾರೆ. ಕೆಪಿಸಿಸಿ ಸದಸ್ಯ ಕೃಷ್ಣ ಮೂರ್ತಿ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಆ.26ರಂದು ಖಂಡನಾ ಸಭೆ
ಅತ್ಯಾಚಾರದ ವಿರುದ್ಧ ಆ. 26 ರಂದು ಖಂಡನಾ ಸಭೆ ನಗರದಲ್ಲಿ ಜರಗಲಿದೆ ಎಂದು ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್‌ ಹೇಳಿದ್ದಾರೆ.

Advertisement

ವಿವಿಧ ಸಂಘಟನೆಗಳಿಂದ ಖಂಡನೆ
ಬಿಜೆಪಿ ಮತ್ತು ಅದರ ಮಹಿಳಾ ಮೋರ್ಚಾ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ಸಹಿತ ಹಲವು ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿವೆ. ಘಟನೆಯನ್ನು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಖಂಡಿಸಿದೆ ಎಂದು ಶುಭದ ರಾವ್‌ ತಿಳಿಸಿದ್ದಾರೆ.

ಮಸೀದಿಗೆ ಬಂದವನಲ್ಲ
ಹಿಂದೂ ಸಹೋದರಿ ಮೇಲಿನ ಅತ್ಯಾಚಾರ ಖಂಡನೀಯ. ಮುಸ್ಲಿಂ ಸಮುದಾಯದ ಅಲ್ತಾಫ್ಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇಂತಹ ಕೃತ್ಯಗಳನ್ನು ನಮ್ಮ ಸಮುದಾಯ ಖಂಡಿಸುತ್ತದೆ. ಅಲ್ತಾಫ್ ನಾಮಧಾರಿ ಆಗಿದ್ದು, ಆತ ಯಾವತ್ತೂ ಮಸೀದಿಯ ಬಾಗಿಲು ನೋಡಿದವನಲ್ಲ. ಕಾರ್ಕಳ ಸೌಹಾರ್ದದಿಂದಿದ್ದು, ಇಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದಭಾವ ಇಲ್ಲ. ತಪ್ಪಿತಸ್ಥರಾದ ಎಲ್ಲರಿಗೂ ಕಠಿನ ಶಿಕ್ಷೆ ನೀಡಬೇಕು.

ಅಲ್ತಾಫ್ಗೆ ನಮ್ಮ ಜಮಾತ್‌ನಿಂದಲೇ ಬಹಿಷ್ಕಾರ ಹಾಕಲಾಗುವುದು. ನಮ್ಮ ಸಮುದಾಯದ ಯಾವುದೇ ವಕೀಲರು ಅವನ ಪರ ವಾದಿಸಬಾರದು ಎಂದು ಮುಸ್ಲಿಂ ಸಮುದಾಯದ ಮುಖಂಡ ಮೊಹಮ್ಮದ್‌ ಶರೀಫ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾ| ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಕರ್ನಾಟಕ ಮುಸ್ಲಿಂ ಜಮಾತ್‌ ಕಾರ್ಕಳ ತಾ| ಅಧ್ಯಕ್ಷ ನಾಸೀರ್‌ ಶೇಕ್‌, ಕಾರ್ಕಳ ಮುಸ್ಲಿಂ ಜಮಾತ್‌ ಅಧ್ಯಕ್ಷ ಅಶಾºಕ್‌ ಅಹಮ್ಮದ್‌, ಕಾರ್ಕಳ ಮುಸ್ಲಿಂ ಫೆಡರೇಶನ್‌ ಅಧ್ಯಕ್ಷ ಶಬ್ಬೀರ್‌ ಅಹಮ್ಮದ್‌, ರೋಟರಿ ಅಧ್ಯಕ್ಷ ಇಕ್ಬಾಲ್‌ ಅಹಮ್ಮದ್‌, ಜೇಸಿಸ್‌ ವಲಯಾಧ್ಯಕ್ಷ ಸಮದ್‌ ಖಾನ್‌, ಸೇವಾದಳ ಕಾರ್ಕಳ ತಾ| ಅಧ್ಯಕ್ಷ ಅಬ್ದುಲ್ಲಾ ಶೇಖ್‌ ತಿಳಿಸಿದ್ದಾರೆ.

ಮಹಿಳಾ ಆಯೋಗದಿಂದ ಪ್ರಕರಣ ದಾಖಲು
ಉಡುಪಿ: ಕಾರ್ಕಳ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡನೀಯ. ಘಟನೆ ನಡೆದು 24 ಗಂಟೆ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಈ ಸಂಬಂಧ ಸ್ವಯಂಪ್ರೇರಿತವಾಗಿ ಕೇಸ್‌ ದಾಖಲಿಸಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next