Advertisement

Karkala: ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

01:01 AM Oct 01, 2024 | Team Udayavani |

ಕಾರ್ಕಳ: ಕಾರ್ಕಳ- ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಲ್ಲೂರಿನ ಪಾಜಗುಡ್ಡೆಯಲ್ಲಿ ಕ್ಯಾಂಟರ್‌-ಬೈಕ್‌ ಢಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಭವಿಸಿದೆ.

Advertisement

ನಲ್ಲೂರು ಕೊಡಪಟ್ಯ ನಿವಾಸಿ ಸುರೇಶ ಆಚಾರ್ಯ (35), ಮಕ್ಕಳಾದ ಸುಮೀಕ್ಷಾ (7), ಸುಶ್ಮಿತಾ ( 5) ಹಾಗೂ ಸುಶಾಂತ್‌ (2) ಮೃತಪಟ್ಟವರು. ಪತ್ನಿ ಮೀನಾಕ್ಷಿ (32) ಗಾಯಗಳೊಂದಿಗೆ ಪಾರಾಗಿದ್ದಾರೆ.

ಈ ಕುಟುಂಬವು ವೇಣೂರಿನಿಂದ ನಲ್ಲೂರು ಕಡೆಗೆ ಡಿಸ್ಕವರಿ ಬೈಕಿನಲ್ಲಿ ತೆರಳುತ್ತಿದ್ದಾಗ ಗುರುವಾಯನಕೆರೆ ಕಡೆ ಸಾಗುತ್ತಿದ್ದ ಕ್ಯಾಂಟರ್‌ ಲಾರಿ ಢಿಕ್ಕಿ ಹೊಡೆದಿದೆ. ಸವಾರ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದೆ.

ನವರಾತ್ರಿ ಪೂಜೆಗೆ ಬರುತ್ತಿದ್ದಾಗ ಘಟನೆ
ನಲ್ಲೂರಿನ ಕೊಡಪಟ್ಯ ನಿವಾಸಿ ಸಂಕ್ರಾಯ – ವಸಂತಿ ದಂಪತಿಯ 3 ಪುತ್ರಿಯರು ಹಾಗೂ ಮೂವರು ಪುತ್ರರಲ್ಲಿ ಓರ್ವರಾಗಿದ್ದ ಸುರೇಶ ಆಚಾರ್ಯ ಅವರು ವೇಣೂರಿನ ಗಾಂಧಿನಗರದ ಮೀನಾಕ್ಷಿ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿ ವೇಣೂರಿನಲ್ಲೆ ನೆಲೆಸಿದ್ದರು. ಪತ್ನಿ ಗೃಹಿಣಿಯಾಗಿದ್ದು, ಮಕ್ಕಳು ವೇಣೂರಿನಲ್ಲೇ ಶಾಲೆಗೆ ಹೋಗುತ್ತಿದ್ದರು. ನಲ್ಲೂರಿನ ಮೂಲ ಮನೆಯಲ್ಲಿ ಅ. 2ರಂದು ನವರಾತ್ರಿ ವಿಶೇಷ ಪೂಜೆ ಇದ್ದ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ಬರುತ್ತಿದ್ದರು.

ಬೈಕ್‌ ಸವಾರಿ ಸಂದರ್ಭ ಸವಾರನ ಎದುರು ಇಬ್ಬರು ಮಕ್ಕಳು, ಹಿಂದೆ ತಾಯಿ ಜತೆಯಲ್ಲಿ ಒಂದು ಮಗು ಇತ್ತು ಎನ್ನಲಾಗಿದೆ. ಲಾರಿ ಢಿಕ್ಕಿ ಹೊಡೆದ ತೀವ್ರತೆಗೆ ಬೈಕಿನಿಂದ ಎಸೆಯಲ್ಪಟ್ಟ ಎಲ್ಲರ ತಲೆಗಳು ಲಾರಿಗೆ ಬಡಿದಿದ್ದು, ಐದು ಮಂದಿಯ ತಲೆಗಳಿಗೆ ಗಂಭೀರ ಗಾಯಗಳಾಗಿವೆ. ಮಕ್ಕಳ ಮಿದುಳಿನ ಭಾಗಗಳು ಲಾರಿಗೆ ಅಂಟಿಕೊಂಡಿತ್ತು. ಮಕ್ಕಳ ದೇಹಗಳ ಸ್ಥಿತಿ ಮನಕಲಕುವಂತಿತ್ತು.

