Advertisement

ಕಾರ್ಕಳ: ನದಿಗಳ ಒಡಲು ಸೇರುತ್ತಿದೆ ನಗರದ ತ್ಯಾಜ್ಯ ನೀರು!

12:08 PM Jul 28, 2020 | mahesh |

ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ಅವ್ಯವಸ್ಥೆಯಿಂದ ನಗರದೊಳಗಿನ ಬಾವಿ, ಕೆರೆಗಳು ಕಲ್ಮಶವಾಗಿವೆ. ಬೆನ್ನಲ್ಲೇ ಆನೆಕೆರೆ ಮಸೀದಿ ಬಳಿ ಒಳಚರಂಡಿ ಕೊಳಚೆ ನೀರಿನ ಪೈಪ್‌ ಒಡೆದು ಸೋರಿಕೆ ಯಾಗಿದೆ. ಕೊಳಚೆ ನೀರು ಉಪನದಿಗಳ ಮೂಲಕ ಎಣ್ಣೆಹೊಳೆ, ಉದ್ಯಾವರ ನದಿಗಳನ್ನು ಸೇರುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಸೋರಿಕೆಯಿಂದ ನಗರವಾಸಿಗಳು ಸೊಳ್ಳೆ ಕಾಟ, ದುರ್ವಾಸನೆ, ಕೊಳಚೆ ನೀರು ಬಾವಿ ಸೇರುವುದು ಇಂತಹ ನರಕಯಾತನೆಯನ್ನು ಇಲ್ಲಿ ತನಕವೂ ಅನುಭವಿಸುತ್ತಾ ಬಂದಿದ್ದರು. ಇದೀಗ ಇತರ ಪ್ರದೇಶದ ಜನರಿಗೂ ವಿಸ್ತರಣೆಗೊಳ್ಳುತ್ತಿದೆ.

Advertisement

ಹೊರ ಚೆಲ್ಲುವ ದುರ್ನಾತ!
ಕಾಬೆಟ್ಟುವಿನ ಡಂಪಿಂಗ್‌ ಯಾರ್ಡ್‌ಗೆ ನಗರದ ತ್ಯಾಜ್ಯಗಳನ್ನು ಒಳಚರಂಡಿ ಪೈಪ್‌ಗ್ಳ ಮೂಲಕ ಹರಿಸಲಾಗುತ್ತಿದೆ. ಡಂಪಿಂಗ್‌ ಯಾರ್ಡ್‌ಗೆ ಹಾದು ಹೋದ ಒಳಚರಂಡಿ ಪೈಪ್‌ ಮಧ್ಯದ ಆನೆಕೆರೆ ಮಸೀದಿ ಬಳಿ ಒಡೆದಿದೆ. ಆನೆಕೆರೆಯಿಂದ ಹೆಚ್ಚುವರಿ ಹರಿಯುವ ಸರೋವರದ ಶುದ್ಧ ನೀರಿಗೆ ಒಡೆದ ಪೈಪ್‌ಗ್ಳಿಂದ ಹೊರಸೂಸಿದ ತ್ಯಾಜ್ಯ ನೀರು ಸೇರುತ್ತಿದೆ. ಈ ತೋಡು ಮುಂದೆ ಕಾಬೆಟ್ಟು, ಗಾಂಧಿಮೈದಾನ, ಪಳ್ಳಿ ಮೂಲಕ ಮುಂದಕ್ಕೆ ಹರಿಯುತ್ತದೆ.

ಡೆಂಗ್ಯೂ, ಮಲೇರಿಯಾ ಭೀತಿ
ಒಡಲಲ್ಲಿ ತ್ಯಾಜ್ಯ ತುಂಬಿಕೊಂಡು ಹರಿಯುವ ನೀರನ್ನು ನದಿ ಪಾತ್ರದ ಜನರು ಕುಡಿಯಲು, ಕೃಷಿಗೆ, ಬಳಸುತ್ತಿದ್ದಾರೆ. ಜಾನುವಾರುಗಳು ಕೂಡ ಮಲಿನ ನೀರನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತವೆ. ಇದೀಗ ರೋಗ ರುಜಿನಗಳು ಹಬ್ಬುವ ಭೀತಿ ನದಿ ಪಾತ್ರದ ಜನರನ್ನು ಕಾಡುತ್ತಿದೆ. ಬಾವಿ, ಕೆರೆಗಳು ಮಲಿನಗೊಂಡು ಮಲೇರಿಯಾ, ಡೆಂಗ್ಯೂ, ಇನ್ನಿತರ ಸಾಂಕ್ರಾಮಿಕ ರೋಗಗಳ ಭೀತಿಯೂ ಅವರನ್ನು ಕಾಡುತ್ತಿದೆ.

