ಯಡ್ರಾಮಿ: ತಾಲೂಕಿನ ಮಾಣಶಿವಣಗಿ ಹಾಗೂ ಹಂಗರಗಿ(ಕೆ) ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯವನ್ನು ಕೂಡಲೇ ಒದಗಿಸುವಂತೆ ತಾಲೂಕು ಕರವೇ (ಪ್ರವೀಣಶೆಟ್ಟಿ ಬಣ) ಮುಖಂಡ ಸಾಹೇಬಗೌಡ ದೇಸಾಯಿ ಜೇವರ್ಗಿ ಸಾರಿಗೆ ವ್ಯವಸ್ಥಾಪಕರಿಗೆ ಒತ್ತಾಯಿಸಿದರು.
ಈ ವೇಳೆ ಸಾಹೇಬಗೌಡ ದೇಸಾಯಿ ಮಾತನಾಡಿ, ಮಾಣಶಿವಣಗಿ ಹಾಗೂ ಹಂಗರಗಿ ಗ್ರಾಮಗಳಿಗೆ ಬಸ್ಸಿನ ಓಡಾಟ ಇಲ್ಲದ ಕಾರಣ, ಎರಡೂ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪರಿಸ್ಥಿತಿ ತಿಳಿಸಿದರು.
ವಿದ್ಯಾರ್ಥಿಗಳು ನಿತ್ಯ ಬೆಳಗ್ಗೆ ಕಾಲೇಜು ತರಗತಿಗಳಿಗೆ ಹಾಜರಾಗಬೇಕಾದರೆ ಬಸ್‌ಗಳೆ ಇಲ್ಲ. ವಿದ್ಯಾರ್ಥಿಗಳು, ಗ್ರಾಮಸ್ಥರು ವಿವಿಧ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ತೆರಳಲು ನಿತ್ಯವೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸಾರಿಗೆ ಘಟಕದ ವ್ಯವಸ್ಥಾಪಕರು ಗ್ರಾಮಗಳಿಗೆ ಬಸ್ ಸೌಕರ್ಯವನ್ನು ನಾಲ್ಕು ದಿನದ ಒಳಗೆ ಒದಗಿಸಬೇಕು. ಇಲ್ಲದಿದ್ದರೆ, ಬರುವ ದಿನಗಳಲ್ಲಿ ಯಡ್ರಾಮಿ ಬಸ್ ನಿಲ್ದಾಣಕ್ಕೆ ಬೀಗ ಜಡಿದು ನೂರಾರು ಕರವೇ ಕಾರ್ಯಕರ್ತರೊಂದಿಗೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಸಾಂಬಶಿವ ಹಿರೇಮಠ, ದೇವೀಂದ್ರ, ಹಣಮಂತ ಕೂಡಿ ಕಾಚಾಪೂರ, ಸಿದ್ಧಾರೂಢ ಸುಬೇದಾರ, ಚಂದಪ್ಪಗೌಡ ಮಾಲಿಪಾಟೀಲ, ಕಾಂತಪ್ಪ ವಾಲೀಕಾರ್, ವಿಶ್ವಾರಾಧ್ಯ ಹಿರೇಮಠ ಇತರರಿದ್ದರು.