Advertisement

Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ  ರಾಷ್ಟ್ರ ಪ್ರಶಸ್ತಿ ಗರಿ

05:44 PM Sep 22, 2024 | Team Udayavani |

ಕಾರ್ಕಳ: ಪ್ರವಾಹದಿಂದ ಜಗತ್ತಿನೆಲ್ಲೆಡೆ ಸಾಕಷ್ಟು  ಸಾವು-ನೋವು, ಸ್ಥಳಾಂತರಗಳು, ಆರ್ಥಿಕ ನಷ್ಟಗಳು ಉಂಟಾಗುತ್ತವೆ. ಇಂಥ ಪ್ರವಾಹಗಳ ಬಗ್ಗೆ ಮುನ್ಸೂಚನೆ ನೀಡಬಲ್ಲ ವಿಶಿಷ್ಟ ವಿಜ್ಞಾನ ಮಾದರಿಯನ್ನು ಕಾರ್ಕಳದ ಹಳ್ಳಿ ಹುಡುಗಿಯೊಬ್ಬಳು ರಚಿಸಿದ್ದು, ಅದಕ್ಕೀಗ ರಾಷ್ಟ್ರಮಟ್ಟದಲ್ಲಿ ಇನ್‌ಸ್ಪಾಯರ್‌ ಪ್ರಶಸ್ತಿ ಲಭಿಸಿದೆ.

Advertisement

ಕಾರ್ಕಳ ತಾಲೂಕಿನ ಕುಕ್ಕುಜೆ ಪದವಿಪೂರ್ವ ಕಾಲೇಜಿನ  ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಅಮೂಲ್ಯಾ ಹೆಗ್ಡೆ ರಚಿಸಿದ ಫ್ಲಡ್‌ ಡಿಟೆಕ್ಟಿಂಗ್‌ ಪೋಲ್‌ ಮಾದರಿಗೆ ರಾಷ್ಟ್ರಮಟ್ಟದಲ್ಲಿ ಮೂರನೇ ಪ್ರಶಸ್ತಿ ಬಂದಿದ್ದು, ಆಕೆ ಇನ್ನು ಜಪಾನ್‌ನ ಸುಕುರಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಭಾರತವನ್ನು  ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾಳೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ವಿಜ್ಞಾನ ಮಾದರಿ ರಚನೆ ಸ್ಪರ್ಧೆ ನಡೆಸುತ್ತದೆ.  ಒಟ್ಟು  377 ಸ್ಪರ್ಧಿಗಳಲ್ಲಿ   30 ಮಾಡೆಲ್‌ಗ‌ಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಅಮೂಲ್ಯಾ ಹೆಗ್ಡೆ ರಚಿಸಿದ ಫ್ಲಡ್‌ ಡಿಟೆಕ್ಟಿಂಗ್‌ ಪೋಲ್ ಎಂಬ ವಿನೂತನ ಅನ್ವೇಷಣೆ ಒಂದಾಗಿದೆ.

ದಿಲ್ಲಿಯ ವಿಜ್ಞಾನ ಭವನದಲ್ಲಿ  ಸೆ.19ರಂದು ನಡೆದ ಸಮಾರಂಭದಲ್ಲಿ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಪ್ರೊ| ಅಭಯ್‌ ಕರಂದಿರ್ಕ, ನ್ಯಾಶನಲ್‌ ಇನ್ನೋವೇಶನ್‌ ಫೌಂಡೇಶನ್‌ನ ಮುಖ್ಯಸ್ಥ ಪ್ರೊ| ಅನಿಲ್ ಡಿ. ಸಹಸ್ರಬುದ್ಧೆ, ನ್ಯಾಶನಲ್‌ ಇನ್ನೋ  ವೇಶನ್‌ ಫೌಂಡೇಶ್‌ ನಿರ್ದೇಶಕ ಡಾ| ಅರವಿಂದ್‌ ಸಿ ರಾನಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮುಖ್ಯಸ್ಥ‌ ನಮಿತಾ ಗುಪ್ತಾ ಇವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

ಅಮೂಲ್ಯಾಗೆ ಯೋಚನೆ ಬಂದಿದ್ದು ಹೇಗೆ?

