ಗದಗ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯುವ ಕಾರಹುಣ್ಣಿಮೆಯನ್ನು ಜಿಲ್ಲೆಯಾದ್ಯಂತ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕಾರಹುಣ್ಣಿಮೆ ಅಂಗವಾಗಿ ರೈತಾಪಿ ಜನರು ತಮ್ಮ ಎತ್ತು, ಜಾನುವಾರುಗಳಿಗೆ ಗೊಟ್ಟ ಹಾಕಿ, ಹುರುಪುಗೊಳಿಸಿದರೆ, ಮಹಿಳೆಯರು ಮನೆಗಳಲ್ಲಿ ಸಿಹಿ ತಿನಿಸು ತಯಾರಿಸುವಲ್ಲಿ ತಲ್ಲೀನರಾಗಿದ್ದರು. ಯುವಕರು ಹಾಗೂ ಚಿಣ್ಣರು ಮನೆ ಮಹಡಿ ಹಾಗೂ ಬಯಲಿನಲ್ಲಿ ಗಾಳಿಪಟ ಹಾರಿಸುವ ಮೂಲಕ ಸಂಭ್ರಮದಲ್ಲಿ ಮಿಂದೆದ್ದರು.
ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ‘ಗೊಟ್ಟ ಹಾಕುವ’ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ರೈತರ ಬದುಕಿನ ಅವಿಭಾಜ್ಯವಾಗಿರುವ ಎತ್ತುಗಳಿಗೆ ಮಳೆಗಾಲದಲ್ಲಿ ಯಾವುದೇ ರೋಗಗಳು ಬಾರದಿರಲಿ, ಬೇಸಿಗೆಯಲ್ಲಿ ಒಣ ಮೇವು ತಿನ್ನುತ್ತಿದ್ದ ಜಾನುವಾರುಗಳಿಗೆ ಬೇಸಿಗೆ ಬಳಿಕ ಮಳೆಗಾಲದಲ್ಲಿ ಆಹಾರ ಕ್ರಮ ಬದಲಾಗಿ ಹಸಿರು ಮೇವು ತಿನ್ನಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರಹುಣ್ಣಿಮೆ ನಿಮಿತ್ತ ಜಿರಿಗೆ, ಅರಿಷಿನ ಪುಡಿ, ಉಪ್ಪು ಮಿಶ್ರಣವನ್ನು ಎತ್ತುಗಳ ಬಾಯಿ ಹಾಕಿ ಸ್ವಚ್ಛಗೊಳಿಸಿದರು. ನಂತರ ಗೊಟ್ಟದಿಂದ ಎತ್ತುಗಳಿಗೆ ಜವಾರಿ ಕೋಳಿ ಮೊಟ್ಟೆ ಹಾಗೂ ಮಜ್ಜಿಗೆ ಕುಡಿಸಿದರು. ಬಳಿಕ ಅವುಗಳ ನಾಲಿಗೆಗೆ ಅರಿಷಿಣದ ಪುಡಿಯನ್ನು ತಿಕ್ಕಿದರು. ಜಿಡ್ಡು ಹಿಡಿದ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ಹಸಿರು ಮೇವು ರುಚಿಸುವಂತಾಗುತ್ತದೆ ಎಂಬುದು ರೈತರ ನಂಬಿಕೆ.
ನಂತರ ಕೋಡುಗಳಿಗೆ ಅರಿಷಿಣ ಮಿಶ್ರಿತ ಎಣ್ಣೆ ಹಚ್ಚಿ,ಬಣ್ಣ ಬಣ್ಣದ ರಿಬ್ಬನ್ ಕಟ್ಟಿ ಸಿಂಗರಿಸಿದರು. ಎತ್ತುಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದರ್ಶನಾರ್ಶೀವಾದ ಪಡೆದುಕೊಂಡರು. ಬಳಿಕ ಮನೆಯಲ್ಲೂ ಎತ್ತುಗಳಿಗೆ ವಿಶೇಷ ಪೂಜೆ, ನೈವೇದ್ಯ ಅರ್ಪಿಸುವ ಮೂಲಕ ಈ ಬಾರಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಬಸವಣ್ಣನಿಗೆ ಪ್ರಾರ್ಥನೆ ಸಲ್ಲಿಸಿದರು.