ಕಾರ್ಕಳ: ಕಣ್ಣು ಮುಚ್ಚಿ ಬಿಡುವಷ್ಟು ಹೊತ್ತು ನೆಟ್‌ವರ್ಕ್ ಇಲ್ಲದಿದ್ದರೆ ಸಮಯ ಕಳೆಯಲಾಗುವುದಿಲ್ಲ ಎನ್ನುವ ಸ್ಥಿತಿ ಈಗ. ಹಲವು ವರ್ಷಗಳಿಂದ ಗ್ರಾಮದ ಜನತೆ ಇಟ್ಟ ಬೇಡಿಕೆ ಈಡೇರದೆ ನೆಟ್‌ವರ್ಕ್ ಸೇವೆಗಳಿಂದ ಜನ ವಂಚಿತರಾಗಿದ್ದಾರೆ.
ಕಾರ್ಕಳ ತಾ|ನ ಕಾಂತಾವರ ಗ್ರಾ.ಪಂ. ವ್ಯಾಪ್ತಿಯ ಬೇಲಾಡಿ ಮೊಬೈಲ್ ನೆಟ್‌ವರ್ಕ್ ವಂಚಿತ ಗ್ರಾಮವೆನ್ನುವ ಕುಖ್ಯಾತಿಯಿಂದ ಇನ್ನು ಕಳಚಿಕೊಂಡಿಲ್ಲ. ಇಲ್ಲಿನ ಜನ ಒಂದು ಕರೆ ಮಾಡಬೇಕಿದ್ದರೂ 5 ಕಿ.ಮೀ. ದೂರ ಹೋಗಬೇಕು. ಸರಕಾರಿ ಸಾಮ್ಯದ ಬಿಎಸ್ಸೆನ್ನೆಲ್, ಖಾಸಗಿ ಮೊಬೈಲ್ ಟವರ್‌ಗಳು ಗ್ರಾಮದೊಳಗಿಲ್ಲ. ಜಗತ್ತಿನ ಒಂದು ಭಾಗ 5ಜಿ ಅನ್ನು ದಾಟಿ ಮುಂದೆ ದಾಪುಗಾಲಿಡುತ್ತಿದೆ. ಆದರೇ ಈ ಗ್ರಾಮಕ್ಕಿನ್ನು ಯಾವ ತ್ರಿಜಿಗಳು ಹೊಕ್ಕಿಲ್ಲ ಎನ್ನುವುದೇ ದುರಂತ.
ಬೇಲಾಡಿ ಹಾಗೂ ಕಾಂತಾವರ ಗ್ರಾಮದಲ್ಲಿ ಸುಮಾರು 600ಕ್ಕೂ ಅಧಿಕ ಮನೆಗಳಿದ್ದು, ಬೇಲಾಡಿ ಗ್ರಾಮವೊಂದರಲ್ಲಿ ಸುಮಾರು 300 ಕುಟುಂಬಗಳು ವಾಸವಿವೆ. ಸಾವಿರದ ಹತ್ತಿರ ಜನಸಂಖ್ಯೆಯಿದೆ. ಬೇಲಾಡಿ ಗ್ರಾಮ ಪೂರ್ಣ ಪ್ರಮಾಣದಲ್ಲಿ ನೆಟ್ ವರ್ಕ್ ವಂಚಿತ ಗ್ರಾಮವಾಗಿದ್ದರೆ, ಕಾಂತಾವರದಲ್ಲಿ ಮೊಬೈಲ್ ಟವರ್ ಇದ್ದರೂ ಕಾಂತಾವರದ ಅಂಚಿನ ಗ್ರಾಮಗಳಲ್ಲಿ ದುರ್ಬಲ ಸಂಪರ್ಕ ಸಿಗ್ನಲ್‌ನಿಂದ ಜನ ಹೊರ ಪ್ರಪಂಚದ ಸಂಪರ್ಕವನ್ನು ಪಡೆಯುವಂತಿಲ್ಲ.
