Advertisement

ಕಾರ್ಕಳ-ಪಳ್ಳಿ: ಮಹಿಳೆಯರ ಸಾಧನೆಗೆ ಮಾದರಿಯಾಯಿತು ಹಳ್ಳಿ

01:26 PM Jan 26, 2023 | Team Udayavani |

ಕಾರ್ಕಳ: ಮಹಿಳೆಯರ ಸ್ವಾವಲಂಬನೆ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆ ತಲುಪಿಸುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದಿವೆ. ಅಂತಹ ಸ್ವಸಹಾಯ ಸಂಘಗಳ ಸದಸ್ಯರ ಚಟುವಟಿಕೆಗೆಂದೇ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಸಂಜೀವಿನಿ ಶೆಡ್‌ ನಿರ್ಮಾಣವಾಗಿದೆ. ನರೇಗಾ ಯೋಜನೆ ಬಳಸಿ ಕಾರ್ಯಾರಂಭ ಮಾಡಿದ ಜಿಲ್ಲೆಯ ಮೊದಲ ಸಂಜೀವಿನಿ ಘಟಕ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

Advertisement

ಗ್ರಾಮ ಪಂಚಾಯತ್‌ ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಭದ್ರವಾದ ಕೇಂದ್ರವನ್ನು ನಿರ್ಮಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮ ಪಂಚಾಯತ್‌ ಈ ಅನುದಾನ ಬಳಸಿಕೊಂಡು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮಾದರಿ ಆಗಿದೆ.

ಹಿಂದೆ ಗ್ರಾ.ಪಂ. ಪಂಚಾಯತ್‌ನ ಗ್ರಂಥಾಲಯ ಕೇಂದ್ರದ ಕೊಠಡಿಯ ಅಲ್ಪ ಜಾಗದಲ್ಲಿ ಸಾನ್ನಿಧ್ಯ ಸಂಜೀವಿನಿ ಒಕ್ಕೂಟದ ಕಚೇರಿ ಕಾರ್ಯಾಚರಿಸುತ್ತಿತ್ತು. ಸಾಲ ಪಡೆಯುವಿಕೆ ಹಾಗೂ ಪಾವತಿಗೆ ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಬರುವ ಅಲ್ಲಿನ ಸದಸ್ಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು, ಇದನ್ನು ಗಮನಿಸಿದ ಪಳ್ಳಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿ ಪ್ರತ್ಯೇಕ ಸಂಜೀನಿ ಶೆಡ್‌ ನಿರ್ಮಾಣ ಮಾಡಲು ನಿರ್ಧರಿಸಿ ಸಂಜೀವಿನಿ ಸದಸ್ಯರಿಗೆ ನರೇಗಾ ಯೋಜನೆ ಬಳಸಿಕೊಳ್ಳುವಂತೆ ತಿಳಿಸಿದ್ದರು. ನರೇಗಾ ಯೋಜನೆಯ ಅಧಿಕಾರಿಗಳು ಸದಸ್ಯರಿಗೆ ಸೂಕ್ತ ಮಾಹಿತಿ ನೀಡಿದ್ದರು.

ಇದರ ಫ‌ಲವೆಂಬಂತೆ ಘಟಕ ತೆರೆದಿದೆ ಎಂದು 2022-23ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 6 ಲಕ್ಷ ರೂ. ಅಂದಾಜು ಮೊತ್ತದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು. ಅಂದಾಜು ಪಟ್ಟಿಯಂತೆ 700 ಚದರ ವಿಸ್ತೀರ್ಣದಲ್ಲಿ ಸಂಜೀವಿನಿ ಕಟ್ಟಡ ನಿರ್ಮಾಣಗೊಳಿಸಲಾಯಿತು. ಇದೀಗ ವಿವಿಧ ಸಭೆ ಹಾಗೂ ಚಟುವಟಿಕೆಗಳನ್ನು ಆಯೋಜಿಸಲು ಸಹಕಾರಿ ಆಗಿದೆ.

ಸಾನ್ನಿಧ್ಯ ಸಂಜೀವಿನಿ ಒಕ್ಕೂಟದಲ್ಲಿ ಒಟ್ಟು 56 ಸಂಜೀವಿನಿ ಸಂಘಗಳು, 538 ಸಂಘದ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಎಂ.ಬಿ.ಕೆ., ಎಲ್‌.ಸಿ.ಆರ್‌.ಪಿ. ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತೀ ತಿಂಗಳಲ್ಲಿ ಮಾಸಿಕ ಸಭೆ ನಡೆಯುತ್ತಿದ್ದು, ಒಕ್ಕೂಟದ ಮಹಿಳೆಯರೇ ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ಫಿನಾಯಿಲ್‌, ಮಸಾಲಾ ಹುಡಿಗಳ ಪ್ಯಾಕೆಟ್‌, ತರಕಾರಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸ್ವಾವಲಂಬನೆಯಲ್ಲಿ ತೊಡಗಿಕೊಂಡಿದ್ದಾರೆ.

