ಕಾರವಾರ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಆಳ ಸಮುದ್ರಕ್ಕೆ ಮೀನುಗಾರರು ಅ.8ರವರೆಗೆ ತೆರಳದಂತೆ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹವಾಮಾನ ವೈಪರಿತ್ಯದಿಂದ ಮೀನುಗಾರರು, ಬೋಟ್ ಮಾಲೀಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಲ ಆಗಸ್ಟ್‌ನಲ್ಲಿ ತುಂಬಾ ಮಳೆಯ ಕಾರಣ ಮೀನುಗಾರಿಕೆ ಸಾಧ್ಯವಾಗಿಲ್ಲ. ಜೂನ್, ಜುಲೈನಲ್ಲಿ ಮೀನುಗಾರಿಕೆ ನಿಷೇಧಿತ ಅವಧಿ. ಹಾಗಾಗಿ ಸೆಪ್ಟಂಬರ್‌ನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ಮತ್ಸೋದ್ಯಮ ಇದೀಗ ಮತ್ತೆ ನಷ್ಟ ಅನುಭವಿಸುವಂತಾಗಿದೆ.
ಅ.5 ರಿಂದ 8 ರವರೆಗೆ ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಸೂಚಿಸಿದೆ. ಮೀನುಗಾರಿಕಾ ಇಲಾಖೆ ಸಹ ಇದೇ ಎಚ್ಚರಿಕೆ ನೀಡಿದೆ. ಮತ್ಸ್ಯ ಬೇಟೆ ಸಮಯದಲ್ಲಿ ಕೈ ಕಟ್ಟಿ ಕುಳಿತುಕೊಳ್ಳುವ ಪ್ರಮೇಯ ಉದ್ಬವಿಸಿದೆ.
ಅಕ್ಟೋಬರ್, ನವ್ಹೆಂಬರ್, ಡಿಸೆಂಬರ್‌ನಲ್ಲಿ ಫಿಶ್ ಕ್ಯಾಚಿಂಗ್ ಜೋರಾಗಿಯೇ ಇರುತ್ತದೆ. ಆದರೆ ಈ ಸಲ ಅಕ್ಟೋಬರ್ ಮೊದಲ ವಾರ ನೈಸರ್ಗಿಕ ವಿಕೋಪದಿಂದ ಫಿಶ್ ಕ್ಯಾಚ್ ಬ್ಯಾನ್ ಆಗಿದೆ. ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಸಮುದ್ರಕ್ಕೆ ಹೋದರೆ ಮೀನುಗಾರಿಕಾ ಬೋಟ್ ಮಾಲೀಕರೆ ಅನಾಹುತಕ್ಕೆ ಹೊಣೆಯಾಗಲಿದ್ದಾರೆ. ಕಾರ್ಮಿಕರ ಜೀವ ರಕ್ಷಣೆ ಸಹ ಮುಖ್ಯ. ಮುನ್ಸೂಚನೆ ಅವಧಿಯಲ್ಲಿ ದುರಂತವಾದರೆ ವಿಮೆ ಸಹ ಸಿಗುವುದಿಲ್ಲ ಎನ್ನುವುದು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಾದ.
ಮತ್ಸ್ಯ ಉದ್ಯಮ ನಷ್ಟ: ಹವಮಾನ ಇಲಾಖೆ ಸೂಚನೆಯಿಂತೆ ಶುಕ್ರವಾರ ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿಯಿತು. ಶನಿವಾರ ವಾತಾವರಣ ಅಷ್ಟೇನು ಅಪಾಯ ಎನ್ನುವಂತಿರಲಿಲ್ಲ. ಆದರೆ ಹಠಾತ್ ಸಮುದ್ರದಲ್ಲಿ ಅಲೆಗಳು ಎದ್ದರೆ, ಗಾಳಿ ಬೀಸಿದರೆ ಎಂಬ ಭಯದಿಂದ ಬೋಟ್ ಕಡಲಿಗೆ ಇಳಿಯಲಿಲ್ಲ. ಕೆಲವರು ಸಾಹಸ ಮಾಡಿದ ಘಟನೆಗಳಿವೆ. ಆದರೆ ಇದು ಬೋಟ್ ಮಾಲೀಕರ ರಿಸ್ಕ್. ಮೀನುಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ನಮ್ಮದೇ ಆದ ಯಾಂತ್ರಿಕೃತ ಬೋಟ್ ಇಲ್ಲ. ಏನೇ ಆದರೂ ನಾವು ಕಡಲಕಾವಲು ಪಡೆಯ ಯಾಂತ್ರಿಕ ಬೋಟ್ ಬಳಸಿ ಕಡಲ ವೀಕ್ಷಣೆಗೆ ಹೋಗಬೇಕು. ಹೀಗಿರುವಾಗ ಮೀನುಗಾರರಲ್ಲಿ ನಾವು ಜಾಗೃತಿ ಮೂಡಿಸುತ್ತೇವೆ ಎನ್ನುತ್ತಾರೆ.