ನೆಂಟರಿಸ್ಟರು ನೆಟ್‌ವಿಲ್ಲವೆಂದು ಊರಿಗೆ ಬರಲು ಹಿಂದೇಟು ಹಾಕುತ್ತಾರೆ. ಪೇಟೆಗೆ ಹೋದ ಯುವಕರು ಮನೆ ಸೇರಲು ತಡರಾತ್ರಿ ಮಾಡುತ್ತಾರೆ. ಖಾಸಗಿ ಅಥವಾ ಬಿಎಸ್ಸೆನ್ನೆಲ್ ಸಂಪರ್ಕವೂ ಸಿಗದೆ ಇಲ್ಲಿನ ಜನ ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿದುಕೊಳ್ಳುವಂತಾಗಿದೆ. ಅಗತ್ಯ ಸಂದರ್ಭ ಫೋನ್ ಮಾಡಲು ಇಲ್ಲಿ ನೆಟ್‌ವರ್ಕ್ ಸಮಸ್ಯೆ ಬಲವಾಗಿ ಕಾಡುತ್ತಿದೆ. ನೆಟ್‌ವರ್ಕ್ ಸಿಗಬೇಕಾದರೆ ಎತ್ತರದ ಪ್ರದೇಶಕ್ಕೆ ತಮ್ಮ ಮೊಬೈಲ್ ಕೊಂಡೊಯ್ಯಬೇಕಾಗಿದೆ. ಸಮರ್ಪಕ ನೆಟ್‌ವರ್ಕ್ ದೊರಕುತ್ತಿಲ್ಲ. ಪಕ್ಕದ ಕಾಂತಾವರ ಪೇಟೆ, ಕೆದಿಂಜೆ ಹೀಗೆ ಹೊರ ಭಾಗಕ್ಕೆ ಬರಬೇಕಿದೆ. ನೆಟ್‌ವರ್ಕ್ ಇಲ್ಲವೆಂದು ಸಮರ್ಪಕ ನೆಟ್‌ವರ್ಕ್ ಪಡೆಯಲು ಗುಡ್ಡ ಪ್ರದೇಶಕ್ಕೆ ಹೋದರೂ ಅಲ್ಲೂ ಅಪಾಯಕಾರಿ ಸ್ಥಿತಿ. ಸುತ್ತಲೂ ಕಾಡು ಬೆಟ್ಟಗಳಿಂದ ಕೂಡಿದ ಪ್ರದೇಶ.
Related Articles
ಇಲ್ಲಿ ಚಿರತೆ, ಕಾಡು ಕೋಣ, ಕಾಡು ಹಂದಿಗಳ ನಿತ್ಯ ಹಾವಳಿಯಿದ್ದು ಗ್ರಾಮಸ್ಥರು ಭಯದಲ್ಲೂ ಗುಡ್ಡವೇರಿ ಫೋನ್ ಕರೆ ಮಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ಒಂದು ಫೋನ್ ಕರೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಬೇಲಾಡಿಯ ಪರಿಸರದ ಮಕ್ಕಳು, ನಾಗರಿಕರಿಗೆ ಅತೀ ಅವಶ್ಯವಾದ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕವಿಲ್ಲದೆ ಕಲಿಕೆಗೂ ತೊಡಕುಂಟಾಗಿದೆ. ಪರೀಕ್ಷೆ ಸಮಯ ಹತ್ತಿರವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಅಂತರ್ಜಾಲದ ಮೂಲಕವೇ ವಿದ್ಯಾಭ್ಯಾಸಕ್ಕೆ ಪೂರಕ ಮಾಹಿತಿಯನ್ನು ಪಡೆಯಬೇಕಾಗಿದ್ದು ಕಾಂತಾವರ, ಬೇಲಾಡಿ ಗ್ರಾಮದ ವಿದ್ಯಾರ್ಥಿಗಳು ಇಂಟರ್‌ನೆಟ್ ಇಲ್ಲದೆ ದೂರದೂರಿನ ಸೈಬರ್‌ಗಳಿಗೆ ಅಲೆಯುವಂತಾಗಿದೆ.
