ಕುಂದಗೋಳ: ಪಟ್ಟಣದಲ್ಲಿ ನಡೆಯುವ ಕರಿಬಂಡಿ ಉತ್ಸವ ತನ್ನದೇ ಆದ ವೈಶಿಷ್ಟ್ಯತೆ, ಪರಂಪರೆಯಿಂದ ಕೂಡಿದ್ದು, ಈ ಉತ್ಸವವನ್ನು ನೋಡುವುದೇ ಭಾಗ್ಯವಾಗಿದೆ.
ವರ್ಷದ ಮುಂಗಾರು ಆರಂಭದಲ್ಲಿ ಈ ಭಾಗದ ರೈತರು ಕಾರಹುಣ್ಣಿಮೆ ದಿನ ಕರಿ ಹರಿಯುವ ಮೂಲಕ ಕಾಯಕ ಆರಂಭಿಸುವುದು
ಸಂಪ್ರದಾಯವಾಗಿದೆ.
ಕರಿಬಂಡಿ ಉತ್ಸವ ಹಿನ್ನೆಲೆ: ಈ ಹಿಂದೆ ಜಮಖಂಡಿ ಸಂಸ್ಥಾನ ಕಾಲದಲ್ಲಿ ಕುಂದಗೋಳ ಸುತ್ತಮುತ್ತ ರಾಕ್ಷಸರು ಜನತೆಗೆ ನೀಡುತ್ತಿದ್ದರಿಂದ ಜನತೆ ಭಯಭೀತರಾಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಮೊರೆ ಹೋದರು.
ಭಕ್ತಿ ಭಾವದಿಂದ ನಮಿಸಿ ಆತ್ಮಸ್ಥೈರ್ಯದೊಂದಿಗೆ ಆ ರಾಕ್ಷಸರನ್ನು ಎದುರಿಸಲು ಬಂಡಿ ಹೂಡಿಕೊಂಡು ಹೋಗಿ ರಾಕ್ಷಸರನ್ನು ಸಂಹರಿಸಿದರು. ಆ ದುಷ್ಟ ಶಕ್ತಿಗಳನ್ನು ಸಂಹರಿಸಿದ ಸಂಕೇತವಾಗಿ ಅಂದಿನಿಂದ ಇಂದಿನವರಿಗೂ ಮೂಲಾನಕ್ಷತ್ರದ ದಿನ ಕಾರಹುಣ್ಣಿಮೆ ಆಚರಣೆ “ಕರಿಬಂಡಿ ಉತ್ಸವ’ ಪರಂಪರೆಯಾಗಿ ನಡೆದುಕೊಂಡು ಬಂದಿದೆ ಎಂದು ಸುನೀಲ
ಕರೂಗಲ್ ವಿವರಿಸುತ್ತಾರೆ.
Related Articles
ಈ ಬಾರಿ 5ರಂದು ಉತ್ಸವ: ಪಟ್ಟಣದ ಅಲ್ಲಾಪೂರ ಹಾಗೂ ಬಿಳೇಬಾಳ ಮನೆತನದಿಂದ ಜೂ.5ರಂದು ಒಂದೊಂದು ಕರಿಬಂಡಿ ಹೂಡುತ್ತಾರೆ. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿ ನಂತರ ಪುರೋಹಿತರ ಮನೆಗೆ ಬಂಡಿಗಳು ಆಗಮಿಸುತ್ತವೆ.
