Advertisement

ಕಾರ್ಗಿಲ್ ನಲ್ಲಿ ವೈರಿಗಳನ್ನು ಮಣಿಸಿ ‘ಯೇ ದಿಲ್ ಮಾಂಗೇ ಮೋರ್’ ಎಂದಿದ್ದ ಬ್ರೇವ್ ಕ್ಯಾಪ್ಟನ್

08:42 PM Jul 07, 2020 | Hari Prasad |

ಮಣಿಪಾಲ: 1999ರ ಕಾರ್ಗಿಲ್ ಸಮರದಲ್ಲಿ ಭಾರತದ ನೆಲದೊಳಗೆ ನುಗ್ಗಿ ಅಡಗಿ ಕುಳಿತಿದ್ದ ಪಾಕಿಸ್ಥಾನೀ ಸೈನಿಕರು ಹಾಗೂ ಪಾಕ್ ಬೆಂಬಲಿತ ಅತಿಕ್ರಮಣಕಾರರ ಹುಟ್ಟಡಗಿಸಿ ನಮ್ಮ ನೆಲವನ್ನು ಮರಳಿ ಪಡೆಯುವಲ್ಲಿ ಭಾರತ ಸೇನೆಯ ವೀರಯೋಧರು ತೋರಿದ ಕೆಚ್ಚು ಎಂದೆಂದಿಗೂ ಸ್ಪೂರ್ತಿದಾಯಕವೇ ಸರಿ.

Advertisement

ಅಂದಿನ ಆ ಹೋರಾಟದಲ್ಲಿ ಪಾಕ್ ಅತಿಕ್ರಮಣಕಾರರ ಕೈವಶವಾಗಿದ್ದ 5140 ಹೆಸರಿನ ಶಿಖರವನ್ನು ಮರುವಶಪಡಿಸಿಕೊಳ್ಳುವ ಆದೇಶವನ್ನು ಪಡೆದು ಹೊರಟಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ನೇತೃತ್ವದ ರಾಜ್ ಪುತಾನ ರೈಫಲ್ಸ್ ನ ಎರಡನೇ ಬೆಟಾಲಿಯನ್ ಜೂನ್ 20ರಂದು ಈ ಶಿಖರವನ್ನು ವೈರಿಗಳ ಕೈಯಿಂದ ಮರಳಿ ಗೆದ್ದುಕೊಳ್ಳುವಲ್ಲಿ ಸಫಲವಾಗುತ್ತದೆ.


ಈ 5140 ಶಿಖರವನ್ನು ತಮ್ಮ ಪಡೆ ವಶಪಡಿಸಿಕೊಂಡಿದೆ ಎಂಬ ಸಂದೇಶವನ್ನು ವಿಕ್ರಮ್ ಬಾತ್ರಾ ಅವರು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದು ಒಂದು ಕೋಡ್ ವರ್ಡ್ ಮೂಲಕ. ಆ ಕೋಡ್ ವರ್ಡೇ ‘ಯೇ ದಿಲ್ ಮಾಂಗೇ ಮೋರ್’.

1997ರ ಡಿಸೆಂಬರ್ 06ರಂದು ಭಾರತ ಮಾತೆಯ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದ ವಿಕ್ರಮ್ ಬಾತ್ರಾ ಅವರು ಭಾರತೀಯ ಸೇನೆಯ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ನ 13ನೇ ಬೆಟಾಲಿಯನ್ ಗೆ ಸೇರ್ಪಡೆಗೊಳ್ಳುತ್ತಾರೆ.

