ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ನಗರ ಮೂರು ಮಾರ್ಗ ಬಳಿ ಮಂಗಳೂರಿಗೆ ತೆರಳುವ ರಸ್ತೆ ಸಂಪೂರ್ಣ ಕೆಟ್ಟು ಸಂಚಾರಿಸಲು ಸಾದ್ಯವಿಲ್ಲದಂತಾಗಿದೆ. ರಸ್ತೆ ಅವ್ಯವಸ್ಥೆಯಿಂದ ನೊಂದ ರಿಕ್ಷಾ ಚಾಲಕರೋರ್ವರು ಬುಧವಾರ ರಸ್ತೆ ಹೊಂಡದಲ್ಲಿ ಬಾಳೆ ಗಿಡನೆಟ್ಟು ಪ್ರತಿಭಟಿಸಿರುವುದು ಕಂಡುಬಂದಿದೆ.
ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಒಳಚರಂಡಿ ಕಾಮಗಾರಿಯ ಸಂದರ್ಭ ರಸ್ತೆಗೆ ಹಾನಿಯಾಗಿತ್ತು.ಅನಂತರದಲ್ಲಿ ಶಾಶ್ವತ ದುರಸ್ತಿ ಪಡಿಸದೆ ತಾತ್ಕಾಲಿಕ ತೇಪೆಯಲ್ಲೆ ದಿನ ಕಳೆಯುತ್ತ ಬರಲಾಗಿತ್ತು.ರಸ್ತೆ ಪೂರ್ತಿ ಹೊಂಡಗಳೆ ತುಂಬಿ ವಾಹನ ಸಂಚಾರ, ಕಾಲ್ನಡಿಗೆಯಲ್ಲಿ ತೆರಳಲು ಸಾದ್ಯವಾಗುತ್ತಿಲ್ಲ.ರಸ್ತೆ ಬದಿ ಅಂಗಡಿಯವರು ಬಂದ್ ಮಾಡಿ ಮನೆಗೆ ಹೋಗುವ ಸ್ಥಿತಿ ಇದೆ..ಇಷ್ಟೆಲ್ಲ ಸಮಸ್ಯೆಯಿದ್ದರೂ ಪುರಸಭೆ ಅಧಿಕಾರಿಗಳು ಹೊಂಡ ನಿವಾರಣೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ.
ಕ್ಷೇತ್ರದ ಶಾಸಕರು ರಾಜ್ಯದ ಮಂತ್ರಿಯಾಗಿದ್ದರೂ ಮುಖ್ಯ ರಸ್ತೆಯ ಹೊಂಡಕ್ಕೆ ಮುಕ್ತಿ ನೀಡುವ ಬಗ್ಗೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಗಮನಕೊಡುತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ, ಎಚ್ ಡಿಕೆ ಚೀಪ್ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ
ಈ ಹಿಂದೆ ಇದೆ ಹೊಂಡದಲ್ಲಿ ವಿಪಕ್ಷದವರು ಬೆಂಡೆ ಗಿಡ ನೆಟ್ಟಿದ್ದರು.ಆದರೂ ಅಧಿಕಾರಿಗಳು ನೆಟ್ಟಗೆ ಆಗಿಲ್ಲ ಅಂತ ಜನ ಹಿಡಿಶಾಪ ಹಾಕುತ್ತಿದ್ದಾರೆ. ನಿಜಕ್ಕೂ ಇದಕ್ಕೆ ಪರಿಹಾರ ಕಾಣುವವರು ಯಾರು ಎನ್ನುವುದೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಕಳೆದ ರಾತ್ರಿಯಿಂದ ಮಳೆಯೂ ಹೆಚ್ಚಿದ್ದು ರಸ್ತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಡಳಿತವರ್ಗ ಇನ್ನಾದರು ಈ ಸಮಸ್ಯೆಯನ್ನು ಗಮನಿಸುವರೆ ಎಂದು ಕಾದು ನೋಡಬೇಕಿದೆ.