Advertisement

ಕಾರಟಗಿ: ಗುಡಿಗಾಗಿ ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ

05:59 PM Jun 27, 2024 | Team Udayavani |

ಉದಯವಾಣಿ ಸಮಾಚಾರ
ಕಾರಟಗಿ: ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಆರಂಭಿಸುವ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಲಿನ ಅನಧಿಕೃತ ಗುಡಿಸಲು ಮತ್ತು ಶೆಡ್‌ಗಳನ್ನು ಪುರಸಭೆ ಸಿಬ್ಬಂದಿ ಜನರ ಸಹಕಾರದೊಂದಿಗೆ ಬುಧವಾರ ತೆರವು ಕಾರ್ಯ ಆರಂಭಿಸಿದರು.

Advertisement

ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ದೇಗುಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ದೇಗುಲ ಸುತ್ತಲಿನ ಸ್ಥಳ ಪರಿಶೀಲನೆ ಬಳಿಕ ಸುತ್ತಲಿನ ಪ್ರದೇಶದಲ್ಲಿ ಅನಧಿಕೃತ ಶೆಡ್‌ ಹಾಗೂ ಗುಡಿಸಲು ತೆರವಿಗೆ ಸೂಚನೆ ನೀಡಿದ್ದರು.

ಇದೇ ವೇಳೆ ದೇವಿಕ್ಯಾಂಪ್‌ನ ಗುಡ್ಡದ ಬಳಿ ನಿವೇಶನ ನೀಡುವ ಭರವಸೆ ನೀಡಿ ತೆರವು ಕಾರ್ಯಕ್ಕೆ ಕಾಲಾವಕಾಶವನ್ನು
ಸಚಿವರು ನೀಡಿದ್ದರು. ಆದರೆ ನೀಡಿದ್ದ ಕಾಲಾವಕಾಶ ಮುಗಿದರೂ ನಿವಾಸಿಗಳ್ಯಾರು ತೆರವು ಕಾರ್ಯಕ್ಕೆ ಮುಂದಾಗಿರಲಿಲ್ಲ. ಅಲ್ಲದೆ ಅನಧಿಕೃತ ಶೆಡ್‌ ತೆರವಿಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆ, ಜನರು ಹಾಗೂ ಸರ್ವ ಧರ್ಮಿಯರು ತಾಲೂಕು ದಂಡಾಧಿಕಾರಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರು. ತೆರವು ಕಾರ್ಯಕ್ಕೆ ಬುಧವಾರ ಆಗಮಿಸಿದ ಬುಲ್ಡೊಜರ್‌ ವಾಹನಕ್ಕೆ ದೇಗುಲದ ಅರ್ಚಕ ಬಸವರಾಜ ಬಡಿಗೇರ ಪೂಜೆ ಸಲ್ಲಿಸಿದರು.

ನಂತರ ತೆರವು ಕಾರ್ಯ ಆರಂಭಗೊಂಡಿತು. ಮಂಗಳವಾರದಿಂದಲೇ ಅಲ್ಲಿನ ಕೆಲ ನಿವಾಸಿ ತಮ್ಮ ಗುಡಿಸಲು ಮತ್ತು ಶೆಡ್‌ಗಳನ್ನು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾಗಿದ್ದರು. ಅಲ್ಲದೆ ದ್ಯಾವಮ್ಮ ದೇವಿ ದೇಗುಲದ ಸುತ್ತಲಿನ ಪರಿಸರದಲ್ಲಿ ಅನಧಿಕೃತವಾಗಿ ಹಾಕಿರುವ ಶೆಡ್‌ ಮತ್ತು ಗುಡಿಸಲು ತೆರವಿಗೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಿದ್ದರು.

ಈ ಸಂದರ್ಭದಲ್ಲಿ ಪಿಐ ಪ್ರದೀಪ್‌ ಬಿಸೆ, ಪಿಎಸ್‌ಐ ಕಾಮಣ್ಣ, ಎಎಸ್‌ಐ ಬೊರಣ್ಣ, ಪುರಸಭೆ ವ್ಯವಸ್ಥಾಪಕ ಪರಮೇಶ್ವರ, ಪುರಸಭೆ
ಅಧಿಕಾರಿಗಳಾದ ಆದೇಪ್ಪ, ಅನಂತ ಸೇರಿದಂತೆ ಪಟ್ಟಣದ ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ಕಲ್ಲನಗೌಡ ಮಾ.ಪಾಟೀಲ್‌, ಮರಿಯಪ್ಪ ಸಾಲೋಣಿ, ನಾರಾಯಣ ಇಡಿಗೇರ, ತಾಯಪ್ಪ ಕೊಟ್ಯಾಳ, ಯೂಸುಫ ಸಾಬ್‌, ಅಯ್ಯಪ್ಪ ಬಂಡಿ,
ರಮೆಶ ಬಂಗಿ, ಹನಮಂತ ಸಿಂಗ್‌ ಕೋಟೆ, ವಿರುಪಣ್ಣ ಸಾಲೋಣಿ, ಖಾಜಾ ಹುಸೇನ್‌ ಮುಲ್ಲಾ, ಶ್ರೀನಿವಾಸ ಗೋಮರ್ಸಿ, ಹನುಮಂತಪ್ಪ ಸಿಂಗಾಪೂರ, ವೆಂಕಟೇಶ ಈಡಿಗೇರ, ನ್ಯಾಯವಾದಿ ವೀರೇಶ, ಶಂಕ್ರಪ್ಪ ಮೆಗೂರ, ಸೇರಿದಂತೆ ಸಮುದಾಯದ ಪ್ರಮುಖರು, ಜೆಸ್ಕಾಂ ಸಿಬ್ಬಂದಿ, ಪುರಸಭೆ ಪೌರಕಾರ್ಮಿಕರು ಇದ್ದರು.

Advertisement

ಮೂರು ಎಕರೆ ಭೂಮಿ ಎಂದು ಅಂದಾಜಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಇನ್ನೆರೆಡು ದಿನದಲ್ಲಿ ಸಂಪೂರ್ಣ ತೆರವು ಕಾರ್ಯ ಮುಗಿಸಿ ಬಳಿಕ ಸರ್ವೇ ನಡೆಸಿ ಜಾಗವನ್ನು ಸಂಪೂರ್ಣ ಹದ್ದು ಬಸ್ತು ಮಾಡಲಾಗುವುದು.
ಸುರೇಶ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next