Advertisement

ಕಾರ್ಕಳ ಪುರಸಭಾ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ ಫೈಟ್‌

06:00 AM Aug 28, 2018 | Team Udayavani |

ಕಾರ್ಕಳ: ಪುರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಕಳ ಪುರಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಬಿಗುವಿನ ಸ್ಪರ್ಧೆ ಏರ್ಪಟ್ಟಿದೆ. ಜತೆಗೆ ಮೂರ್‍ನಾಲ್ಕು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೂ ಪ್ರಬಲರಾಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಸ್ಪರ್ಧೆ ನೀಡುವ ಉತ್ಸಾಹದಲ್ಲಿದ್ದಾರೆ. 
 
ಕಾರ್ಕಳ ಪುರಸಭೆಯ ಇತಿಹಾಸದಲ್ಲಿಯೇ ಸ್ಪಷ್ಟ ಬಹುಮತದಿಂದ ಬಿಜೆಪಿ ಆಡಳಿತಕ್ಕೆ ಬಂದಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಒಟ್ಟು 23 ವಾರ್ಡ್‌ನಲ್ಲಿ 12 ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 11 ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಪ್ರಾರಂಭದ ಎರಡೂವರೆ ವರ್ಷ ಕಾಂಗ್ರೆಸ್‌ ಅಡಳಿತ ನಡೆಸಿದೆ. ಆದರೆ ಅನಂತರ ಶಾಸಕರು ಹಾಗೂ ಸಂಸದರ ಗೆಲುವಿನ ಬೆಂಬಲದೊಂದಿಗೆ ಬಿಜೆಪಿ ಆಡಳಿತ ನಡೆಸುವಂತಾಗಿತ್ತು.

Advertisement

ಬಿಜೆಪಿಗೆ ಹಲವು ಬಲ
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಸದ್ಯ ಬಿಜೆಪಿಯ ಪಾರುಪತ್ಯವಿದೆ.  ಶಾಸಕರಿಂದ ಹಿಡಿದು ಜಿ.ಪಂ., ತಾ.ಪಂ., ಗ್ರಾ.ಪಂ.ನಲ್ಲೂ ಬಿಜೆಪಿ ಮುಂದಿದೆ. ಹೀಗಾಗಿ ಅದೇ ರೀತಿ ಈ ಬಾರಿಯ ಪುರಸಭೆಯ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿ ತನ್ನ ಆಡಳಿತದ ತೆಕ್ಕೆಗೆ ತರುವ ಹುಮ್ಮಸ್ಸಿಲ್ಲಿದೆ. ಪೂರಕವಾಗಿ ವಿಧಾನಸಭಾ ಚುನಾವಣೆಯಲ್ಲಿ ನಗರ ಭಾಗದಿಂದ ಹಿಂದಿನ ಚುನಾವಣೆಗಿಂತ ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಪುರಸಭೆಯ ಚುನಾವಣೆಯಲ್ಲಿ ಅದು ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಲಿದೆ ಎಂದು ಕಾದು ನೋಡಬೇಕಿದೆ.

ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಗಳು
ಕಾರ್ಕಳ ನಗರ ಕಾಂಗ್ರೆಸ್‌ ಪುರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಅಧಿಕ ವಾರ್ಡ್‌ಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ಗೆ ಫ‌ಲ ನೀಡುವ ಸಾಧ್ಯತೆ ಇದೆ. ಜತೆಗೆ ಇತರ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿಂದೇಟು ಹಾಕಿದ್ದರೂ ಪುರಸಭೆಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿಲ್ಲ. ಈ ಬಾರಿಯೂ ಬಹುಮತದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಹಲವು ವಾರ್ಡ್‌ಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು, ಆ ಮೂಲಕ ತನ್ನ ಇತಿಹಾಸ ಮುಂದುವರಿ ಸುವ ಯೋಜನೆ ರೂಪಿಸಿಕೊಂಡಿದೆ.

ಕುತೂಹಲ ಮೂಡಿಸಿದ ಪಕ್ಷೇತರರರು
ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಸ್ಪರ್ಧೆ ನೀಡಲು ಪಕ್ಷೇತರ ಅಭ್ಯರ್ಥಿಗಳೂ ತುದಿಗಾಲಲ್ಲಿ ನಿಂತಿದ್ದಾರೆ. ಬಂಗ್ಲೆಗುಡ್ಡೆ ಕಜೆ ವಾರ್ಡ್‌ನಲ್ಲಿ ಮೊಹಮ್ಮದ್‌ ಶರೀಫ್ ಪಕ್ಷೇತರರಾಗಿ ಕಣದಲ್ಲಿದ್ದರೆ, ಬಿಜೆಪಿಯಿಂದ ವಿಘ್ನೇಶ್‌ ಪ್ರಸಾದ್‌, ಕಾಂಗ್ರೆಸ್‌ನಿಂದ ಅಶºಕ್‌ ಅಹ್ಮದ್‌ ಅಭ್ಯರ್ಥಿಗಳಾಗಿದ್ದಾರೆ. ಶ್ರೀನಿವಾಸನಗರ ಪೆರ್ವಾಜೆ ವಾರ್ಡ್‌ನಲ್ಲಿ ಲಕ್ಷ್ಮೀಕಾಂತ್‌ ಮಲ್ಯ ಪಕ್ಷೇತರರಾಗಿದ್ದರೆ ಬಿಜೆಪಿಯಿಂದ ಯೋಗೀಶ್‌ ನಾಯಕ್‌, ಕಾಂಗ್ರೆಸ್‌ನಿಂದ ರಾಜೇಂದ್ರ ಕುಮಾರ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅನಂತಶಯನ ಕಾಲೇಜು ವಾರ್ಡ್‌ನಲ್ಲಿ ಪಕ್ಷೇತರರಾಗಿ ಕೆ. ರಾಘವ ಅಭ್ಯರ್ಥಿಯಾಗಿದ್ದು ಬಿಜೆಪಿಯಿಂದ ವಿಜಯ ಸಫ‌ಳಿಗ, ಕಾಂಗ್ರೆಸ್‌ನಿಂದ ಹರೀಶ್‌ ಕಣದಲ್ಲಿದ್ದಾರೆ. 

ತಾಲೂಕು ಕಚೇರಿ ಕಾಬೆಟ್ಟು ವಾರ್ಡ್‌
ನಲ್ಲಿ ಪಕ್ಷೇತರರಾಗಿ ಸಂಪತ್‌ ನಾಯಕ್‌ ಬಿ. ಇದ್ದರೆ, ಬಿಜೆಪಿಯಿಂದ ಕೆಎಸ್‌ ಹರೀಶ್‌ ಶೆಣೈ, ಕಾಂಗ್ರೆಸ್‌ನಿಂದ ಪ್ರಭಾ ಕಣದಲ್ಲಿದ್ದಾರೆ. ಈ ನಾಲ್ಕೂ ವಾರ್ಡ್‌ಗಳಲ್ಲಿ ಪಕ್ಷೇತರರು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ನೀಡುವುದು ಖಚಿತ ಎನಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next