ಕರಾಚಿ: ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರಯಾಣಿಕರ ವಾಹನವೊಂದು ಭಾನುವಾರ ಬೆಳಗ್ಗೆ ಕಂದಕಕ್ಕೆ ಬಿದ್ದ ಪರಿಣಾಮ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
“ವಾಹನದಲ್ಲಿ ಸುಮಾರು 48 ಪ್ರಯಾಣಿಕರಿದ್ದರು. ವಾಹನವು ಕ್ವೆಟ್ಟಾದಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು” ಎಂದು ಲಾಸ್ಬೆಲಾ ಸಹಾಯಕ ಕಮಿಷನರ್ ಹಮ್ಜಾ ಅಂಜುಮ್ ಹೇಳಿದ್ದಾರೆಂದು ದಿ ಡಾನ್ ವರದಿ ಮಾಡಿದೆ.
“ಅತಿ ವೇಗದ ಕಾರಣದಿಂದ ಲಾಸ್ಬೆಲಾ ಬಳಿ ಯು-ಟರ್ನ್ ತೆಗೆದುಕೊಳ್ಳುವಾಗ ವಾಹನ ಸೇತುವೆಯ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಾಹನವು ನಂತರ ಕಂದಕಕ್ಕೆ ಬಿತ್ತು ಮತ್ತು ನಂತರ ಬೆಂಕಿ ಹೊತ್ತಿಕೊಂಡಿತು” ಎಂದು ಅವರು ಹೇಳಿದರು.
ಇದನ್ನೂ ಓದಿ:ವಿಸ್ತರಿಸಲಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತಾ ಸಿಬಂದಿ
Related Articles
“ಮೃತರನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯನ್ನು ಮಾಡಲಾಗುವುದು, ಗಾಯಗೊಂಡ ಪ್ರಯಾಣಿಕರನ್ನು ಲಾಸ್ಬೆಲಾದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ” ಎಂದು ಹಮ್ಜಾ ಅಂಜುಮ್ ತಿಳಿಸಿದರು.
ಮಗು ಮತ್ತು ಮಹಿಳೆ ಸೇರಿದಂತೆ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.