ಕರಾಚಿ: ಪಾಕಿಸ್ತಾನ ಆರ್ಥಿಕ ಸಂಕಷ್ಟ ಎದುರಾಗಿರುವಂತೆಯೇ, ಶಸ್ತ್ರಸಜ್ಜಿತ 12ಕ್ಕೂ ಅಧಿಕ ಮಂದಿ ಉಗ್ರರು ಕರಾಚಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನುಗ್ಗಿದ್ದಾರೆ. ಶುಕ್ರವಾರ ರಾತ್ರಿ 6.30ಕ್ಕೆ ಈ ಘಟನೆ ನಡೆದಿದೆ.
ಪೊಲೀಸರು ಹಾಗೂ ಶಸ್ತ್ರಸಜ್ಜಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಪೊಲೀಸ್ ಸಮವಸ್ತ್ರ ಧರಿಸಿ ಅವರು ಕಚೇರಿಗೆ ನುಗ್ಗಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಉಗ್ರರನ್ನು ಕೊಲ್ಲುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಡುವೆ, ಗುಂಡಿನ ಚಕಮಕಿಯಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನದ ಆರ್ಥಿಕ ಚಟುವಟಿಕೆಗಳ ಪ್ರಧಾನ ಕೇಂದ್ರವಾಗಿರುವ ಕರಾಚಿಯ ಶರೆಯಾ ಫೈಸಲ್ ಎಂಬಲ್ಲಿರುವ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಆಯುಕ್ತರ ಕಚೇರಿ, ಐದು ಅಂತಸ್ತುಗಳನ್ನು ಹೊಂದಿದೆ. ಹಿರಿಯ ಪೊಲೀಸರು ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ಮೊದಲ, ಎರಡನೇ ಅಂತಸ್ತಿನಲ್ಲಿ ಉಗ್ರರು ಸದ್ಯ ನಿಯಂತ್ರಣ ಸಾಧಿಸಿದ್ದಾರೆ.
ಅವರನ್ನು ಕೊಲ್ಲುವ ನಿಟ್ಟಿನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಉಗ್ರ ನಿಗ್ರಹ ದಳ ಹೆಚ್ಚಿನ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಪಾಕಿಸ್ತಾನ ರೇಂಜರ್ಸ್‌ನ ತುಕಡಿಯನ್ನೂ ಸ್ಥಳಕ್ಕೆ ಕಳುಹಿಸಿ ಕೊಡಲಾಗಿದೆ. ಅವರೆಲ್ಲರೂ, ಈಗ ಪೊಲೀಸ್ ಆಯುಕ್ತರ ಕಚೇರಿಯನ್ನು ಸುತ್ತುವರಿದಿದ್ದು, ಭೀಕರ ರೀತಿಯಲ್ಲಿ ಗುಂಡು ಹಾರಾಟ ನಡೆದಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಾವೇದ್ ಒಲಾಂ ಒಧು ಅವರು ಪ್ರತಿಕ್ರಿಯೆ ನೀಡಿ, ಉಗ್ರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಜತೆಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್, ಲಾಹೋರ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.