ಪುರೋಹಿತರು ಕರಿಬಂಡಿಗಳಿಗೆ ಪೂಜೆ ಸಲ್ಲಿಸಿ ಮೂಲಾ ನಕ್ಷತ್ರ ನೋಡಿಕೊಂಡು ಇಲ್ಲಿನ ಬ್ರಾಹ್ಮಣ ಕುಂಟುಂಬದವರು 14 ಜನ
ವೀರಗಾರರು ಉಡುಗೆ-ತೊಡುಗೆಗಳನ್ನು ಬಹಳ ವಿಶಿಷ್ಟ ರೀತಿಯಲ್ಲಿ ಪಿತಾಂಬರ ತೊಟ್ಟು ಮೈಗೆ ಗಂಧದ ಲೇಪನ, ತಲೆಗೆ ಪೇಟಾಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಜಯ ಜಯಬ್ರಹ್ಮಲಿಂಗೋಂ ಲಕ್ಷ್ಮಿನರಸಿಂಹೋಂ ಎನ್ನುತ್ತಾ ಬಂಡಿ ಹತ್ತುತ್ತಾರೆ.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನಕ್ಕೆ ಆಗಮಿಸಿ ಬ್ರಹ್ಮದೇವರ ಪೂಜೆ ಸಲ್ಲಿಸುತ್ತಾರೆ. ಕರಿಬಂಡಿ ಉತ್ಸವ ನಂತರ ಪುರೋಹಿತ ಮನೆಯವರಿಂದ ವೀರಗಾರರು ನಡೆದುಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ. ಆಗ ಭಕ್ತರು ಅವರ ಕಡೆ ಮುಖ ಮಾಡಿ ಹಿಂಬದಿಗೆ ದೀಡ ನಮಸ್ಕಾರ ಹಾಕಿಕೊಂಡು ಹೋಗುವುದು ವಾಡಿಕೆ.
ರೈತರು ಎತ್ತುಗಳಿಗೆ ಹೊನ್ನುಗ್ಗಿ ದಿನ ಸ್ವಚ್ಛವಾಗಿ ಮೈ ತೊಳೆದು, ಕೊಂಬುಗಳನ್ನು ಸವರಿ, ಶೃಂಗರಿಸಿ, ಕಂಬಳಿ ಹಾಸಿ, ಎತ್ತುಗಳಿಗೆ ಬಂಗಾರದ ಸರ ಹಣೆಗೆ ಹಾಕಿ ಮುತ್ತೈದೆಯರು ಆರತಿ ಬೆಳಗುತ್ತಾರೆ. ರೈತರು ಬಿದಿರಿನ ವಿಶಿಷ್ಟ ರೀತಿಯ ಗೊಟ್ಟದಲ್ಲಿ ತತ್ತಿ, ಅರಿಶಿಣ, ಒಳ್ಳೆಯಣ್ಣಿ, ಉಪ್ಪು ಮಿಶ್ರಣ ಮಾಡಿ ಗೊಟ್ಟಾ ಹಾಕುತ್ತಾರೆ. ಇದರಿಂದ ಎತ್ತುಗಳ ಮುಂದಿನ ತಮ್ಮ ದುಡಿಮೆಗೆ ತಯಾರಿ
ಮಾಡಿಕೊಳ್ಳುತ್ತಾರೆ. ಮರುದಿನ ಕಾರಹುಣ್ಣಿಮೆ ದಿನ ಎತ್ತುಗಳ ಕೊರಳಲ್ಲಿ ಗೆಜ್ಜೆಯ ಸರ, ಕೋಡುಗಳಿಗೆ ಕೂಡೆಂಚು ಹಾಕಿ, ಕಾಲುಗಳಿಗೆ ಗೆಜ್ಜೆ, ಮೈಮೇಲೆ ಜೂಲಗಳಿಂದ ಶೃಂಗರಿಸುತ್ತಾರೆ.
ರೈತ ಮಹಿಳೆಯರು ತಯಾರಿಸಿದ ಚಕ್ಕಲಿ, ಕೋಡ ಬಳೆ ಹೀಗೆ ವಿಶಿಷ್ಟ ರೀತಿ ಪದಾರ್ಥಗಳಿಂದ ಎತ್ತುಗಳಿಗೆ ಶೃಂಗರಿಸಿ ಕೆಲವು ರೈತರು ಒಟ್ಟಿಗೆ ಕೂಡಿ ವಿವಿಧ ವಾದ್ಯಮೇಳದೊಂದಿಗೆ ಬ್ರಹ್ಮದೇವರ ದೇವಸ್ಥಾನಕ್ಕೆ ಬಂದು ಎತ್ತುಗಳನ್ನು ಪ್ರದಕ್ಷಿಣೆ ಹಾಕಿಸಿ ಹೋಗುತ್ತಾರೆ. ಈ ಉತ್ಸವ ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.
*ಶೀತಲ್ ಎಸ್ ಎಂ