Advertisement

ಪ್ರತಿವರ್ಷ ಪ್ರವಾಹದಿಂದ ಭಾರೀ ಸಾವು ನೋವು ಸಂಭವಿಸುವುದನ್ನು  ಟಿ.ವಿ, ಮಾಧ್ಯಮಗಳಲ್ಲಿ  ನೋಡುತ್ತಿದ್ದೆ. ಅದರಲ್ಲೂ  ಎರಡು ವರ್ಷಗಳ ಹಿಂದಿನ ಕೊಡಗು ದುರಂತ ಮತ್ತು ಈ ವರ್ಷದ ವಯನಾಡು ದುರಂತ ಮನಸ್ಸನ್ನು ಅತಿಯಾಗಿ  ಕಾಡಿತ್ತು. ಪ್ರವಾಹ ಸಂದರ್ಭ ಮುನ್ಸೂಚನೆ  ಸಿಗುವಂತೆ ಏನು ಮಾಡಬಹುದು ಎನ್ನುವುದು ಯೋಚಿಸಿದೆ. ಫ್ಲೋಟಿಂಗ್‌ ಬಾಲ್‌ ಬಳಸಿ ಮಾದರಿ ತಯಾರಿಸುವ ಯೋಚನೆ ಬಂದಿದ್ದನ್ನು ಶಿಕ್ಷಕರ ಗಮನಕ್ಕೆ ತಂದೆ.  ಶಿಕ್ಷಕರ ಮಾರ್ಗದರ್ಶನ ಪಡೆದು ಸಿದ್ಧತೆ ನಡೆಸಿ ಮಾದರಿ ಸಿದ್ಧಪಡಿಸಿದೆ ಎನ್ನುತ್ತಾರೆ ವಿದ್ಯಾರ್ಥಿನಿ  ಅಮೂಲ್ಯ ಹೆಗ್ಡೆ.

ಈ ಸಾಧನೆ  ಧನ್ಯತೆ ನೀಡಿದೆ

ಇನ್‌ಸ್ಫಾಯರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೇರುವುದೇ ಸಾಧನೆ. ಅಮೂಲ್ಯ ಹೆಗ್ಡೆ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಧನ್ಯತೆಯನ್ನು ನೀಡಿದೆ. ಈ ಕಾಯಕದಲ್ಲಿ  ಎಲ್ಲ ಸಹೋದ್ಯೋಗಿಗಳ ಶ್ರಮವೂ ಇದೆ.
-ಸುರೇಶ್‌ ಮರಕಾಲ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಕುಕ್ಕುಜೆ

ಪ್ರವಾಹ ಬಂದರೆ ಮೊಳಗುತ್ತದೆ ಸೈರನ್‌, ಬೆಳಗುತ್ತದೆ ದೀಪ!

ಫ್ಲಡ್‌ ಡಿಟೆಕ್ಟಿಂಗ್‌ ಪೋಲ್‌ನಲ್ಲಿ  ಫ್ಲೋಟಿಂಗ್‌ ಬಾಲ್ ತಂತ್ರಜ್ಞಾನ ಬಳಸಲಾಗಿದೆ. ಇದಕ್ಕೆ ಬಳಸಿರುವುದು  ಪ್ಲಾಸ್ಟಿಕ್‌ ಬಾಟಲ್ ಮತ್ತು ಬಾಲ್‌. ಇದನ್ನು ಸಮುದ್ರ ಅಥವಾ ನದಿಯಲ್ಲಿ ಅಳವಡಿಸಿದರೆ ನೀರಿನ ಮಟ್ಟ ಹೆಚ್ಚಾದಾಗ ಜೋರಾಗಿ ಸೈರನ್‌ ಬಾರಿಸುತ್ತದೆ ಹಾಗೂ ಎಚ್ಚರಿಕೆಯ ದೀಪವನ್ನು ಬೆಳಗಿಸುತ್ತದೆ. ಇದನ್ನು ಗಮನಿಸಿ,  ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬಹುದು. ಇದು ಮೂರು ಹಂತದ ಎಚ್ಚರಿಕೆಯನ್ನು ನೀಡುತ್ತದೆ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next