ಕಾಪು: ನೂತನವಾಗಿ ನಿರ್ಮಾಣಗೊಂಡ ಕಾಪು ಮಿನಿ ವಿಧಾನಸೌಧ (ತಾಲೂಕು ಆಡಳಿತ ಸೌಧ) ಉದ್ಘಾಟನೆಗೊಂಡು ಎರಡು ತಿಂಗಳು ಕಳೆದರೂ ನೂತನ ಕಟ್ಟಡ ಇನ್ನೂ ಸಾರ್ವಜನಿಕ ಸೇವೆಗೆ ತೆರೆದುಕೊಂಡಿಲ್ಲ. ಉದ್ಘಾಟನೆಗೊಂಡ ಬಳಿಕ ಒಂದೂವರೆ ತಿಂಗಳು ಚುನಾವಣ ಕೆಲಸಕ್ಕೆ ಬಳಕೆಯಾದ ತಾಲೂಕು ಆಡಳಿತ ಸೌಧ ಮತ್ತೆ ಎಂದಿನಂತೆ ಪರಿಸ್ಥಿತಿ ಇದೆ. ಕೂಡಲೇ ಸಂಬಂಧಪಟ್ಟ ಕಚೇರಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಒಂದೇ ಸೂರಿನಡಿ ಸರಕಾರಿ ಸೇವೆ ಒದಗಿಸಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
2018ರಲ್ಲಿ ಕಾಪು ತಾಲೂಕು ಉದ್ಘಾಟನೆಗೊಂಡಿದ್ದು, ಅಂದೇ ತಾಲೂಕು ಕಚೇರಿ ಕಟ್ಟಡಕ್ಕೂ ಶಿಲಾನ್ಯಾಸ ನೆರವೇರಿತ್ತಾದರೂ ಕಾಮಗಾರಿ ಮಾತ್ರ ಆರಂಭಗೊಂಡಿರಲಿಲ್ಲ. 2019-20ರಲ್ಲಿ 10 ಕೋ. ರೂ. ಅನುದಾನ ಸಹಿತವಾಗಿ ಮಿನಿ ವಿಧಾನಸೌಧ ಮಂಜೂರಾಗಿದ್ದು 2021ರಲ್ಲಿ ಶಿಲಾನ್ಯಾಸ ನೆರವೇರಿ, ಕಾಮಗಾರಿ ಆರಂಭಗೊಂಡಿತ್ತು. 2023 ಮಾ. 17ರಂದು ಕಾಪು ಮಿನಿ ವಿಧಾನಸೌಧ (ತಾಲೂಕು ಆಡಳಿತ ಸೌಧ) ಉದ್ಘಾಟನೆಗೊಂಡಿತು.
ತಪ್ಪದ ಅಲೆದಾಟ
ಒಂದೇ ಸೂರಿನಡಿಯಲ್ಲಿ ಎಲ್ಲ ಇಲಾಖೆಗಳ ಸೇವೆ ನೀಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ 2018ರಲ್ಲೇ ಕಾಪು ತಾಲೂಕು ಘೋಷಣೆಯಾಗಿತ್ತಾದರೂ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಬಾರದೇ ಇದ್ದುದರಿಂದ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲ್ಲಿಂದ ಇಲ್ಲಿಗೆ – ಇಲ್ಲಿಂದ ಅಲ್ಲಿಗೆ ಅಲೆದಾಡಬೇಕಾದ ಅನಿವಾರ್ಯತೆಯಿತ್ತು. ರಾ.ಹೆ. 66ರ ಬಳಿಯ ಪುರಸಭೆ ಹಳೆ ಕಟ್ಟಡದಲ್ಲಿ ತಾಲೂಕು ಆಡಳಿತ ಕಚೇರಿ, ತಹಶೀಲ್ದಾರ್ ಕಚೇರಿ ತೆರೆದಿದ್ದರೂ ಕಂದಾಯ ನಿರೀಕ್ಷಕರ ಕಚೇರಿ ಮಾತ್ರ ಪುರಸಭೆ ಆಡಳಿತ ಸೌಧ, ಸರ್ವೇ ಶಾಖೆ ಕಾಪು ಬಂಗ್ಲೆ ಮೈದಾನಲ್ಲಿ ಕಾರ್ಯಾಚರಿಸುತ್ತಿತ್ತು. ದಾಖಲೆಗಳ ಕೊಠಡಿ (ರೆಕಾರ್ಡ್ ರೂಂ) ಉಡುಪಿಯಲ್ಲೇ ಉಳಿದು ಬಿಟ್ಟಿತ್ತು. ಹಾಗಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ವಿವಿಧ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಬರುವ ಜನರಿಗೆ ಅಲೆದಾಟ ತಪ್ಪಿರಲಿಲ್ಲ.
