Advertisement

ಕಾರ್ಕಳ ವಿಧಾನಸಭಾ ಕ್ಷೇತ್ರ: ಇಲ್ಲಿಂದ ಕರಾವಳಿಯ ಮೊದಲ ಸಿಎಂ ಆದರು!

10:14 AM Apr 03, 2019 | Vishnu Das |

ಕಾರ್ಕಳ: ಒಂದು ಕಾಲದಲ್ಲಿ ಕಾರ್ಕಳ ಕಾಂಗ್ರೆಸ್‌ ಭದ್ರಕೋಟೆ. ಆದರೆ ಇತ್ತೀಚೆಗೆ ಇಲ್ಲಿ ಬಿಜೆಪಿ ಪ್ರಾಬಲ್ಯ ವಿಸ್ತರಿಸಿದೆ. 1972ರ ಅನಂತರ ಸತತ 6 ಬಾರಿ ಎಂ. ವೀರಪ್ಪ ಮೊಲಿ ಅವರು ಶಾಸಕರಾಗಿ ಇಲ್ಲಿಂದ ಆಯ್ಕೆಗೊಂಡರು. 1992ರಲ್ಲಿ ಕರಾವಳಿ ಭಾಗದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಳಿಕ ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅವರು 1999 ಮತ್ತು 2008ರಲ್ಲಿ ಒಟ್ಟು ಎರಡು ಬಾರಿ ಶಾಸಕರಾಗಿ ಚುನಾಯಿತರಾದರು.

Advertisement

ಬಿಜೆಪಿ ಪರ್ವ
2004, 2013, 2018ರಲ್ಲಿ ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಜಯ ಗಳಿಸಿದರು.ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ತಂದು ಕೊಡುವ ಕ್ಷೇತ್ರಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರವೂ ಒಂದು. ಆದರೆ ಪ್ರಸ್ತುತ ಲೋಕಸಭಾ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಬಿಜೆಪಿಯ ಪ್ರಭಾವಿ ನಾಯಕಿಯಾಗಿ ಗುರುತಿಸಿ ಕೊಂಡಿದ್ದರೂ ತನ್ನ ಕ್ಷೇತ್ರದ ಗ್ರಾಮಗಳ ಒಡನಾಟವಿಟ್ಟುಕೊಂಡಿಲ್ಲ ಎಂಬುದು ಕೆಲವರ ಅಭಿಪ್ರಾಯ. ಶೋಭಾ ಅವರು ಪಕ್ಷ ಸಂಘಟನೆಗಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿರುವ ಕಾರಣ ಪ್ರತಿ ಗ್ರಾಮಕ್ಕೂ ಭೇಟಿ ನೀಡಲು ಸಾಧ್ಯವಾಗಿಲ್ಲ ಅನ್ನುವುದು ಇನ್ನು ಕೆಲವರ ಸಮಜಾಯಿಷಿ. ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್‌ ಮತ್ತು ಶೋಭಾ ಇಬ್ಬರೂ ಕಾರ್ಕಳ ಕ್ಷೇತ್ರದ ಮತದಾರರ ಪಾಲಿಗೆ “ಹೊರಗಿನವ’ರೇ.

ಘಟಾನುಘಟಿಗಳ ಭೇಟಿ ಪಡೆದ ಕ್ಷೇತ್ರ
1978ರಲ್ಲಿ ಕಾರ್ಕಳವು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಇಂದಿರಾ ಗಾಂಧಿ ಕಾರ್ಕಳಕ್ಕೆ ಭೇಟಿ ನೀಡಿದ್ದರು. ಕಾರ್ಕಳ, ನಕ್ರೆ, ಇರ್ವತ್ತೂರು ಪ್ರದೇಶಗಳಲ್ಲಿ ಮತಯಾಚಿಸಿದ್ದರು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಈ ವೇಳೆ ಇಂದಿರಾ ಪರವಾಗಿ ಕ್ಷೇತ್ರದಾದ್ಯಂತ ಓಡಾಡಿ ದ್ದರು. ಅಂದಿನ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಪರವಾಗಿ ಮಾಜಿ ಪ್ರಧಾನಿ ಚಂದ್ರಶೇಖರ್‌, ಮಾಜಿ ಕೇಂದ್ರ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಮಾತ್ರವಲ್ಲದೆ ಹಾಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಕೂಡ ಇಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಜಾರ್ಜ್‌ ಅವರು ಇಂದಿರಾ ಗಾಂಧಿ ಹೋದ ಕಡೆಗಳಿಗೆಲ್ಲ ತೆರಳಿ ಅವರ ವಿರುದ್ಧ ಪ್ರಬಲ ಟೀಕಾಪ್ರಹಾರ ನಡೆಸಿದ್ದರು ಎಂದು ಹಿರಿಯರು ಸ್ಮರಿಸುತ್ತಾರೆ.