Advertisement

ಗ್ರಾಮೀಣ ಭಾಗದ ಮಳೆಯರನ್ನು ಸ್ವ-ಸಹಾಯ ಸಂಘ ಮತ್ತು ಅವುಗಳ ಒಕ್ಕೂಟಗಳ ಮೂಲಕ ಸಂಘಟಿಸಿ, ಆರ್ಥಿಕ, ಸಾಮಾಜಿಕ ಮತ್ತು ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸಿ ಅಗತ್ಯ ಜೀವನೋಪಾಯ ಕಂಡುಕೊಳ್ಳುವಂತೆ ರೂಪಿಸುವುದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಂತೆ ಯೋಜನೆಯಡಿ ಜಾರಿಗೊಳಿಸುವ ವಿವಿಧ ಅಭಿಯಾನ, ತರಬೇತಿ, ಮಾಸಿಕ ಸಭೆಗಳನ್ನು ಕಾಲ ಕಾಲಕ್ಕೆ ಸಂಜೀವಿನಿ ಒಕ್ಕೂಟದ ಕೇಂದ್ರದಲ್ಲಿ ಆಯೋಜಿಸಿ ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸುವತ್ತ ಶ್ರಮಿಸುತ್ತಿದೆ. ಪೂರಕವಾಗಿ ಈ ಘಟಕ ಸಹಕಾರಿಯಾಗಿದೆ ಎನ್ನುವುದು ಪಿಡಿಒ ಪ್ರಮೀಳಾ ನಾಯಕ್‌ ಅವರ ಅಭಿಪ್ರಾಯ.

ಬೇರೆಡೆ ಇದ್ದರೂ ಕಾರ್ಯ ಆರಂಭ ಇಲ್ಲೇ ಮೊದಲು
ಜಿಲ್ಲಾದ್ಯಂತ ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ವಿವಿಧ ಚಟುವಟಿಕೆ ನಡೆಸುತ್ತಿದ್ದಾರೆ. ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಮಾರುಕಟ್ಟೆ, ಸಾಲ ಮರುಪಾವತಿ ಇತರೆ ಚಟುವಟಿಕೆ ನಡೆಸಲು ಅವರಿಗೆ ಸೂಕ್ತ ಸ್ವಂತ ಕಚೇರಿ, ಘಟಕಗಳ ಆವಶ್ಯಕವಿದೆ. ಜಿಲ್ಲೆಯ ವಿವಿಧ ತಾಲೂಕಗಳ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಲವೆಡೆ ಘಟಕಗಳು ತೆರೆದು ಉದ್ಘಾಟನೆಗೆ ಸಿದ್ಧವಾಗಿದ್ದರೆ, ಇನ್ನು ಕೆಲವೆಡೆ ಅನುಷ್ಠಾನ ಹಂತದಲ್ಲಿದೆ. ಆದರೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದ ಮೊದಲ ಘಟಕ ಪಳ್ಳಿಯದ್ದಾಗಿದೆ.

4 ಕಡೆ ಘಟಕ ನಿರ್ಮಾಣ
ಸಂಜೀವಿನಿ ಸದಸ್ಯರಿಗೆ ಚಟುವಟಿಕೆ ನಡೆಸಲು ಸ್ವಂತ ಕಟ್ಟಡದ ಅಗತ್ಯವಿದೆ. ತಾ|ನಲ್ಲಿ ನಾಲ್ಕು ಕಡೆ ಸಂಜೀವಿನಿ ಘಟಕ ಸಿದ್ಧಪಡಿಸಲಾಗುತ್ತಿದೆ. ಪಳ್ಳಿ ಮೊದಲ ಘಟಕವಾಗಿ ಈಗಾಗಲೇ ಕಾರ್ಯಾರಂಭ ಮಾಡಿದೆ.

ಗುರುದತ್ತ್, ಇ.ಒ., ಕಾರ್ಕಳ ತಾ.ಪಂ

ಚಟುವಟಿಕೆಗೆ ಅನುಕೂಲ
ಸಂಘದ ಚಟುವಟಿಕೆಗೆ ಬಹಳಷ್ಟು ಅನುಕೂಲವಾಗಿದೆ. ಇದುವರೆಗೂ ಪರ್ಯಾಯ ಜಾಗ ಅವಲಂಬಿಸಬೇಕಿತ್ತು. ಸ್ವಂತ ಕಟ್ಟಡವಿಲ್ಲವೆನ್ನುವ ಕೊರಗು ದೂರವಾಗಿದೆ.
-ಉಷಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next