ನಾಟ್‌ರೀಚೆಬಲ್ ಊರು
ಇತ್ತೀಚಿನ ದಿನಗಳಲ್ಲಿ ಬಹುತೇಕ ಸರಕಾರಿ ಸೇವೆಗಳು ಇಂಟರ್‌ನೆಟ್ ಮೂಲಕವೇ ನಡೆಯುತ್ತಿದೆ. ಬೇಲಾಡಿ ಗ್ರಾಮಸ್ಥರು ಸರಕಾರಿ ಯೋಜನೆ ಹಾಗೂ ಸೇವೆಯನ್ನು ಪಡೆಯುವಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲೂ ಪಡಿತರ ವಿತರಣೆಯಲ್ಲೂ ತೊಂದರೆಯುಂಟಾಗಿ ಗ್ರಾಮಸ್ಥರು ಪಡಿತರ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ದೇಶ ವಿದೇಶಗಳ ನಾನಾ ಕಡೆಗಳಲ್ಲಿ ಈ ಗ್ರಾಮದಿಂದ ಉದ್ಯೋಗ ನಿಮಿತ್ತ ಹೋದವರು ವಾಸ ಹೊಂದಿದ್ದಾರೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಸಾಹಿತ್ಯದ ಸೇವೆಗೆ ಪ್ರಸಿದ್ಧಿ
ಕಾಂತಾವರ ಗ್ರಾಮ ಎಂದ ಕ್ಷಣ ಎಲ್ಲರಿಗೂ ನೆನಪಾಗುವುದು ಇಲ್ಲಿನ ಸಾಹಿತ್ಯ ಸೇವೆಯ ಕೊಡುಗೆ, ಇಲ್ಲಿನ ಕಾಂತಾವರ ಕನ್ನಡ ಸಂಘ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಹೆಸರು ಸಂಪಾದಿಸಿದರೂ ಇದೀಗ ನೆಟ್‌ವರ್ಕ್ ಸಮಸ್ಯೆಯಿಂದ ಹೊರ ಜಗತ್ತಿನ ಸಂಪರ್ಕಗಳು ಕಡಿತಗೊಂಡಿರುವಂತಿದೆ. ಗ್ರಾಮದಲ್ಲಿ ಹಲವು ಸಂಘ ಸಂಸ್ಥೆಗಳು, ಕನ್ನಡ ಸಂಘ ಹಾಗೂ ಸಾಹಿತ್ಯಾ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು ಕಾರ್ಯಾಚರಿಸುತ್ತಿದ್ದು ಕನ್ನಡ ಮಾಧ್ಯಮ ಶಾಲೆಗಳು ಹೈಸ್ಕೂಲ್ ಶಾಲೆಗಳಿದ್ದು ಫೋನ್ ಕರೆ, ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಇಲ್ಲದ ಕಾರಣ ಬಹುತೇಕ ಸಮಸ್ಯೆಯಾಗುತ್ತಿದೆ.
ಇಲಾಖೆಯ ಗಮನಕ್ಕೆ
ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದಿದ್ದೇವೆ. ಸಚಿವರ ಗಮನಕ್ಕೂ ತರಲಾಗಿದ್ದು ಅವರಿಂದ ಪ್ರಯತ್ನಗಳು ನಡೆದಿವೆ. ಶೀಘ್ರದಲ್ಲಿ ಟವರ್ ನಿರ್ಮಾಣಗೊಂಡು ಸಮಸ್ಯೆಗೆ ಪರಿಹಾರ ದೊರಕುವ ವಿಶ್ವಾಸವಿದೆ.
-ವನಿತಾ, ಅಧ್ಯಕ್ಷೆ, ಕಾಂತಾವರ ಗ್ರಾ.ಪಂ.
ಸಮಸ್ಯೆ ಬಗೆಹರಿಯಲಿ
ನೆಟ್‌ವರ್ಕ್ ಸಮಸ್ಯೆ ಕುರಿತು ಆಗ್ರಹಿಸುತ್ತ ಬಂದಿದ್ದೇವೆ. ಸ್ಥಳೀಯವಾಗಿ ನೆಟ್ ವರ್ಕ್ ಸಿಗದ ಕಾರಣಕ್ಕೆ ಮೊಬೈಲ್ ಬಳಸಿ ಮಾಡಬಹುದಾದ ಕೆಲಸಗಳನ್ನೆಲ್ಲ ಹೊರಗೆ ಇದ್ದು ನಡೆಸಬೇಕಾಗುತ್ತದೆ. ಮನೆ ಸೇರುವಾಗ ತಡವಾಗುತ್ತದೆ.
-ನಿತೇಶ್, ಸ್ಥಳೀಯರು
*ಬಾಲಕೃಷ್ಣ ಭೀಮಗುಳಿ