Advertisement

ಅಂಗಲಾಚಿದ ತಾಯಿ
ಮೀನಾಕ್ಷಿಯವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಆ ಸ್ಥಿತಿಯಲ್ಲಿಯೇ ಮಕ್ಕಳ ಸ್ಥಿತಿ ಕಂಡು ರೋದಿಸುತ್ತಿದ್ದ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿತ್ತು. ಮಕ್ಕಳ ದೇಹಕ್ಕೆ ಹಾಕಿದ್ದ ಬಟ್ಟೆಗಳನ್ನು ಸರಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದು ಅವರು ಸ್ವಲ್ಪ ಹೊತ್ತಿನಲ್ಲಿ ನೆಲಕ್ಕೊರಗಿದರು. ಅವರನ್ನು ಆ್ಯಂಬುಲೆನ್ಸ್‌ ಮೂಲಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನೆರವಿಗೆ ಧಾವಿಸಿದ ಸುಮಿತ್‌
ನಲ್ಲೂರು ತಂಡ
ಶವ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕಾರ್ಕಳದ 108 ಆ್ಯಂಬುಲೆನ್ಸ್‌ ಅನ್ನು ಕರೆಸಲಾಯಿತು. ಸ್ಥಳೀಯರಾದ ಸುಮಿತ್‌ ನಲ್ಲೂರು ತಮ್ಮ ತಂಡದೊಂದಿಗೆ ಅಲ್ಲಿದ್ದವರ ಸಹಾಯ ಪಡೆದು ಬಿದ್ದಿದ್ದವರನ್ನು ಎತ್ತಿ ಆ್ಯಂಬುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆತಂದರು. ಈ ಪೈಕಿ ಸಮೀಕ್ಷಾ ಉಸಿರಾಡುತಿದ್ದಳು. ನಗರದ ರೋಟರಿ ಕೆಎಂಸಿ ಆಸ್ಪತ್ರೆಗೆ ಕರೆತಂದ ವೇಳೆ ಅಲ್ಲಿ ಏಳು ಮಂದಿ ವೈದ್ಯರು ಸೇರಿ ಮಗುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಫ‌ಲಕಾರಿಯಾಗಲಿಲ್ಲ. ಕನಿಷ್ಠ ಒಂದು ಮಗುವನ್ನಾದರೂ ಉಳಿಸಲು ಕೊನೆಯದಾಗಿ ಪ್ರಯತ್ನಿಸಿದೆ. ಅದು ಫ‌ಲ ನೀಡಲಿಲ್ಲ ಎಂದು ಸುಮಿತ್‌ ನಲ್ಲೂರು ವಿಷಾದ ವ್ಯಕ್ತಪಡಿಸಿದರು. ಮೃತ ಸುರೇಶ್‌ ಅವರು ಸುಮಿತ್‌ನ ಸಹಪಾಠಿಯೂ ಆಗಿದ್ದರು.

ಚಾಲಕ ವಶಕ್ಕೆ
ಕ್ಯಾಂಟರ್‌ ಚಾಲಕ ಹೇಮಂತ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸುದ್ದಿ ತಿಳಿದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಹಿಂದೂ ಸಂಘಟನೆಯ ಮುಖಂಡರು ಸಹಿತ ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿ ಬಂದರು.

ರಜೆ ಖುಷಿಯಲ್ಲಿದ್ದ ಮಕ್ಕಳು
ಮೃತ ಸುರೇಶ್‌ ಆಚಾರ್ಯ ಮರದ ಕೆಲಸ ವೃತ್ತಿ ನಡೆಸುತ್ತಿದ್ದರು. ಸುಮೀಕ್ಷಾ ಹಾಗೂ ಸುಶ್ಮಿತಾ ಶಾಲೆಗೆ ಹೋಗುತ್ತಿದ್ದರು. ಅವರಿಗೆ ಸೋಮವಾರದಿಂದ ದಸರಾ ರಜೆ ಸಿಕ್ಕಿದ್ದು, ಹೀಗಾಗಿ ಖುಷಿಯಿಂದ ತಂದೆಯ ಮನೆಗೆ ಹೊರಟಿದ್ದರು.

ಈ ಹಿಂದೆಯೇ ಎಚ್ಚರಿಸಿತ್ತು
ಘಟನೆ ನಡೆದ ಪಾಜಗುಡ್ಡೆ ಸ್ಥಳ ಹಾಗೂ ಪರಿಸರ ಏರಿಳಿತಗಳಿರುವ ರಸ್ತೆ ತಿರುವು- ಮುರುವಿನಿಂದ ಕೂಡಿದೆ. ಈ ಹಿಂದೆ ಪಾಜೆಗುಡ್ಡೆ ಏರುವ ತಿರುವಿನ ಸ್ಥಳ ತೀರಾ ಕಡಿದಾಗಿತ್ತು. ಆಗ ಸರಣಿ ಅಪಘಾತಗಳು ನಡೆಯುತ್ತಿರುವ ಬಗ್ಗೆ ಉದಯವಾಣಿ ವಿಸ್ಕೃತ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಎತ್ತರವನ್ನು ತಗ್ಗಿಸಿ ತಿರುವನ್ನು ವಿಸ್ತರಿಸುವ ಕಾರ್ಯವನ್ನು ಪಿಡಬ್ಲ್ಯೂಡಿ ಇಲಾಖೆ ಮಾಡಿತ್ತು. ಅದರ ಆಸುಪಾಸಿನಲ್ಲಿ ಅಪಾಯದ ಸನ್ನಿವೇಶಗಳು ಈಗಲೂ ಇದ್ದು ಈ ವಲಯದಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮಗಳ
ಅಗತ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next