ಕ್ಯಾಪ್ಟನ್ ಬಾತ್ರಾ ಅವರಿಗೆ ಕಾರ್ಗಿಲ್ ಸಮರದಲ್ಲಿ ಭಾಗವಹಿಸಲು ಸೇನೆಯಿಂದ ಕರೆ ಬರುವ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶದ ಷಹಜಹಾನ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆ ಸಂದರ್ಭದಲ್ಲಿ ಬಂತು ನೋಡಿ ಕಾರ್ಗಿಲ್ ಕರೆ. ಕ್ಯಾಪ್ಟನ್ ಬಾತ್ರಾ ಹುಮ್ಮಸ್ಸಿನಿಂದಲೇ ತಾಯ್ನೆಲದ ಸೇವೆಗಾಗಿ ಹೊರಟುನಿಂತಿದ್ದರು. ಜೂನ್ 6ರಂದು ಇವರು ದ್ರಾಸ್ ಸೆಕ್ಟರ್ ಗೆ ತಲುಪುತ್ತಾರೆ. ಮತ್ತು ಅಲ್ಲಿ ಅವರು ರಜಪುತಾನ್ ರೈಫಲ್ಸ್ ನ 2ನೇ ಬೆಟಾಲಿಯನ್ ನಲ್ಲಿ 56 ಮೌಂಟೇನ್ ಬ್ರಿಗೇಡ್ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆ.

Advertisement

ಈ ಪಡೆಗೆ ಬಳಿಕ ಟೋಲೋಲಿಂಗ್ ಪರ್ವತ ಪ್ರದೇಶವನ್ನು ಪಾಕ್ ಅತಿಕ್ರಮಣಕಾರರಿಂದ ಮರುವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ಸ್ ಅನ್ನು ಮರುವಶಪಡಿಸಕೊಳ್ಳುವಲ್ಲಿ ನಮ್ಮ ಯೋಧರು ತೋರಿಸ ಕೆಚ್ಚು, ಸಾಹಸಗಳನ್ನು ಇತಿಹಾಸ ಎಂದಿಗೂ ಮರೆಯಲಾರದು ಹಾಗೂ ಇದನ್ನು ಕಾರ್ಗಿಲ್ ಹೋರಾಟದಲ್ಲೇ ಅತ್ಯಂತ ಭೀಕರವಾದ ಕದನ ಎಂದೇ ಬಣ್ಣಿಸಲಾಗುತ್ತದೆ.


ಇನ್ನು, ಜೂನ್ 20ರಂದು ಶಿಖರ 5140ನ್ನು ಮರುವಶಪಡಿಸಿಕೊಳ್ಳುವ ಮಿಷನ್ ಮೇಲೆ ಹೊರಟ ಕ್ಯಾಪ್ಟನ್ ಬಾತ್ರಾ ನೇತೃತ್ವದ ಯೋಧರ ತಂಡ ವೈರಿ ಸೈನಿಕರೊಂದಿಗೆ ಮುಖಾಮುಖಿ ಕಾದಾಡಿ ಈ ಶಿಖರ ಭಾಗವನ್ನು ಮರುವಶಪಡಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಈ ಸಂದರ್ಭದಲ್ಲೇ ತನ್ನ ಹಿರಿಯ ಅಧಿಕಾರಿಗಳಿಗೆ ತಮ್ಮ ಗೆಲುವಿನ ಸಂದೇಶವನ್ನು ಕ್ಯಾಪ್ಟನ್ ಬಾತ್ರಾ ಅವರು ‘ಯೇ ದಿಲ್ ಮಾಂಗೇ ಮೋರ್’ ಎಂಬ ಕೋಡ್ ವರ್ಡ್ ಮೂಲಕ ಸಾರಿದ್ದು.

5140 ಶಿಖರವನ್ನು ಮರುವಶಪಡಿಸಿಕೊಳ್ಳುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಈ ತಂಡಕ್ಕೆ ಇನ್ನೊಂದು ಮಿಷನ್ ಅನ್ನು ನೀಡಲಾಗುತ್ತದೆ, ಅದೇ ಸರಿಸುಮಾರು 16 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದ 4875 ಪಾಯಿಂಟ್ ಅನ್ನು ಮರುವಶಪಡಿಸಿಕೊಳ್ಳುವ ಕಠಿಣ ಟಾಸ್ಕ್.

ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಅನುಜ್ ನಯ್ಯರ್ ಮತ್ತು ಲೆಫ್ಟಿನೆಂಟ್ ನವೀನ್ ಅವರನ್ನೊಳಗೊಂಡಿದ್ದ ಈ ತಂಡ ಮುಷ್ಕೋಹ್ ಕಣಿವೆ ಭಾಗದಲ್ಲಿದ್ದ ಈ 4875 ಪಾಯಿಂಟ್ ಅನ್ನು ಅತಿಕ್ರಮಣಕಾರರಿಂದ ಮುಕ್ತಗೊಳಿಸಲು ಸಜ್ಜಾಗಿ ಹೊರಟೇ ಬಿಡುತ್ತದೆ.

ಈ ಹೋರಾಟ ಅತೀ ಕಠಿಣತಮವಾಗಿ ಸಾಗಿತ್ತು. ಯಾಕೆಂದರೆ 16 ಸಾವಿರ ಅಡಿಗಳಷ್ಟು ಎತ್ತರವಾಗಿದ್ದ ಈ ಪಾಯಿಂಟನ್ನು ವಶಪಡಿಸಿಕೊಳ್ಳಲು ಹೊರಟಿದ್ದ ವಿಕ್ರಮ್ ಬಾತ್ರಾ ನೇತೃತ್ವದ ತಂಡಕ್ಕೆ ಈಗಾಗಲೇ ಶಿಖರದ ಆಯಕಟ್ಟಿನ ಜಾಗಗಳನ್ನು ವಶಪಡಿಸಿ ಕುಳಿತಿದ್ದ ಪಾಕ್ ಅತಿಕ್ರಮಣಕಾರರ ಗುಂಡಿನ ದಾಳಿ ಸ್ವಾಗತಿಸಿತ್ತು.

ಶಿಖರದ ಎತ್ತರದ ಭಾಗದಿಂದ ವೈರಿಪಡೆ ನಿರಂತರ ಮೆಷಿನ್ ಗನ್ ದಾಳಿ ನಡೆಸುತ್ತಲೇ ಇತ್ತು. ವೈರಿಪಡೆಯ ಈ ಗುಂಡಿನ ದಾಳಿಯನ್ನು ತಪ್ಪಿಸಿಕೊಂಡು ಅವರ ಮೇಲೆ ಮರುದಾಳಿ ನಡೆಸುತ್ತಾ ಶಿಖರದ ಒಂದೊಂದೇ ಹಂತವನ್ನು ಏರುತ್ತಾ ಬಾತ್ರಾ ನೇತೃತ್ವದಲ್ಲಿ ನಮ್ಮ ಯೋಧರು ಮುಂದಡಿಯಿಡುತ್ತಿದ್ದರೆ, ಒಂದು ಹಂತದಲ್ಲಿ ಶತ್ರು ಸೈನಿಕರ ಗುಂಡೊಂದು ಲೆಫ್ಟಿನೆಂಟ್ ನವೀನ್ ಅವರ ಕಾಲಿಗೆ ತಗಲುತ್ತದೆ.

ತಕ್ಷಣವೇ ತನ್ನ ಸಹ ಯೋಧನ ಸಹಾಯಕ್ಕೆ ಕ್ಯಾಪ್ಟನ್ ಬಾತ್ರಾ ಧಾವಿಸುತ್ತಾರೆ. ಕಾಲಿನ ಭಾಗಕ್ಕೆ ಗುಂಡೇಟು ತಿಂದು ಮುಂದಡಿ ಇರಿಸಲಾಗದೇ ಒದ್ದಾಡುತ್ತಿದ್ದ ನವೀನ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗಲೇ ಶತ್ರುಗಳ ಕಣ್ಣು ಬಾತ್ರಾ ಮೇಲೆ ಬೀಳುತ್ತದೆ.