ಸೋಮವಾರದಿಂದ ಮೀನುಗಾರಿಕೆ: ರವಿವಾರತನಕ ಕಾಯುತ್ತೇವೆ. ಹವಾಮಾನದಲ್ಲಿ ಏರುಪೇರು ಆಗದಿದ್ದರೆ, ಸೋಮವಾರ ಮೀನುಗಾರಿಕೆಗೆ ತೆರಳಿಯೇ ಸಿದ್ಧ ಎಂಬುದು ಹೆಸರು ಹೇಳಲು ಇಚ್ಛಿಸದ ಬೋಟ್ ಮಾಲೀಕರ ಮಾತು. ಕಾರ್ಮಿಕರಿಗೆ ದಿನದ ವೇತನ ಕೊಡಲೇಬೇಕು. ಬ್ಯಾಂಕ್ ಸಾಲ ಬೇರೆ ಇದೆ. ಹವಾಮಾನದ ಮುಖ ನೋಡಿ ಕುಳಿತರೆ ಸಾಲ ಮೈಮೇಲೆ ಬರುತ್ತದೆ. ನಾವು ಬದುಕುವುದಾದರೂ ಹೇಗೆ ಎಂಬುದು ಬೋಟ್ ಮಾಲೀಕರ ಅಳಲು.
ಶುಕ್ರವಾರ ಹಗಲು ಸಮುದ್ರ ಸರಿಯಾಗಿಯೇ ಇತ್ತು. ಅಲೆಗಳ ಅಬ್ಬರ ಇರಲಿಲ್ಲ. ಸಂಜೆ ಇದ್ದಕ್ಕಿಂದ್ದಂತೆ ಬಲವಾದ ಗಾಳಿ ಬೀಸಿತು. ರಭಸದ ಮಳೆ ಸುರಿಯಿತು. ಶನಿವಾರ ಹಗಲು ಸಹಜವಾಗಿದೆ. ಹೀಗಿದ್ದರೂ ನೀರಿಗೆ ಇಳಿಯದ ಪರಿಸ್ಥಿತಿ. ಮೀನುಗಾರಿಕಾ ಬೋಟ್ ಮಾಲೀಕರದ್ದು ಇಕ್ಕಟ್ಟಿನ ಸಂದರ್ಭ ಬಿಕ್ಕಟ್ಟಿನ ವಾತಾವರಣ ಸನ್ನಿವೇಶ ಎಂಬಂತಾಗಿದೆ.
ಹವಮಾನ ಇಲಾಖೆ ಸೂಚನೆ ಕಡೆಗಣಿಸಲಾಗದು: ಮನ್ಸೂಚನೆ ಸಮಯದಲ್ಲಿ ಕಡಲಿಗೆ ಇಳಿಯುವಂತಿಲ್ಲ. ಇಳಿದರೆ, ಏನಾದರೂ ಅನಾಹುತವಾದಲ್ಲಿ ಪರಿಹಾರ ಸಿಗದು. ಇಂಥ ಪರಿಸ್ಥಿತಿಯನ್ನು ಮೀನುಗಾರಿಕಾ ಬೋಟ್ ಮಾಲೀಕರು ಅರ್ಥ ಮಾಡಿಕೊಳ್ಳಬೇಕು ಎಂಬುದು ಅಪರ ಜಿಲ್ಲಾಧಿಕಾರಿ ಡಾ| ಸುರೇಶ್ ಹಿಟ್ನಾಳರ ಮಾತು.
ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್
ಹವಮಾನ ವೈಪರಿತ್ಯ ಇದ್ದರೂ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಯುತ್ತಿದೆ ಎಂಬ ಮೀನುಗಾರಿಕಾ ಬೋಟ್‌ಗಳ ಓರ್ವ ಮಾಲೀಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ಪ್ರವಾಸಿಗರು ಆನ್ ಲೈನ್‌ನಲ್ಲಿ ಮೊದಲೇ ಸ್ಕೂಬಾಕ್ಕೆ ಬರುವುದಾಗಿ ಹೆಸರು ನೊಂದಾಯಿಸಿ ಹಣ ತುಂಬಿರುತ್ತಾರೆ. ಅವರು ದೂರದ ಊರುಗಳಿಂದ ಬಂದಾಗ ಹವಾಮಾನ ಕಾರಣ ನೀಡಿ ವಾಪಸ್ ಕಳಿಸಿದರೆ, ಗ್ರಾಹಕರ ವೇದಿಕೆಗೆ ತೆರಳಿ ಒಂದಕ್ಕೆ ಹತ್ತರಷ್ಟು ಹಣ ಕೇಳುತ್ತಾರೆ. ಅವರಿಗೆ ಅಪಾಯವಾಗದಂತೆ ಸ್ಕೂಬಾ ಮಾಡಿಸುವುದು ಅನಿವಾರ್ಯ. ಆನ್‌ಲೈನ್‌ನಲ್ಲಿ ಪ್ರವಾಸಿಗ ಬುಕ್ ಮಾಡಿದಾಗ ಹವಮಾನ ವೈಪರಿತ್ಯದ ಮಾಹಿತಿ ಬಂದಿರಲಿಲ್ಲ. ಇಂಥ ಸಂದರ್ಭಗಳನ್ನು ನಿಭಾಯಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.