Advertisement

Karkala: ತಾಲೂಕು ಕೇಂದ್ರವಾದರೂ ಹೆಬ್ರಿಗಿಲ್ಲ ರೈತ ಸಂಪರ್ಕ ಕೇಂದ್ರ

04:23 PM Aug 19, 2024 | Team Udayavani |

ಕಾರ್ಕಳ: ಹೆಬ್ರಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದರೂ ಇಲಾಖೆಗಳಲ್ಲಿನ ಸವಲತ್ತುಗಳನ್ನು ಇನ್ನೂ ಒದಗಿಸಿಲ್ಲ. ಅದರಲ್ಲಿ ರೈತರಿಗೆ ಅತೀ ಮುಖ್ಯವಾದ ರೈತ ಸಂಪರ್ಕ ಕೇಂದ್ರವೇ ಹೆಬ್ರಿಗೆ ಸಿಕ್ಕಿಲ್ಲ.  ಇಲ್ಲಿನ ರೈತರು ಒಂದೋ ಕಾರ್ಕಳ ತಾಲೂಕಿನ ವ್ಯಾಪ್ತಿಗೆ ಬರುವ  ಅಜೆಕಾರು, ಇಲ್ಲವೇ ಕುಂದಾಪುರದ ರೈತ ಸಂಪರ್ಕ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ.

Advertisement

ಕಾರ್ಕಳ ತಾಲೂಕಿನಲ್ಲಿ  ಕಾರ್ಕಳ ಹಾಗೂ  ಅಜೆಕಾರಿನ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಹೆಬ್ರಿ ತಾಲೂಕು ಹೊಸದಾಗಿ ರಚನೆಯಾಗಿದ್ದು ಹೋಬಳಿಗಳ ನಿರ್ಮಾಣವಾಗಲೀ, ರೈತ ಸಂಪರ್ಕ ಕೇಂದ್ರವಾಗಲೀ ಆಗಿಲ್ಲ. ಹೀಗಾಗಿ ಹೆಬ್ರಿ ತಾಲೂಕಿನ ಗ್ರಾಮಗಳು ಅಜೆಕಾರು ಮತ್ತು ಕುಂದಾಪುರ ಹೋಬಳಿಗಳಲ್ಲಿ ಹಂಚಿ ಹೋಗಿವೆ.

ಕಾರ್ಕಳ ತಾಲೂಕಿನ 7 ಹಾಗೂ ಹೆಬ್ರಿ ತಾಲೂಕಿನ 6 ಸೇರಿ ಒಟ್ಟು 13 ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರದ  ವ್ಯಾಪ್ತಿ ಬರುತ್ತವೆ.  ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ, ಶಿರ್ಲಾಲು, ಮಾಳ, ಹಿರ್ಗಾನ, ಯರ್ಲಪಾಡಿ, ಕಡ್ತಲ, ಹೆಬ್ರಿ ತಾಲೂಕಿನ ಹೆಬ್ರಿ,

ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಬರುತ್ತವೆ. ಹೆಬ್ರಿ ತಾಲೂಕಿನ ಗ್ರಾಮಗಳಾದ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ಗ್ರಾಮಗಳು ಕುಂದಾಪುರ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಆಶ್ರಯಿಸಿವೆ.

ಹೆಬ್ರಿಯಲ್ಲೇ ಇದ್ದರೆ ಏನೇನು ಲಾಭ?

Advertisement

ಹೆಬ್ರಿಯಲ್ಲೇ  ರೈತ ಸಂಪರ್ಕ ಕೇಂದ್ರ ಸ್ಥಾಪನೆಯಾದರೆ ಸರಕಾರ ನೀಡುವ ಬಿತ್ತನೆ ಬೀಜಗಳು, ಗೊಬ್ಬರಗಳು, ಕೃಷಿ ಪರಿಕರಗಳು  ಸೇರಿದಂತೆ  ಅನೇಕ ಸೇವೆಗಳು ಸ್ಥಳೀಯ ಮಟ್ಟದಲ್ಲೇ ಅಂದರೆ 15 ಕಿ.ಮೀ. ಅಂತರದಲ್ಲಿ ದೊರಕಲಿವೆ.

ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪ

ಹೆಬ್ರಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ  ಇಲ್ಲದೆ ಇರುವುದರಿಂದ ರೈತರಿಗೆ ಆಗುವ ತೊಂದರೆಗಳ ಕುರಿತು  ಹಲವು ಬಾರಿ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜನಸಂಪರ್ಕ ಸಭೆಯಲ್ಲೂ  ಒತ್ತಾಯ ಕೇಳಿಬಂದಿತ್ತು.

ಸರಕಾರದಿಂದ ಅನುಮೋದನೆ ಅಗತ್ಯ

ತಾಲೂಕು ಹಾಗೂ ಹೋಬಳಿ ಕೇಂದ್ರವಾಗಿರುವ ಹೆಬ್ರಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ, ಕೇಂದ್ರಕ್ಕೆ ಅವಶ್ಯವಿರುವ ಹುದ್ದೆಗಳ ಸೃಜನೆಗೆ ಸರಕಾರದಿಂದ  ಅನುಮೋದನೆ ದೊರೆಯಬೇಕಾಗಿದೆ.

ಅನುಮೋದನೆ ಸಿಗಬೇಕಿದೆ

ಹೆಬ್ರಿ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರವಾದಲ್ಲಿ ರೈತರಿಗೆ ತುಂಬಾ ಅನುಕೂಲ. ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನ  ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ರೈತರು ಬೇಡಿಕೆ ಸಂಬಂಧ ಮನವಿ ಮಾಡಿದ್ದು ಸರಕಾರದಿಂದ ಅನುಮೋದನೆಗೊಂಡಲ್ಲಿ ಈಡೇರಲಿದೆ. -ಸಿದ್ಧಪ್ಪ , ಕೃಷಿ ಅಧಿಕಾರಿ, ಕೃಷಿ ಇಲಾಖೆ ಕಾರ್ಕಳ

ರೈತರಿಗೆ ಸಂಪರ್ಕವೇ ಸಿಗುತ್ತಿಲ್ಲ!

ಹೆಬ್ರಿ ತಾಲೂಕಿನ ಹೆಬ್ರಿ, ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರಕ್ಕೆ, ಕುಂದಾಪುರದ ತಾಲೂಕಿನ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿ ಮನೆಗಳು ಕುಂದಾಪುರ ಕೇಂದ್ರಕ್ಕೆ ಸಂಪರ್ಕ ಹೊಂದಿವೆ.  ಹೆಬ್ರಿ, ನಾಡ್ಪಾಲು, ಬೆಳಂಜೆ, ಚಾರ ಶಿವಪುರ ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರದಿಂದ ಸುಮಾರು 20-27 ಕಿಮೀ ದೂರದಲ್ಲಿವೆ. ಅದೇ  ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ ಗ್ರಾಮಗಳು ಕುಂದಾಪುರದಿಂದ 35 ಕಿ.ಮೀ. ದೂರದಲ್ಲಿದೆ. ಇದರಿಂದ ಹೆಬ್ರಿಯ ಕೃಷಿಕರಿಗೆ ರೈತ ಸಂಪರ್ಕ ಕೇಂದ್ರಗಳ ಪ್ರಯೋಜನ ಪಡೆಯುವುದು ಕಷ್ಟವಾಗಿದೆ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next