ತಕ್ಷಣವೇ ವಿಕ್ರಮ್ ಬಾತ್ರಾ ಅವರನ್ನು ಗುರಿಯಾಗಿಸಿ ಶತ್ರು ಸೈನಿಕರು ಅವರ ಮೇಲೆ ಗುಂಡಿನ ಮಳೆಗೈಯುತ್ತಾರೆ. ಒಂದೆಡೆ ಗಾಯಗೊಂಡು ಬಿದ್ದಿರುವ ತನ್ನ ಸಹಚರನ ಪ್ರಾಣವನ್ನು ಕಾಪಾಡುವ ಹೊಣೆಗಾರಿಕೆ ಇನ್ನೊಂದೆಡೆ ತನ್ನ ಪಡೆಗೆ ವಹಿಸಿರುವ ಈ ಶಿಖರವನ್ನು ಮರುವಶಪಡಿಸಿಕೊಳ್ಳಬೇಕಾದ ಜವಾಬ್ದಾರಿ… ಈ ನಡುವೆ ಶತ್ರು ಸೈನಿಕರ ಗುಂಡಿನಿಂದ ತಪ್ಪಿಸಿಕೊಂಡು ಅವರ ಮೇಲೆ ಮರು ದಾಳಿ ನಡೆಸಬೇಕಾದ ಅನಿವಾರ್ಯತೆ.. ಇದೆಲ್ಲವೂ ಬಾತ್ರಾ ಅವರೊಳಗಿದ್ದ ಯೋಧ ಪ್ರಜ್ಞೆಯನ್ನು ಇನ್ನಷ್ಟು ಜಾಗೃತಗೊಳಿಸುತ್ತದೆ.

ಶತ್ರುಗಳ ಗುಂಡಿನ ದಾಳಿಯಿಂದ ಅದು ಹೇಗೋ ತಪ್ಪಿಸಿಕೊಂಡು ಕ್ಯಾಪ್ಟನ್ ಬಾತ್ರಾ ಮುನ್ನುಗ್ಗುತ್ತಾರೆ ಆದರೆ ದುರದೃಷ್ಟವಶಾತ್ ರಾಕೆಟ್ ಪ್ರೊಪೆಲ್ಲರ್ ಗ್ರೆನೇಡ್ ನಿಂದ ಚಿಮ್ಮಲ್ಪಟ್ಟ ಸ್ಟ್ರೇ ಸ್ಲ್ಪಿಂಟರ್ ಒಂದು ಬಾತ್ರಾ ಅವರ ಮೇಲೆರಗುತ್ತದೆ. ಭಾರತ ಮಾತೆಯ ವೀರಪುತ್ರ 4875 ಶಿಖರವನ್ನು ಮರುವಶಪಡಿಸಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ ರಣಭೂಮಿಯಲ್ಲೇ ಪ್ರಾಣತ್ಯಾಗವನ್ನು ಮಾಡುತ್ತಾರೆ.

ತಾಯ್ನಾಡ ಸೇವೆಗೆ ಸೇರ್ಪಡೆಗೊಂಡ ಎರಡೇ ವರ್ಷದಲ್ಲಿ ತಾಯ್ನೆಲದ ಬಂಧವಿಮೋಚನೆಗಾಗಿ ಹೋರಾಡುವ ಅಪೂರ್ವ ಅವಕಾಶವನ್ನು ತನ್ನದಾಗಿಸಿಕೊಂಡು, ಕೆಚ್ಚೆದೆಯಿಂದ ಹೋರಾಡಿ ಯುದ್ಧಭೂಮಿಯಲ್ಲೇ ವೀರಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಮರಣಾನಂತರ ಸೇನೆಯ ಅತ್ಯುನ್ನತ ಗೌರವ ಪರಮ ವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ತಾಯ್ನೆಲದ ಸೇವೆಗಾಗಿ ತನ್ನ ಪ್ರಾಣವನ್ನು ಸಮರ್ಪಿಸಿ ಹುತಾತ್ಮರಾಗಿ ಇಂದಿಗೆ 21 ವರ್ಷಗಳೇ ಸಂದು ಹೋಯಿತು. ಈ ವೀರ ಯೋಧನ ನೆನಪಿನಲ್ಲೊಂದು ನಮ್ಮ ದೇಶದ ವೀರ ಪುತ್ರನಿಗಿದು ‘ಅಕ್ಷರ ಗೌರವ’

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next