10 ಕೋಟಿ ರೂ. ವೆಚ್ಚದ ನೂತನ ಕಟ್ಟಡ
ಕಾಪು ಬಂಗ್ಲೆ ಮೈದಾನದ ಬಳಿ 3.42 ಎಕರೆ ಜಮೀನಿನಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ – ತಾಲೂಕಾಡಳಿತ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರುಗೊಂಡು ಕಟ್ಟಡ ನಿರ್ಮಾಣಗೊಂಡಿದೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 2.857 ಚ. ಮೀ. ವಿಸ್ತಿರ್ಣದ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದೆ.
Related Articles
ನೂತನ ಸೌಧದಲ್ಲಿ ತಹಶೀಲ್ದಾರರ ಕಚೇರಿ ಸೇರಿದಂತೆ ಕೆಲವೇ ಕೆಲವು ಕಚೇರಿಗೆ ಅವಕಾಶವಿದೆ. ತಾಲೂಕು ಮಟ್ಟದ ಎಲ್ಲ ಕಚೇರಿಗಳು ಕಾಪುವಿಗೆ ಬರುವಂತಾಗಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಲೂಕು ಆಡಳಿತ ಸೌಧಕ್ಕೆ ಬೇಕಾದ ಮೂಲಸೌಕರ್ಯಗಳ ಜೋಡಣೆ, ಫರ್ನಿಚರ್, ತಾಂತ್ರಿಕ ವಯರಿಂಗ್ ಇತ್ಯಾದಿ ಜೋಡಣೆ ಬಾಕಿಯಿರುವುದರಿಂದ ಕಚೇರಿಗಳನ್ನು ಸ್ಥಳಾಂತರಗೊಳಿಸಿಲ್ಲ. ಜೂನ್ ತಿಂಗಳಿನಲ್ಲಿ ತಾಲೂಕು ಆಡಳಿತಕ್ಕೆ ಸಂಬಂಧಪಟ್ಟ ಬಹುತೇಕ ಕಚೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಸಾರ್ವಜನಿಕರಿಗೆ ಸೇವೆ ನೀಡಲಿವೆ.
– ಶ್ರೀನಿವಾಸ ಮೂರ್ತಿ ಕುಲಕರ್ಣಿ, ತಹಶೀಲ್ದಾರರು, ಕಾಪು ತಾಲೂಕು
ಈ ವಾರದಲ್ಲೇ ಶಾಸಕರ ಕಚೇರಿಗೆ ಪ್ರವೇಶೋತ್ಸವ ಮಾಡುವ ಇರಾದೆಯಿತ್ತು. ಅಧಿವೇಶನದ ಕಾರಣದಿಂದಾಗಿ ದಿನ ಮುಂದೂಡಲಾಗಿದ್ದು ಮುಂದಿನ ವಾರ ಶಾಸಕರ ಕಚೇರಿ ಉದ್ಘಾಟಿಸಲಾಗುವುದು. ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲ ಕಚೇರಿಗಳೂ ಶೀಘ್ರವಾಗಿ ಜನ ಸೇವೆಗೆ ತೆರೆದುಕೊಳ್ಳಲಿದ್ದು ತಾಲೂಕಿನ ಜನತೆಗೆ ಅಗತ್ಯವಾಗಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಸಹಿತ ತಾಲೂಕು ಮಟ್ಟದ ಎಲ್ಲ ಇಲಾಖೆಗಳು, ಕಚೇರಿಗಳನ್ನೂ ಆದ್ಯತೆಯ ಮೇರೆಗೆ ತಾಲೂಕು ಕೇಂದ್ರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು
-ರಾಕೇಶ್ ಕುಂಜೂರು