ಕಾಪು : ಕೊರೊನಾ ಕಷ್ಟ ಕಾಲದಲ್ಲಿ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಾವಿರಾರು ಮಕ್ಕಳು ಅನಾಥವಾಗಿವೆ. ಜನರ ಹಸಿವನ್ನು ತಣಿಸುವ ನಿಟ್ಟಿನಲ್ಲಿ ಎಲ್ಲೆಡೆ ಭರಪೂರ ಸಹಕಾರ, ಸಹಾಯಗಳು ದೊರಕುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಇನ್ನಷ್ಟು ಉತ್ತಮ ಮನಸ್ಸುಗಳು ಮುಂಚೂಣಿಗೆ ಬರುವಂತಾಗಲಿ ಎಂದು ಉದ್ಯಮಿ / ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ವತಿಯಿಂದ ಕರ್ನಾಟಕ ಜಾನಪದ ಪರಿಷತ್ ನ ತಾಲೂಕು ಘಟಕದ ಸಹಕಾರದೊಂದಿಗೆ ಶುಕ್ರವಾರ ಕಾಪು ತಾಲೂಕಿನ ಆಯ್ದ ಕಲಾವಿದ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಕ್ಷಗಾನ, ನಾಟಕ, ಸಮಾಜ ಸೇವೆ, ಜಾನಪದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ತಲ್ಲೂರು ಶಿವರಾಮ ಶೆಟ್ಟಿ ಅವರು ಜಾನಪದ ಮನಸುಗಳ ಸಂಕಷ್ಟವನ್ನು ಅರಿತು ಕೊಂಡು, ಅವರ ಕುಟುಂಬಕ್ಕೆ ಆಸರೆಯಾಗಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ / ತಲ್ಲೂರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಮಾತನಾಡಿ, ಜಾನಪ ಕಲೆಯನ್ನೇ ಉಸಿರಾಗಿಸಿಕೊಂಡು ಬಂದಿರುವ ಸಣ್ಣ ಸಣ್ಣ ಕಲಾವಿದರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕಲಾವಿದರಿಗೆ ಸಹಕಾರ ನೀಡುವ ಸದುದ್ದೇಶದೊಂದಿಗೆ ಪಡಿತರ ಕಿಟ್ ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಕಲಾವಿದರ ಕುಟುಂಬಗಳಿಗೆ ಪಡಿತರ ಕಿಟ್ ನೀಡಲಾಗಿದ್ದು, ಕಲೆ ಮತ್ತು ಕಲಾವಿದರ ಉಳಿವಿಗಾಗಿ ಕರ್ನಾಟಕ ಜಾನಪದ ಪರಿಷತ್ತು ನಿರಂತರವಾಗಿ ಸಹಕಾರ ನೀಡಲಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವಿರಾಜ್ ನಾಯಕ್, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ / ಕಾಪು ತಾಲೂಕು ಘಟಕದ ಗೌರವಾಧ್ಯಕ್ಷ ಶ್ರೀಧರ ಶೇಣವ ಕಾಪು, ಕಾಪು ತಾಲೂಕಿನ ವಿವಿಧ ಜಾನಪದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ತಾಲೂಕು ಘಟಕದ ಅಧ್ಯಕ್ಷ ಕೆ. ಲೀಲಾಧರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ಶೆಟ್ಟಿ ಮೂಳೂರು ವಂದಿಸಿದರು.