ಅಂಗಡಿಗಳಿಗೂ ನುಗ್ಗುತ್ತೆ ಕೊಳಚೆ ನೀರು!
ನಗರದಲ್ಲಿ 13 ಕೋ.ರೂ. ವೆಚ್ಚದ ಒಳಚರಂಡಿ ಯೋಜನೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎನ್ನುವ ದೂರುಗಳಿವೆ. ತ್ಯಾಜ್ಯ ನೀರು ಸಮರ್ಪಕವಾಗಿ ಹರಿ ಯದೇ ರಸ್ತೆಗಳಲ್ಲೆಲ್ಲಾ ವ್ಯಾಪಿಸಿ, ಅಂಗಡಿಗಳಿಗೆ ನುಗ್ಗಿ ರಸ್ತೆಯ ಮಧ್ಯ ಭಾಗದಲ್ಲಿ ಶೇಖರಣೆಯಾಗುತ್ತಿದೆ. ಹಳೆ ಪೈಪುಗಳು ಒಡೆದು ಕಾರ್ಕಳ ಪೇಟೆಯ ಜನ ನಿತ್ಯವೂ ಸಂಕಟ ಪಡುತ್ತಿದ್ದಾರೆ.

ಪೈಪ್‌ ಒಡೆದು ಸೃಷ್ಟಿಸಿದ್ದು: ಆರೋಪ
ಡ್ರೈನೇಜ್‌ ಪೈಪ್‌ಗ್ಳಲ್ಲಿ ಪ್ರಶರ್‌ ಹೆಚ್ಚಾಗಿದ್ದು, ಸಮಸ್ಯೆ ಪರಿಹರಿಸಲಾಗದೇ, ಪ್ರಶರ್‌ ಕಡಿಮೆ ಮಾಡಲು ಆನೆ ಕೆರೆ ಮಸೀದಿ ಬಳಿ ಒಳಚರಂಡಿ ಪೈಪನ್ನು ಒಡೆದು ಹರಿದು ಹೋಗುವ ತೋಡಿನ ನೀರಿಗೆ ಬಿಟ್ಟಿದ್ದಾರೆ. ಇದು ಜನತೆಗೆ ಮಾಡಿದ ದ್ರೋಹ. ಪುರ ಸಭೆ, ಶಾಸಕರು ಈ ಅವ್ಯವಸ್ಥೆಗೆ ನೇರ ಹೊಣೆಯಾಗಿದ್ದಾರೆ. ಈ ಕೊಳಚೆ ನೀರನ್ನು ನದಿ ತಟದ ಜನ ಬಳ ಸುವ ದುಸ್ಥಿತಿ ಈಗ ಬಂದಿದೆ. ಈ ಬಗ್ಗೆ ಪರಿಸರ ಇಲಾಖೆಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಪುರಸಭೆ ಸದಸ್ಯ ಶುಭದ ರೈ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಬಾವಿಗಳಲ್ಲಿ ವಿಷ
ನಗರದ ವೆಂಕಟರಮಣ ದೇವಸ್ಥಾನ, ಅನಂತಶಯನ ಮಾರ್ಕೆಟ್‌ ರಸ್ತೆ, ಮೂರು ಮಾರ್‌, ಆನೆಕೆರೆ ಹಿರಿಯಂಗಡಿ ಬಂಡಿಮಠ ಪರಿಸರದಲ್ಲಿ ಒಳಚರಂಡಿ ಸೋರಿಕೆಯಿಂದ ಹಲವು ವರ್ಷಗಳಿಂದ ಬಾವಿಯ ನೀರನ್ನು ಉಪಯೋಗಿಸಲು ಅಸಾಧ್ಯದ ಸ್ಥಿತಿಯಿದೆ. ಅದೆಷ್ಟೋ ಬಾರಿ ರಾಸಾಯನಿಕ ಬಳಸಿ ಬಾವಿ ನೀರನ್ನು ಶುಚಿಗೊಳಿಸಿದರೂ ಮತ್ತೆ ಕೊಳಚೆ ನೀರು ಬಾವಿಗಳಿಗೆ ನುಗ್ಗುತ್ತಿದ್ದು, ಬಾವಿ ಉಪಯೋಗಕ್ಕಿಲ್ಲ ಎನ್ನುವಂತಾಗಿದೆ.

ಶೀಘ್ರಕ್ರಮ
ಒಳಚರಂಡಿ ಪೈಪು ಒಡೆದಿರುವುದು ಗಮನಕ್ಕೆ ಬಂದಿದೆ. ಪೈಪ್‌ ಹಳೆಯದಾಗಿರುವ ಕಾರಣ ಹೀಗಾಗಿರುವ ಸಾಧ್ಯತೆಯಿದೆ. ಇದರ ದುರಸ್ತಿಗೆ ಶೀಘ್ರ ಕ್ರಮ ಜರಗಿಸುತ್ತೇವೆ.
-ರೇಖಾ ಶೆಟ್ಟಿ, ಮುಖ್ಯಧಿಕಾರಿ,ಕಾರ್ಕಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next