ವಾಜಪೇಯಿ ಕಾರ್ಕಳಕ್ಕೆ ಭೇಟಿ ನೀಡಿದ ಪ್ರಮುಖರಲ್ಲಿ ಸೇರಿದ್ದಾರೆ. 2008ರಲ್ಲಿ ಮೋದಿ ಅವರು ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ಸುನಿಲ್‌ ಕುಮಾರ್‌ ಪರ ಮತ ಯಾಚಿಸಿದ್ದರು. 2013ರಲ್ಲಿ ವರುಣ್‌ ಗಾಂಧಿ, 2018ರಲ್ಲಿ ರಾಜನಾಥ್‌ ಸಿಂಗ್‌ ಆಗಮಿಸಿದ್ದರು.

ನಕ್ಸಲ್‌ ಬಾಧಿತ
ಈದು, ಹೊಸ್ಮಾರು ಮೊದಲಾದೆಡೆ ಹಿಂದೆ ನಕ್ಸಲ್‌ ಚಟುವಟಿಕೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ 27 ಮತಗಟ್ಟೆಗಳನ್ನು ನಕ್ಸಲ್‌ ಬಾಧಿತ ಎಂದು ಗುರುತಿಸಲಾಗಿದೆ. ಪ್ರತೀ ಚುನಾವಣೆ ಸಂದರ್ಭ ನಕ್ಸಲರು ಉಪಸ್ಥಿತಿ ಪ್ರದರ್ಶಿಸುವುದುಂಟು. ಈ ಬಾರಿ ಅಂಥದ್ದು ಕಂಡುಬಂದಿಲ್ಲ.

Advertisement

ಫ್ಲ್ಯಾಶ್‌ಬ್ಯಾಕ್‌
ಪ್ರಸ್ತುತ ಐದು ಜಿ.ಪಂ. ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದರೆ, 20 ತಾ.ಪಂ. ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಕಾಂಗ್ರೆಸ್‌; 34 ಗ್ರಾ.ಪಂ.ಗಳ ಪೈಕಿ 26ರಲ್ಲಿ ಬಿಜೆಪಿ ಮತ್ತು ಎಂಟರಲ್ಲಿ ಕಾಂಗ್ರೆಸ್‌ ಇವೆ. 23 ಪುರಸಭಾ ಸದಸ್ಯರ ಪೈಕಿ 11 ಬಿಜೆಪಿ, 11 ಕಾಂಗ್ರೆಸ್‌, ಓರ್ವ ಸ್ವತಂತ್ರ ಸದಸ್ಯರಿದ್ದಾರೆ.

ಸಿದ್ಧತೆ
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ ಮತ್ತು ಬಿಜೆಪಿಗಳು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ, ತಳಮಟ್ಟದ ಸಂಘಟನೆಗೆ ಒತ್ತು ಕೊಟ್ಟಿವೆ. ಮಾ. 27ರಂದು ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹೆಬ್ರಿ ಮತ್ತು ಕಾರ್ಕಳದಲ್ಲಿ ನಡೆದಿದೆ. ಮಾ. 31ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆ ದಿದೆ. ಬಿಜೆಪಿಯಿಂದ ಪ್ರಧಾನಿ ಮೋದಿ ಅವರ ಕರಾವಳಿಯ ರ್ಯಾಲಿಗಳಲ್ಲಿ ಒಂದು ಕಾರ್ಕಳದಲ್ಲಿ ನಡೆಯಬಹುದು ಎನ್ನಲಾಗಿ ದ್ದರೂ ಅಂತಿಮಗೊಂಡಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ತಮ್ಮ ರಾಷ್ಟ್ರ- ರಾಜ್ಯ ಮಟ್ಟದ ನಾಯಕರನ್ನು ಇಲ್ಲಿಗೆ ಕರೆಯಿಸಿ ಕಣಕ್ಕೆ ಬಿರುಸು ತರುವ ಪ್ರಯತ್ನದಲ್ಲಿವೆ.

  ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next